Advertisement

ವಿವಿ ಸಾಗರದಲ್ಲಿ 100 ಅಡಿ ನೀರು ಸಂಗ್ರಹ

06:28 PM Jul 21, 2021 | Team Udayavani |

„ಶಿವಶಂಕರ್‌ ಮಠದ್‌

Advertisement

ಹಿರಿಯೂರು: ಮಲೆನಾಡಿನಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ವೇದಾವತಿ ನದಿ ಮೈದುಂಬಿ ಹರಿಯುತ್ತಿದ್ದು, ವಾಣಿವಿಲಾಸ ಸಾಗರ ಜಲಾಶಯದಲ್ಲಿ ಮಂಗಳವಾರ 101.10 ಅಡಿ ನೀರು ಸಂಗ್ರಹಗೊಂಡಿದೆ. ಈ ವರ್ಷ ಮಳೆಗಾಲದ ಆರಂಭದಲ್ಲೇ ಉತ್ತಮವಾಗಿ ಮಳೆಯಾಗಿತ್ತು. ಕಳೆದ ಜು. 7 ರಿಂದ ಭದ್ರಾ ಜಲಾಶಯದ ನೀರನ್ನು ವಿವಿ ಸಾಗರಕ್ಕೆ ಹರಿಸಲಾಗುತ್ತಿದ್ದು, ಪ್ರತಿ ನಿತ್ಯ 500 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿದೆ.

ಹೀಗಾಗಿ ಜಲಾಶಯದಲ್ಲಿ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ವಾರದಿಂದಸುರಿಯುತ್ತಿರುವ ಮಳೆಯಿಂದಾಗಿ ವೇದಾವತಿ ನದಿ ದಡದ ಸುತ್ತಮುತ್ತಲಿನ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಭದ್ರಾ ಜಲಾಶಯ ತುಂಬಲು ಕೇವಲ 26 ಅಡಿ ಬಾಕಿ ಇದೆ. ಈ ಬಾರಿ ವಾಣಿವಿಲಾಸ ಸಾಗರದಲ್ಲಿ 110 ರಿಂದ 115 ಅಡಿ ನೀರು ಸಂಗ್ರಹವಾಗಬಹುದು ಎಂಬುದು ರೈತರ ಲೆಕ್ಕಾಚಾರ.

ಜಲಾಶಯದಿಂದ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಚಿತ್ರದುರ್ಗ ತಾಲೂಕುಗಳಿಗೆ ಪ್ರತಿ ನಿತ್ಯ ನೀರು ಪೂರೈಕೆ ಮಾಡಿದರೂ ತೊಂದರೆಯಾಗದು ಎನ್ನಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ ಗಿರಿಯಲ್ಲಿ ಉದಯವಾದ ವೇದಾವತಿ ನದಿ ತರೀಕೆರೆ ತಾಲೂಕಿನ ಅಜ್ಜಂಪುರ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಹರಿದು ವಿವಿ ಸಾಗರ ಸೇರುತ್ತದೆ.

ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಅವರು ತಮ್ಮ ತಾಯಿಯ ಸ್ಮರಣಾರ್ಥ 1907ರಲ್ಲಿ ಮಾರಿಕಣಿವೆ ಎಂಬಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಆಣೇಕಟ್ಟೆ ನಿರ್ಮಿಸಿದರು. ಜಲಾಶಯ ನಿರ್ಮಾಣವಾಗಿ 113 ವರ್ಷಗಳು ಕಳೆದಿದ್ದರೂ ಜಲಾಶಯದ ಸೊಬಗು, ಸೌಂದರ್ಯ ಮಾತ್ರ ಮಾಸಿಲ್ಲ. 130 ಅಡಿ ನೀರು ಸಂಗ್ರಹ ಸಾಮರ್ಥ್ಯ ಇರುವ ಈ ಜಲಾಶಯ ಒಂದು ಬಾರಿ ಮಾತ್ರ ಕೋಡಿ ಬಿದ್ದಿದೆ.

Advertisement

ಜಲಾಶಯದ ಸುತ್ತ ಬೆಟ್ಟ ಗುಡ್ಡಗಳು ನೋಡುಗರ ಕಣ್ಮನ ಸೆಳೆಯುವಂತಿವೆ. ಪ್ರವಾಸೋದ್ಯಮ ಇಲಾಖೆ ಇಲ್ಲಿ ಉದ್ಯಾನವನ, ತಂಗುದಾಣ ನಿರ್ಮಿಸಿ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ಧಿಪಡಿಸಿದರೆ ಉತ್ತಮ ಪ್ರವಾಸಿ ತಾಣವಾಗುವ ಎಲ್ಲಾ ಸಾಧ್ಯತೆಗಳೂ ಇವೆ.

ಬಯಲುಸೀಮೆ ಜನರ ಆಧಾರಸ್ತಂಭ

ವಾಣಿವಿಲಾಸಸಾಗರ ಜಲಾಶಯ ಬಯಲುಸೀಮೆ ಜನರ ಜೀವನದ ಆಧಾರಸ್ತಂಭವಾಗಿದೆ. ಅಡಿಕೆ, ತೆಂಗು, ಭತ್ತ, ರಾಗಿ, ಬಾಳೆಯಂತಹ ತೋಟಗಾರಿಕೆ ಬೆಳೆಗಳಿಗೆ ಜೀವಜನವಾಗಿದೆ. ಮಳೆ ಇಲ್ಲದೆ ಸದಾ ಬರಗಾಲಕ್ಕೆ ತುತ್ತಾಗಿದ್ದ ರೈತರು ಲಕ್ಷಾಂತರ ತೆಂಗಿನಮರಗಳನ್ನು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದರು.

ನೀರಿಗಾಗಿ ಕಳೆದ 12 ವರ್ಷಗಳಿಂದ ಹೋರಾಟ, ಪ್ರತಿಭಟನೆ ಧರಣಿಗಳನ್ನು ನಡೆಸಲಾಗಿದೆ. ಇದೆಲ್ಲರ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆಯಿಂದ ಕಳೆದ ಒಂದು ವರ್ಷದಿಂದ ವಿವಿ ಸಾಗರಕ್ಕೆ ನೀರು ಹರಿದು ಬರುವಂತಾಗಿದೆ. ಕಾಮಗಾರಿ ಪೂರ್ಣಗೊಂಡರೆ ಹೆಚ್ಚಿನ ಪ್ರಮಾಣದ ನೀರು ವಿವಿ ಸಾಗರಕ್ಕೆ ಹರಿದು ಬರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next