ಹೊಸದುರ್ಗ: ಪುರುಷ ಸಮಾಜ ಮಹಿಳೆಯರ ಬಗೆಗಿನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು. ಆಗ ಮನುಕುಲದ ಉದ್ಧಾರ ಸಾಧ್ಯ ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸಾಣೇಹಳ್ಳಿ ಮಠದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದ ಮೊದಲನೇ ದಿನವಾದ ಭಾನುವಾರ ನಡೆದ “ಮಹಿಳೆಯರು ಮತ್ತುಸಾಮಾಜಿಕ ಜವಾಬ್ದಾರಿ’ ಕುರಿತು ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. 12ನೆಯ ಶತಮಾನದಲ್ಲಿ ಶರಣರು ಮಹಿಳೆಯರಿಗೆ ಕೊಟ್ಟಷ್ಟು ಸ್ವಾತಂತ್ರ್ಯವನ್ನು ಪ್ರಪಂಚಲ್ಲಿ ಯಾರೂ ಕೊಟ್ಟಿಲ್ಲ. ಶರಣರು “ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ’ ಎನ್ನುವ ಮೂಲಕ ಸ್ತ್ರೀ ಪುರುಷರಲ್ಲಿ ಸಮಾನತೆಯನ್ನು ಸಾಧಿಸಿದರು. ಪರಧನ, ಪರಸ್ತ್ರೀ ಬೇಡವೆಂಬ ಛಲವಿರಬೇಕು, ಪರ ವಧುವನ್ನು ಮಹಾದೇವಿ ಎಂದು ಭಾವಿಸಬೇಕು ಎಂದಿದ್ದಾರೆ. ಶರಣರ ಇಂಥ ಮಾತುಗಳನ್ನು ಸಾಕ್ಷತ್ಕಾರ ಮಾಡಿಕೊಂಡರೆ ಸ್ತ್ರೀ ಪುರುಷ ಎನ್ನುವ ಅಂತರ ಹೊರಟು ಹೋಗುವುದು ಎಂದರು.
ಎಸ್. ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಎಸ್. ಕಲ್ಮಠ್ ಮಾತನಾಡಿ, ಕೇಂದ್ರ ಸರಕಾರದ “ಒಂದು ದೇಶ ಒಂದು ಕಾನೂನು’ ಯೋಜನೆ ಸ್ಥಳೀಯ ಭಾಷೆಗಳ ಉಳಿವಿಗೆ ಮಾರಕವಾಗಿದೆ. ರಾಜ್ಯದ ಜಿಎಸ್‌ಟಿ ತೆರಿಗೆಯಪಾಲನ್ನು ಕೇಂದ್ರ ಸರಕಾರ ನೀಡಬೇಕು. ರಾಷ್ಟ್ರೀಯ ಕೃಷಿ ನೀತಿ, ಮಾರುಕಟ್ಟೆ ನೀತಿ,ಶಿಕ್ಷಣ ನೀತಿಯಲ್ಲಿ ಪೂರಕ ಅಂಶಗಳಿರುವಂತೆ ಮಾರಕ ಅಂಶಗಳೂ ಇವೆ. ಇವುಗಳ ಬಗ್ಗೆ ನಾವು ಜಾಗರೂಕರಾಗಿರಬೇಕಿದೆ ಎಂದರು.
ಅಧ್ಯಾಪಕಿ ಪಿ.ಎಲ್. ಸಂಧ್ಯಾ “ಮಹಿಳೆಯರು ಮತ್ತು ಸಾಮಾಜಿಕ ಜವಾಬ್ದಾರಿ’ ವಿಷಯದ ಕುರಿತು ಮಾತನಾಡಿ, ಅಭಿವೃದ್ಧಿಹೊಂದಿದ ದೇಶಗಳಲ್ಲಿ ಮಹಿಳೆ ಸ್ವತಂತ್ರಳು. ಆದರೆ ಭಾರತೀಯ ಪರಂಪರೆಯಲ್ಲಿಮಹಿಳೆಯ ಪಾತ್ರ ಕುಟುಂಬದ ಜವಾಬ್ದಾರಿಗೆ ಮಾತ್ರ ಸೀಮಿತವಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ಅಪಲ, ಮೈತ್ರೇಯಿ, ಗಾಗೇìಯಿ, ಲೋಕಮುದ್ರೆ ಮುಂತಾದ ಮಹಿಳೆಯರು ಪುರುಷ ಋಷಿ, ಮುನಿಗಳಿಗೆ ಸಮಾನವಾಗಿ ಚಿಂತನೆಯನ್ನು ನಡೆಸುತ್ತಿದ್ದರು ಎನ್ನುವ ಉಲ್ಲೇಖವಿದೆ. 12ನೇ ಶತಮಾನದಲ್ಲಿ ಬಸವಣ್ಣ “ಅಕ್ಕನಿಗಿಲ್ಲದ ಜನಿವಾರ ನನಗೆ ಬೇಡ’ ಎನ್ನುವ ಮೂಲಕಮೊದಲ ಮಹಿಳಾಪರ ಚಿಂತಕರಾಗಿದ್ದಾರೆ. ಸಾವಿತ್ರಿಬಾಯಿ ಬಾಫುಲೆ ಮೊದಲ ಮಹಿಳಾ ಶಿಕ್ಷಕಿ. ಪುರುಷ ಸಮಾಜವೇ ಅವಳ ವಿರುದ್ಧ ನಿಂತರೂ ಕಷ್ಟಗಳನ್ನು ಎದುರಿಸಿದರು. ಕಿರಣ್, ಮಜುಂದಾರ್ ಷಾ, ಸುಧಾಮೂರ್ತಿಯಂಥ ಯಶಸ್ವಿ ಮಹಿಳೆಯರು ನಮ್ಮ ಮುಂದೆ ಇದ್ದಾರೆ. ಇಂದು ಗ್ರಾಮೀಣ ಮಹಿಳೆಯರ ಮೇಲಿನ ಕೆಲಸದ ಒತ್ತಡಗಳು ಜಾಸ್ತಿಯಾಗಿ ವೈಯಕ್ತಿಕ ಆರೋಗ್ಯವನ್ನೂ ಕಡೆಗಣಿಸಿರುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ನಮ್ಮ ಪ್ರಾಚೀನ ಪರಂಪರೆಯಲ್ಲಿ ಮಹಿಳೆಯರಿಗೆಸಮಾನ ಗೌರವ, ಸ್ಥಾನಮಾನ ನೀಡಿರುವಾಗಈ ಆಧುನಿಕ 21ನೇ ಶತಮಾನದಲ್ಲಿ ಹೀಗೇಕೆ ಎಂದು ಪುರುಷ ಪ್ರಧಾನ ಸಮಾಜ ಯೋಚಿಸಬೇಕಿದೆ ಎಂದರು.