Advertisement

ಕೇಂದ್ರ-ರಾಜ್ಯ ಸರ್ಕಾರ ಕಾರ್ಯವೈಖರಿಗೆ ಕಾಂಗ್ರೆಸ್‌ ಕಿಡಿ

10:56 PM Jul 08, 2021 | Team Udayavani |

ಚಿತ್ರದುರ್ಗ: ಪೆಟ್ರೋಲ್‌, ಡೀಸೇಲ್‌ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ನಗರದಲ್ಲಿ ಸೈಕಲ್‌ ಜಾಥಾ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ರೈಲ್ವೆ ನಿಲ್ದಾಣದಿಂದ ಹೊರಟ ಸೈಕಲ್‌ ಜಾಥಾ ದಾವಣಗೆರೆ ರಸ್ತೆ, ಗಾಂಧಿ ವೃತ್ತ, ವಾಸವಿ ಮಹಲ್‌ ರಸ್ತೆ ಮೂಲಕ ಒನಕೆ ಓಬವ್ವ ವೃತ್ತ ತಲುಪಿತು.

Advertisement

ಜಾಥಾದಲ್ಲಿ ಕೆಪಿಸಿಸಿ ವಕ್ತಾರ ವಿ.ಎಸ್‌. ಉಗ್ರಪ್ಪ, ಮಾಜಿ ಸಚಿವ ಎಚ್‌. ಆಂಜನೇಯ ಸೇರಿದಂತೆ ಹಲವು ನಾಯಕರು ಸೈಕಲ್‌ನಲ್ಲಿ ಸಂಚರಿಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ, ಕೋವಿಡ್‌ ಸಂಕಷ್ಟಕ್ಕೆ ಸಿಲುಕಿದ ಜನರನ್ನು ಬೆಲೆ ಏರಿಕೆ ಸಮಸ್ಯೆಗೆ ದೂಡಿದೆ. ಜೀವನ ನಿರ್ವಹಣೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಮುಖೀಯಾಗಿದೆ. ಹಣದುಬ್ಬರ ನಿಯಂತ್ರಿಸುವ ಹೊಣೆಗಾರಿಕೆಯನ್ನು ಸರ್ಕಾರಗಳು ತೋರುತ್ತಿಲ್ಲ ಎಂದು ಆರೋಪಿಸಿದರು. 2014ರಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ ಗೆ 120 ಡಾಲರ್‌ ಇತ್ತು. ಆಗ ಪೆಟ್ರೋಲ್‌ 67 ರೂ. ಹಾಗೂ ಡೀಸೆಲ್‌ 63 ರೂ., ಅಡುಗೆ ಅನಿಲ 400 ರೂ. ಇತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್‌ ಗೆ 70 ಡಾಲರ್‌ ಇದೆ. ಆದರೆ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲದ ಬೆಲೆಯಲ್ಲಿ ಭಾರೀ ಏರಿಕೆ ಮಾಡಲಾಗಿದೆ.

ಜನಸಾಮಾನ್ಯರ ಬದುಕಿನ ಮೇಲೆ ಇದು ಪರಿಣಾಮ ಬೀರುತ್ತಿದೆ ಎಂದು ದೂರಿದರು. ಅಡುಗೆ ಎಣ್ಣೆ ಬೆಲೆ ಲೀಟರ್‌ ಗೆ 200 ರೂ. ತಲುಪಿದೆ. ಅಕ್ಕಿ, ರಾಗಿ, ಬೇಳೆ ಸೇರಿ ಜನಸಾಮಾನ್ಯರು ಬಳಕೆ ಮಾಡುವ ವಸ್ತುಗಳ ದರದಲ್ಲಿ ಏರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಯಾವುದೇ ಬದ್ಧತೆ ಇಲ್ಲ. ಭಾವನಾತ್ಮಕ ವಿಚಾರದಲ್ಲಿ ಉನ್ಮಾದ ಸೃಷ್ಟಿಸುವ ಬದಲು ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನಲ್ಲಿ ಪಂಚ ಕೌರವರಿದ್ದಾರೆ ಎಂಬ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಉಗ್ರಪ್ಪ, ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಈ‌ಶ್ವರಪ್ಪ ಅವರಿಗೆ ಜ್ಞಾನವಿದ್ದಂತೆ ಕಾಣುತ್ತಿಲ್ಲ. ಕೌರವರ ಸಂಖ್ಯೆ ಎಷ್ಟು ಎಂಬುದೇ ಅವರಿಗೆ ಗೊತ್ತಿಲ್ಲ. ಬೆಳಗಾವಿ ಸಾಹುಕಾರ ಹೆಣ್ಣಿನ ಮೋಹಕ್ಕೆ ಒಳಗಾದದ್ದು ಎಲ್ಲರಿಗೂ ಗೊತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಮಾಡುತ್ತಿರುವ ಅನಾಚಾರಗಳೂ ಬಹಿರಂಗವಾಗುತ್ತಿವೆ ಎಂದು ಕಿಡಿ ಕಾರಿದರು.

Advertisement

ಕೆಪಿಸಿಸಿ ವೀಕ್ಷಕರೂ ಆಗಿರುವ ವಿಧಾನಪರಿಷತ್‌ ಸದಸ್ಯ ನಾಸೀರ್‌ ಅಹಮ್ಮದ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌, ನಾಗರಾಜ್‌, ಮೋಹನ್‌ಬಾಬು, ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್‌. ಮಂಜುನಾಥ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next