ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಮಾನ್ಯತೆ ನೀಡುವ ಸಲುವಾಗಿ ಅಗತ್ಯವಿರುವ ಕಾಮಗಾರಿ ವೀಕ್ಷಣೆ, ಪರಿಶೀಲನೆ ನಡೆಸಲು ಕೇಂದ್ರ ಜಲಶಕ್ತಿ ಸಚಿವಾಲಯದ ಆಯುಕ್ತ ಎ.ಎಸ್. ಗೋಯಲ್ ಜಿಲ್ಲೆಗೆ ಆಗಮಿಸಿದ್ದಾರೆ.
ಶನಿವಾರ ಮಧ್ಯಾಹ್ನ ಜಿಲ್ಲೆಗೆ ಆಗಮಿಸಿದ ಗೋಯಲ್, ಜು. 12 ರವರೆಗೆ ಇಲ್ಲಿಯೇ ಇರಲಿದ್ದು, ಭದ್ರಾ ಮೇಲ್ದಂಡೆ ಯೋಜನೆಯ ಸಮಗ್ರ ಮಾಹಿತಿ ಪಡೆದು ಕಾಮಗಾರಿ ಪರಿಶೀಲನೆ ಮಾಡಲಿದ್ದಾರೆ. ಭದ್ರಾ ಮೇಲ್ದಂಡೆ ಕಚೇರಿಗೆ ಭೇಟಿ ನೀಡಿದ್ದ ಅವರು, ಕಾಮಗಾರಿ ನಡೆಯುತ್ತಿರುವ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಹಾಗೂ ಹೊಳಲ್ಕೆರೆ ತಾಲೂಕು ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ರಾಘವನ್ ಅವರು ಕೇಂದ್ರ ಜಲಶಕ್ತಿ ಸಚಿವಾಲಯದ ಆಯುಕ್ತರಿಗೆ ಇಡೀ ಯೋಜನೆಯ ಸಮಗ್ರ ವರದಿಯನ್ನು ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮ್ಯಾಪ್ ಹಿಡಿದು ವಿವರಿಸಿದರು.
ಮೊದಲ ದಿನ ಚಿತ್ರದುರ್ಗ ಶಾಖಾ ಕಾಲುವೆಯ 117ನೇ ಕಿಮೀಯಿಂದ 135ನೇ ಕಿಮೀವರೆಗೆ ನಾಲೆಯನ್ನು ವೀಕ್ಷಣೆ ಮಾಡಿದರು. ಈ ಮಾರ್ಗದಲ್ಲಿ ಬರುವ 518 ಮೀಟರ್ ಉದ್ದದ ಮೇಲ್ಗಾಲುವೆ ಕಾಮಗಾರಿ ವೀಕ್ಷಿಸಿದರು. ಇದೇ ವೇಳೆ ಕುಮಟಾ-ಕಡಮಡಗಿ ರಸ್ತೆ, ರಾಷ್ಟ್ರೀಯ ಹೆದ್ದಾರಿ 4ರ ಚಿತ್ರದುರ್ಗ ಬೈಪಾಸ್ ರಸ್ತೆಯಲ್ಲಿ ಹಾದು ಹೋಗುವ ಭದ್ರಾ ನಾಲೆ ಕಾಮಗಾರಿಯನ್ನೂ ವೀಕ್ಷಣೆ ಮಾಡಿದರು.
ಅತ್ಯಂತ ಸೂಕ್ಷ್ಮವಾಗಿರುವ ಗೇಲ್ ಕಂಪನಿ ನಿರ್ಮಿಸಿರುವ ಗ್ಯಾಸ್ ಪೈಪ್‌ಲೈನ್ ಹಾದು ಹೋಗುವ ಸ್ಥಳವನ್ನೂ ವೀಕ್ಷಿಸಿದ ಗೋಯಲ್, ತಜ್ಞರ ವರದಿಯಂತೆ ಅಲ್ಲಿ ಕಾಮಗಾರಿ ಆರಂಭಿಸುವ ವಿವರ ಪಡೆದರು. ಚಿತ್ರದುರ್ಗ-ರಾಯದುರ್ಗ ರೈಲ್ವೆ ಮಾರ್ಗದಲ್ಲೂ ಚಾನಲ್ ಹಾದು ಹೋಗಲಿದ್ದು, ರೈಲ್ವೆಯ ಹಳಿಯ ಕೆಳಗೆ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ರೈಲ್ವೆ ಇಲಾಖೆಗೆ 11 ಕೋಟಿ ರೂ. ಡೆಪಾಸಿಟ್ ಮಾಡಿದ್ದೇವೆ. ಈ ಕಾಮಗಾರಿಯನ್ನು ರೈಲ್ವೆ ಇಲಾಖೆಯವರೇ ನಿರ್ವಹಿಸಲಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು.
ಕೇಂದ್ರ ಸಚಿವ, ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಕಳೆದ ಜೂನ್ 22 ರಂದು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ಓರಾ ಅವರನ್ನು ಭೇಟಿ ಮಾಡಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸಿ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು. ಈ ಬೆಳವಣಿಗೆಯ ನಂತರ ಜಿಲ್ಲೆಗೆ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
21,473 ಕೋಟಿ ರೂ. ವೆಚ್ಚದ ಭದ್ರಾ ಮೇಲ್ದಂಡೆ ಕಾಮಗಾರಿ ಆದಷ್ಟು ಶೀಘ್ರದಲ್ಲಿ ರಾಷ್ಟ್ರೀಯ ಯೋಜನೆ ಮಾನ್ಯತೆ ಪಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾದರೆ ಕಾಮಗಾರಿ ವೆಚ್ಚದ ಶೇ.90 ರಷ್ಟನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಈ ವೇಳೆ ಅ ಧೀಕ್ಷಕ ಇಂಜಿನಿಯರ್ ಕೆ.ಎಂ. ಶಿವಪ್ರಕಾಶ್ ಸೇರಿದಂತೆ ಭದ್ರಾ ಮೇಲ್ದಂಡೆ ಯೋಜನೆಯ ಅ ಧಿಕಾರಿಗಳು ಉಪಸ್ಥಿತರಿದ್ದರು.