ಚಿತ್ರದುರ್ಗ : ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ನೌಕರರ ಚಳವಳಿಗೆ ಹೋಗಿದ್ದು ತಪ್ಪು. ಹಾಗಾಗಿ ಇನ್ನು ಮುಂದೆ ಕೋಡಿಹಳ್ಳಿ ಚಂದ್ರಶೇಖರ್ ಕರೆಯುವ ಸಭೆಗಳಿಗೆ ಹೋಗಬಾರದು ಎಂದು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಪ್ರವಾಸಿಮಂದಿರದಲ್ಲಿ ನಡೆದ ರೈತ ಸಂಘದ ಜಿಲ್ಲಾ ಸಮಿತಿ ಸಭೆಯಲ್ಲಿ ಪೆಟ್ರೋಲ್- ಡೀಸೆಲ್, ಬೆಲೆ ಏರಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಕೃಷಿ ಇಲಾಖೆಯಿಂದ ರೈತರಿಗೆ ವಿತರಣೆ ಮಾಡುತ್ತಿರುವ ತಾಡಪಾಲುಗಳು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಸರ್ಕಾರ ಬೆಂಬಲ ಬೆಲೆಯಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸುವ ಬಗ್ಗೆ ತೀರ್ಮಾನ ಸಮರ್ಪಕವಾಗಿ ಕೈಗೊಳ್ಳದಿದ್ದಲ್ಲಿ ಕೃಷಿ ಇಲಾಖೆ ಮುಂದೆ ಕೃಷಿ ಉತ್ಪನ್ನಗಳನ್ನು ಸುರಿದು ಪ್ರತಿಭಟನೆ ಮಾಡಬೇಕು. ರೈತರಿಗೆ ವಿತರಿಸುವ ಶೇಂಗಾ ಬೀಜ ಕಳಪೆಯಾಗಿದೆ, ಬಗರ್ ಹುಕುಂ ರೈತರಿಗೆ ಹಕ್ಕುಪತ್ರ ವಿತರಿಸಿಲ್ಲ, ರೈತರಿಗೆ ಬೆಳೆ ವಿಮೆ ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ, ಕರ್ನಾಟಕ ಗ್ರಾಮೀಣ ಬ್ಯಾಂಕ್ ರೈತರ ಸಾಲವನ್ನು ಬಡ್ಡಿ ರಹಿತವಾಗಿ ಸಾಲಿನಲ್ಲಿ ರಿಯಾಯಿತಿ ಕೊಟ್ಟು ಪಾವತಿಸಿಕೊಳ್ಳದಿದ್ದರೆ ಮರುಪಾವತಿ ಮಾಡುವುದನ್ನು ರದ್ದುಗೊಳಿಸಬೇಕು. ಮರಳು ಗಣಿಗಾರಿಕೆಯನ್ನು ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಮಾಡಬಾರದು.
ಜಿಲ್ಲೆಗೆ ಸಮಗ್ರ ನೀರಾವರಿ ಮಾಡುವ ಬಗ್ಗೆ ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಬಹಿರಂಗ ಸಭೆಯಲ್ಲಿ ಚರ್ಚೆ ಮಾಡಬೇಕು ಎಂದು ಚರ್ಚಿಸಿದರು.
ಜಿಲ್ಲೆಯಲ್ಲಿ ಅಳವಡಿಸಿರುವ ಗಾಳಿಯಂತ್ರಗಳು ಪರಿಸರ ವಿರೋ ಧಿಯಾಗಿವೆ ಅವುಗಳನ್ನು ಸ್ಥಗಿತಗೊಳಿಸಬೇಕು. ಜಿಲ್ಲೆಯಲ್ಲಿ ಮಧ್ಯವರ್ತಿಗಳಿಲ್ಲದ ರೈತರ ಸಂತೆ ಯೋಜನೆ ಅನುಷ್ಠಾನಗೊಳಿಸಬೇಕೆಂಬ ವಿಷಯಗಳೂ ಸಭೆಯಲ್ಲಿ ಚರ್ಚೆಯಾದವು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಪುನರಾಯ್ಕೆ ಮಾಡಲಾಯಿತು. ಸಭೆಯಲ್ಲಿ ರೈತ ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ, ಈಚಘಟ್ಟದ ಸಿದ್ಧವೀರಪ್ಪ, ಜಿ. ತಿಪ್ಪೇಸ್ವಾಮಿ, ಚಿಕ್ಕಬ್ಬಿಗೆರೆ ನಾಗರಾಜ್, ಡಿ.ಎಸ್.ಹಳ್ಳಿ, ಮಲ್ಲಿಕಾರ್ಜುನ್, ಪ್ರವೀಣ, ರಾಜಶೇಖರಪ್ಪ, ಬಸವನಗೌಡ, ಮಹೇಶ್, ಶ್ರೀಕಂಠಮೂರ್ತಿ, ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.