ಚಿತ್ರದುರ್ಗ: ಪರಿಸರ ದಿನಾಚರಣೆ ಅಂಗವಾಗಿ ನಗರದ ಅಕ್ಕಮಹಾದೇವಿ ಸಮಾಜದ ಆವರಣದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರು ಪ್ರಧಾನಮಂತ್ರಿಗಳ ಮನ್ ಕೀ ಬಾತ್ ಆಲಿಸುತ್ತಾ ಬೀಜದುಂಡೆ(ಸೀಡ್‌ಬಾಲ್) ತಯಾರಿಸಿದರು. ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಸಸಿಗಳನ್ನು ನೆಡುವುದು ಮಾತ್ರ ಪರಿಸರ ದಿನಾಚರಣೆಯಲ್ಲ. ನೆಟ್ಟ ಸಸಿಗಳನ್ನು ಪೋಷಣೆ ಮಾಡಿ ಮರವಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಹಲವು ವರ್ಷಗಳಿಂದ ಪರಿಸರ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಬಹುತೇಕರು ಸಸಿ ನೆಟ್ಟ ನಂತರ ಮತ್ತೆ ಆ ಕಡೆ ತಿರುಗಿಯೂ ನೋಡುವುದಿಲ್ಲ. ಈ ಇದರಿಂದ ಪರಿಸರ ರಕ್ಷಣೆ ಆಗುವುದಿಲ್ಲ. ಅರಣ್ಯವೂ ಉಳಿಯುವುದಿಲ್ಲ. ಮಾನವನ ಅಗತ್ಯಕ್ಕೆ ಮರಗಳನ್ನು ಕಡಿಯಲಾಗುತ್ತದೆ, ಕಡಿಯುವಾಗ ಇರುವ ಆಸಕ್ತಿ ಬೆಳಸುವುದರಲ್ಲಿ ಇಲ್ಲವಾಗುತ್ತಿದೆ ಎಂದರು.
ನಾವು ಸಣ್ಣವರಾಗಿದ್ದಾಗಲೂ ಪರಿಸರ ದಿನಾಚರಣೆ ಮಾಡಲಾಗುತ್ತಿದೆ. ಆದರೆಲ, ಪರಿಸರ ಮಾತ್ರ ಇದ್ದ ಹಾಗೆಯೇ ಇದೆ. ಹೆಚ್ಚಾಗಿಲ್ಲ. ನಿಜವಾದ ಅರ್ಥದಲ್ಲಿ ಪರಿಸರ ಬೆಳೆದಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಆತ್ಮಾವಲೋಕನ ಮಾಡಿಕೊಂಡು, ನೆಟ್ಟ ಸಸಿಗಳನ್ನು ಬೆಳೆಸುವುದು ನಮ್ಮ ಜವಾಬ್ದಾರಿ ಎಂದು ಮುಂದುವರಿಯಬೇಕು ಎಂದು ಹೇಳಿದರು.
ಚಿತ್ರದುರ್ಗದಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಮರಗಳನ್ನು ಕಡಿಯಲಾಗಿದೆ. ಇದಕ್ಕೆ ಪರ್ಯಾಯವಾಗಿ ಸಸಿಗಳನ್ನು ನೆಡುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಮಾಡೋಣ. ಇದಕ್ಕೆ ಅಗತ್ಯವಿರುವ ಸಸಿಗಳು, ಗುಂಡಿ ತೆಗೆಸುವುದನ್ನು ಮಾಡಲಾಗುತ್ತದೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ನವೀನ್ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕಿದೆ. ಮಾನವನಿಗೆ ಅತ್ಯಗತ್ಯವಾಗಿರುವ ಆಮ್ಲಜನಕ ಮರಗಳಿಂದ ಮಾತ್ರ ದೊರೆಯುತ್ತದೆ ಎಂದರು. ಕೊರೊನಾ ಎರಡನೇ ಅಲೆಯಲ್ಲಿ ಜನ ಆಮ್ಲಜನಕಕ್ಕಾಗಿ ಪರದಾಡುವ ಸ್ಥಿತಿಯಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಮರಗಳನ್ನು ಬೆಳೆಸಿದರೆ ಮುಂದೆ ಇಂತಹ ಸಮಸ್ಯೆ ಉದ್ಭವವಾಗುವುದಿಲ್ಲ ಎಂದು ಹೇಳಿದರು.
ಮುಂದಿನ ದಿನಮಾನದಲ್ಲಿ ಬೂತ್ ಮಟ್ಟದಲ್ಲಿ ಮನಕಿ ಬಾತ್ ಕಾರ್ಯಕ್ರಮವನ್ನು ಎಲ್ಲರು ಕೇಳುವಂತಾಗಬೇಕಿದೆ. ಇದಕ್ಕೆ ಬೇಕಾದ ವಾತಾವರಣವನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಕಲ್ಪಿಸಬೇಕಿದೆ. ನರೇಂದ್ರ ಮೋದಿ ಪ್ರಧಾನಿಯಾದ ದಿನದಿಂದ ಈವರೆಗೆ ಮನ್ ಕೀ ಬಾತ್ ಮೂಲಕ ದೇಶದ ಜನರ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸಿದ್ದೇಶ್ ಯಾದವ್, ನಂದಿ ನಾಗರಾಜ್, ವೆಂಕಟೇಶ್ ಯಾದವ್, ಶೈಲಜಾ ರೆಡ್ಡಿ, ಹನುಮಂತಗೌಡ, ನಗರಾಧ್ಯಕ್ಷ ಶಶಿಧರ್, ವಕ್ತಾರ ನಾಗರಾಜ್ ಬೇದ್ರೆ ಮತ್ತಿತರರು ಭಾಗವಹಿಸಿದ್ದರು.