ಚಿತ್ರದುರ್ಗ : ಸಣ್ಣ ನೀರಾವರಿ ಇಲಾಖೆ ತುಂತುರು ಹಾಗೂ ಹನಿ ನೀರಾವರಿಗೆ ಹೆಚ್ಚು ಒತ್ತು ನೀಡುತ್ತಿದೆ. ನೀರು ಭೂಮಿಯಿಂದ ಅವಿಯಾಗುವ ಪ್ರಮಾಣ ಕಡಿಮೆ ಮಾಡಬೇಕು. ಈ ನಿಟ್ಟಿನಲ್ಲಿ ಅಟಲ್ ಭೂ ಜಲ ಯೋಜನೆ ವ್ಯಾಪ್ತಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಗಳನ್ನು ತೊಡಗಿಸಿಕೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಮುರುಘಾ ಮಠದ ಅನುಭವ ಮಂಟಪದಲ್ಲಿ ಸೋಮವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಡಿಪಿಎಂಯು ಅಟಲ್ ಭೂಜಲ ಯೋಜನೆ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ “ಸುಸ್ಥಿರ ಅಂತರ್ಜಲ ನಿರ್ವಹಣೆಗಾಗಿ ಅಟಲ್ ಭೂಜಲ ಯೋಜನೆ’ ಕುರಿತು ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲೂಕುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಟಲ್ ಭೂ ಜಲ ಯೋಜನೆಗೆ ಕೇಂದ್ರ ಸರ್ಕಾರ 1100 ಕೋಟಿ ರೂ. ಅನುದಾನ ನೀಡಿದೆ.
ಇದರೊಟ್ಟಿಗೆ ಆಯಾ ಇಲಾಖೆಯ ಅನುದಾನವನ್ನು ಜೋಡಿಸಿಕೊಂಡು ಕೆಲಸ ಮಾಡಲಾಗುವುದು. ನರೇಗಾ ಅನುದಾನ ಬಳಕೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಅಂತರ್ಜಲ ವೃದ್ಧಿ ಹಾಗೂ ನೀರಿನ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು ಅಟಲ್ ಭೂಜಲ ಯೋಜನೆ ಜಾರಿಗೆ ತಂದಿದ್ದು, ಇದು ಸಂಪೂರ್ಣ ಸಮುದಾಯದ ಸಹಭಾಗಿತ್ವದಲ್ಲಿ ನಡೆಯಲಿದೆ. ಅಂತರ್ಜಲ ವೃದ್ಧಿಗೆ ಅಗತ್ಯವಿರುವ ಕಾಮಗಾರಿ ಗ್ರಾಮಸಭೆಗಳ ಮೂಲಕ ಆಯ್ಕೆ ಮಾಡಲಾಗುವುದು. ಮೊದಲ ಹಂತದಲ್ಲಿ ಮೇಲ್ಪೆ ನೀರು ಉಳಿಸಲು ಯೋಜನೆ ತಯಾರಿ, ನಂತರ ನೀರಿನ ಬಳಕೆಯ ಯೋಜನೆ ಹಾಗೂ ನೀರು ಸರಬರಾಜು ಮಾಡುವ ಬಗ್ಗೆ ಸಮಗ್ರ ಯೋಜನೆ ತಯಾರಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಇದಕ್ಕಾಗಿ ಎಲ್ಲೆಲ್ಲಿ ಅಂತರ್ಜಲ ಮಟ್ಟ ಹೇಗಿದೆ, ಅದು ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಎನ್‌ಜಿಒಗಳನ್ನು ನೇಮಕ ಮಾಡಿ ಭೂಮಿಯ ಅಂತರ್ಜಲದ ಬಗ್ಗೆ ಈಗಾಗಲೇ ಮಾಹಿತಿ ಪಡೆಯಲಾಗುತ್ತಿದೆ. ಪ್ರಕೃತಿಯಲ್ಲಿರುವ ಶೇ.2ರಿಂದ 3ರಷ್ಟು ನೀರನ್ನು ಮಾತ್ರ ಬಳಸುತ್ತಿದ್ದೇವೆ. ನೀರು ಮರು ಉತ್ಪತ್ತಿಯಾಗುವುದಿಲ್ಲ. ಆದರೆ ಅದನ್ನು ಮರುಬಳಕೆ ಮಾಡಬೇಕಿದೆ ಎಂದು ಮಾಧುಸ್ವಾಮಿ ಸಲಹೆ ನೀಡಿದರು. ಸೂಕ್ಷ ¾ ನೀರಾವರಿಗೆ ಕ್ರಮ: ನೀರಿನ ಸಂರಕ್ಷಣೆಗೆ ಸೂಕ್ಷ ನೀರಾವರಿ ಪದ್ಧತಿ ಅಳಡಿಸಿಕೊಳ್ಳಬೇಕಾಗಿದ್ದು, ಇದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ನಾವು ವಾಟರ್ ಪಾಲಿಸಿ ಮಾಡಲು ಹೊರಟಿದ್ದೇವೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಪ್ರಸ್ತಾಪವಾಗಿತ್ತು. ಕೃಷಿಯಲ್ಲಿ ನೀರಿನ್ನು ಹಾಯಿಸುವ ಮೂಲಕ ಬೆಳೆಯುವ ಬೆಳೆಗೆ ಹೆಚ್ಚು ಪ್ರೋತ್ಸಾಹ ನೀಡದೆ ಎಲ್ಲ ಬೆಳೆಗಳಿಗೂ ಸೂಕ್ಷ ¾ಮತ್ತು ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.
ಅಡಿಕೆ ಬೆಳೆಗೆ ಹನಿ ನೀರಾವರಿ ಸಬ್ಸಿಡಿಗೆ ಕ್ರಮ: ಅಡಿಕೆ ಬೆಳೆಗೆ ಹನಿ ನೀರಾವರಿ ಸಬ್ಸಿಡಿ ನಿಲ್ಲಿಸಲಾಗಿದೆ. ಈ ಭಾಗದಲ್ಲಿ ಹೆಚ್ಚು ಅಡಿಕೆ ಬೆಳೆಯುತ್ತಿದ್ದು, ಅಡಿಕೆ ಬೆಳೆಗೆ ಹನಿ ನೀರಾವರಿ ಸಬ್ಸಿಡಿ ನೀಡುವಂತೆ ಇಲಾಖೆಯಿಂದ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ ಕ್ರಮವಹಿಸಲಾಗಿದೆ. ಸರ್ಕಾರ ಬೇಡಿಕೆ ಈಡೇರಿಸಿದರೆ ಅಡಿಕೆ ಬೆಳೆಗೆ ಹನಿ ನೀರಾವರಿ ಸಬ್ಸಿಡಿ ಮುಂದುವರೆಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರ ನಿಧಿಯಿಂದ 14 ಆಕ್ಸಿಜನ್ ಕಾನ್ಸ್‌ಂಟ್‌ಟ್ರೇಟಸ್ ಗಳನ್ನು ಜಿಲ್ಲಾ ಧಿಕಾರಿ ಕವಿತಾ ಎಸ್.ಮನ್ನಿಕೇರಿ ಮೂಲಕ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಶಾಸಕರಾದ ಎಂ.ಚಂದ್ರಪ್ಪ, ಗೂಳಿಹಟ್ಟಿ ಡಿ.ಶೇಖರ್, ಪೂರ್ಣಿಮಾ ಕೆ.ಶ್ರೀನಿವಾಸ್, ಟಿ.ರಘುಮೂರ್ತಿ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಎಂಎಲ್ಸಿಗಳಾದ ವೈ.ಎ. ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೀವನ್‌ಮೂರ್ತಿ, ಜಿಲ್ಲಾ ಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ಡಾ|ಕೆ.ನಂದಿನಿದೇವಿ ಮತ್ತಿತರರಿದ್ದರು.