ಚಳ್ಳಕೆರೆ: ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಬಗ್ಗೆ ಜನತೆ ಭ್ರಮನಿರಸನಗೊಂಡಿದ್ದಾರೆ. ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ವಿಪರೀತ ಏರಿಕೆಯಾಗಿದ್ದು, ಬಡವರ ಬದುಕು ಬೀದಿಗೆ ಬಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಬೆಂಗಳೂರಿನಿಂದ ಬಳ್ಳಾರಿಗೆ ಹೋಗುವ ಮಾರ್ಗ ಮಧ್ಯೆ ನಗರದ ಶಾಸಕರ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿ ಆಡಳಿತದಿಂದ ಬೇಸತ್ತ ಜನರು ಕಾಂಗ್ರೆಸ್‌ನತ್ತ ಆಕರ್ಷಿತರಾಗುತ್ತಿದ್ದಾರೆ. ಹಾಗಾಗಿ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಏಳು ವರ್ಷಗಳಿಂದ ಬಿಜೆಪಿಯ ದುರಾಡಳಿತದಿಂದ ಜನರು ಬೇಸರಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಪಕ್ಷದ ಎಲ್ಲಾ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಸಂಘಟಿತರಾಗಿ ದುಡಿದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ಅಧಿಕಾರದ ಕನಸು ನನಸಾಗಲು ಸಾಧ್ಯ ಎಂದರು. ಶಾಸಕ ಟಿ. ರಘುಮೂರ್ತಿ ಮಾತನಾಡಿ, ಕಳೆದ ನೂರಾರು ವರ್ಷಗಳಿಂದ ರಾಷ್ಟ್ರದ ಎಲ್ಲಾ ವರ್ಗದ ಹಿತವನ್ನು ಕಾಯ್ದ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ ಪಕ್ಷದಲ್ಲಿ ನುರಿತ ಅನುಭವಿ ನಾಯಕರಿದ್ದು, ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಮುಂಬರುವ ದಿನಗಳಲ್ಲಿ ಎಲ್ಲಾ ಚುನಾವಣೆಗಳಲ್ಲೂ ಪಕ್ಷ ಗೆಲುವು ಸಾಧಿ ಸಲಿದೆ. ಕಾರ್ಯಕರ್ತರು ಬಿಜೆಪಿಯ ಅಪಪ್ರಚಾರಕ್ಕೆ ಕಿವಿಗೊಡದೆ ಪಕ್ಷದ ಏಳಿಗಾಗಿ ದುಡಿಯಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪ್ರಭುದೇವ್, ಎಸ್.ಎಚ್. ಸೈಯದ್, ಮಹಡಿ ಶಿವಮೂರ್ತಿ, ನಗರಸಭಾಧ್ಯಕ್ಷೆ ಬಿ.ಸಿ. ಜಯಲಕ್ಷ್ಮೀ ಕೃಷ್ಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಟಿ. ರಮೇಶ್ ಗೌಡ, ಸದಸ್ಯರಾದ ಚಳ್ಳಕೆರೆಯಪ್ಪ, ಕೆ. ವೀರಭದ್ರಪ್ಪ, ಎಂ.ಜೆ. ರಾಘವೇಂದ್ರ, ಮುಖಂಡರಾದ ಕಿರಣ್ ಶಂಕರ್, ಫರೀದ್ ಖಾನ್, ಆರ್. ಪ್ರಸನ್ನಕುಮಾರ್, ಭರಮಣ್ಣ, ಆಂಜನೇಯ, ಪರಸಪ್ಪ, ಜಿ. ವೀರೇಶ್, ಸತ್ಯಪ್ಪ, ದೊಡ್ಡರಂಗಪ್ಪ, ಅನ್ವರ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.