ಚಳ್ಳಕೆರೆ: ಎರಡನೇ ಹಂತದ ಕೊರೊನಾ ಸಂಘರ್ಷದ ನಡುವೆಯೂ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶಗಳ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಹೆಚ್ಚು ಆದ್ಯತೆ ನೀಡುತ್ತಿದೆ. ವಿಶೇಷವಾಗಿ ಬಡವರ ಅಭ್ಯುದಯಕ್ಕೆ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ತಾಲೂಕಿನ ಹಿರೇಹಳ್ಳಿ ಗ್ರಾಮದ ಕುಡಿಯುವ ನೀರಿನ ಸುಮಾರು 514 ಕೋಟಿ ರೂ. ವೆಚ್ಚದ ಪೈಪ್ ಲೈನ್ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು. ಸುಮಾರು ನಾಲ್ಕು ತಿಂಗಳಿನಿಂದ ಕೊರೊನಾ ನಿಯಂತ್ರಣ ಸರ್ಕಾರಕ್ಕೆ ಸವಾಲಾಗಿತ್ತು. ವೈದ್ಯರು ಮತ್ತು ಸಾರ್ವಜನಿಕರ ಸಹಕಾರದಿಂದ ಕೊರೊನಾ ಹೆಚ್ಚು ಆರ್ಭಟಿಸದಂತೆ ನಿಯಂತ್ರಿಸಲಾಯಿತು.
ವೈದ್ಯರು ಮತ್ತು ಸಿಬ್ಬಂದಿ ನಿರೀಕ್ಷೆಗೂ ಮೀರಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಅಪಾಯದಿಂದ ಜನರನ್ನು ರಕ್ಷಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲಸಿಕಾ ವಿತರಣಾ ಕಾರ್ಯಕ್ರಮವನ್ನು ಸಹ ಚುರುಕುಗೊಳಿಸಿದ್ದು, ಗ್ರಾಮಾಂತರ ಮಟ್ಟದಲ್ಲಿ ಲಸಿಕಾ ವಿತರಣೆ ಬಹುತೇಕ ಮುಕ್ತಾಯ ಹಂತದಲ್ಲಿದೆ ಎಂದರು. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೆಲವು ರಾಜಕೀಯ ನಾಯಕರು ಆರೋಪಿಸಿದ್ದಾರೆ.
ಆದರೆ ಈ ಕ್ಷೇತ್ರವನ್ನು ಬಹು ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷದ ಯಾವ ಶಾಸಕರೂ ಕ್ಷೇತ್ರಕ್ಕೆ ಶಾಶ್ವತ ನೀರು ತರುವಲ್ಲಿ ಯಶಸ್ವಿಯಾಗಲಿಲ್ಲ. ಕಳೆದ ವರ್ಷ ಮೊಳಕಾಲ್ಮೂರು ವಿಧಾನಸಭಾ ವ್ಯಾಪ್ತಿಯ ಗಡಿ ಗ್ರಾಮಗಳಿಗೆ ವಿವಿ ಸಾಗರದಿಂದ ವೇದಾವತಿ ಮೂಲಕ 0.25 ಟಿಎಂಸಿ ನೀರು ಹರಿಸಲಾಗಿದೆ.
ನೂತನ ಆಸ್ಪತ್ರೆ, ರಸ್ತೆ, ಅಂಗನವಾಡಿ ಕಟ್ಟಡ, ಸಮುದಾಯ ಭವನ ಸೇರಿದಂತೆ ನಿರಂತರವಾಗಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಮೇಲೆ ಜನರಿಗೆ ಅಪಾರವಾದ ವಿಶ್ವಾಸವಿದ್ದು, ವಿರೋಧ ಪಕ್ಷಗಳ ಟೀಕೆಗಳನ್ನು ಪರಿಗಣಿಸುವುದಿಲ್ಲವೆಂಬ ವಿಶ್ವಾಸವಿದೆ ಎಂದರು.
ಬಿಜೆಪಿಯ ತಳಕು-ನಾಯಕನಹಟ್ಟಿ ಮಂಡಲಾಧ್ಯಕ್ಷ ಈ. ರಾಮರೆಡ್ಡಿ, ಮೊಳಕಾಲ್ಮೂರು ಮಂಡಲಾಧ್ಯಕ್ಷ ಡಾ| ಮಂಜುನಾಥ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿ ರಾಮದಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ. ಜಯಪಾಲಯ್ಯ, ಬಿಜೆಪಿ ಮುಖಂಡರಾದ ಶಾರದಮ್ಮ, ಬಸವರಾಜು, ಎಚ್.ವಿ. ಪ್ರಕಾಶ್ ರೆಡ್ಡಿ, ಚನ್ನಗಾನಹಳ್ಳಿ ಮಲ್ಲೇಶ್, ನಾಗರಾಜು, ಸುನಂದಮ್ಮ, ಬೆಂಕಿ ಗೋವಿಂದಪ್ಪ, ಪಾಪೇಶ್ ಮತ್ತಿತರರು ಉಪಸ್ಥಿತರಿದ್ದರು.