ಚಿತ್ರದುರ್ಗ: ಯಾರೋ ಹೇಳಿದಾಕ್ಷಣ ನಾಯಕತ್ವ ಬದಲಾಗದು. ಮುರುಗೇಶ್ ನಿರಾಣಿ ಓರ್ವ ಉದ್ಯಮಿ. ಹಾಗಾಗಿ ದೆಹಲಿಗೆ ಹೋಗಿರಬಹುದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಸೋಮವಾರ ಸಂಜೆ ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜತೆ ಅವರು ಮಾತನಾಡಿದರು. ನಾನು ನಾಳೆ, ನಾಡಿದ್ದು ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕಾಗಿ ದೆಹಲಿಗೆ ಹೋಗುತ್ತೇನೆ. ದೆಹಲಿಗೆ ಹೋದಾಕ್ಷಣ ರಾಷ್ಟ್ರೀಯ ನಾಯಕರು ಸಮಯ ನೀಡಿ ಮಾತನಾಡಿಸುತ್ತಾರೆ ಎಂಬುದು ಸುಳ್ಳು ಎಂದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯಾಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಹಾಗೂ ರಾಷ್ಟ್ರೀಯ ನಾಯಕರ ಸಂಬಂಧ ಬಹಳ ಹಳೆಯದು. ಬಿಎಸ್‌ವೈ ಎತ್ತರಕ್ಕೆ ಬರಲು ನೂರಾರು ಹೋರಾಟ, ಸಾವಿರಾರು ಕಿಮೀ ಪಾದಯಾತ್ರೆ ನಡೆಸಿದ್ದಾರೆ. ಅದೆಷ್ಟೋ ಬಾರಿ ಜೈಲು ಶಿಕ್ಷೆ ಅನುಭವಿಸಿದ್ದಾರೆ ಎಂಬುದನ್ನು ಮರೆಯಲಾಗದು ಎಂದು ತಿಳಿಸಿದರು.
ಬಿಎಸ್‌ವೈ ಪರವಾಗಿ 65 ಶಾಸಕರ ಸಹಿ ಸಂಗ್ರಹಿಸಿದ್ದು ಸತ್ಯ. ಹೈಕಮಾಂಡ್ ಸೂಚನೆ ಮೇರೆಗೆ ಅದನ್ನು ಅಲ್ಲಿಗೆ ನಿಲ್ಲಿಸಿದ್ದೇನೆ. ನಳಿನ್ ಕುಮಾರ್ ಕಟೀಲ್ ಹೆಸರಿನಲ್ಲಿ ನಕಲಿ ಆಡಿಯೋ ಮಾಡಲಾಗಿದೆ. ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದರು. ಇದೇ ವೇಳೆ ಮಾದಾರ ಚನ್ನಯ್ಯ ಸ್ವಾಮೀಜಿಯವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಆನಂತರ ಭೋವಿ ಗುರುಪೀಠಕ್ಕೆ ಭೇಟಿ ನೀಡಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರನ್ನು ಭೇಟಿಯಾದರು. ಡಾ| ಶಾಂತವೀರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಇದ್ದರು.