ಚಳ್ಳಕೆರೆ: ತಾಲೂಕಿನ ಸಾವಿರಾರು ರೈತರಿಗೆ ಬೆಳೆ ವಿಮೆ ಪರಿಹಾರ ದೊರೆತಿಲ್ಲ. ಕಳೆದ ವರ್ಷ ಹಾಗೂ ಪ್ರಸ್ತುತ ವರ್ಷದ ನಷ್ಟ ಪರಿಹಾರವೂ ಸಿಗದೇ ಇರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ರೈತರು ಈಗಾಗಲೇ ಖಾಸಗಿ ಬೆಳೆ ವಿಮಾ ಕಂಪನಿಗಳಿಗೆ ಬೆಳೆ ವಿಮೆ ಹಣ ಪಾವತಿ ಮಾಡಿದ್ದು, ವಿಮಾ ಕಂಪನಿಗಳಿಂದ ರೈತರಿಗೆ ನ್ಯಾಯಯುತವಾಗಿ ಬರಬೇಕಾದ ಪರಿಹಾರವನ್ನು ಕೂಡಲೇ ಕೊಡಿಸಿಕೊಡುವಂತೆ ಶಾಸಕ ಟಿ. ರಘುಮೂರ್ತಿ, ಕೃಷಿ ಇಲಾಖೆ ಆಯುಕ್ತರು ಹಾಗೂ ಕೃಷಿ ನಿರ್ದೇಶಕರಿಗೆ ಮನವಿ ಮಾಡಿದರು.
ಬುಧವಾರ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಹಾಗೂ ರೈತ ಮುಖಂಡರೊಂದಿಗೆ ಬೆಂಗಳೂರಿನ ಕೃಷಿ ಇಲಾಖೆ ಆಯುಕ್ತರ ಕಚೇರಿಗೆ ತೆರಳಿ ಖಾಸಗಿ ಬೆಳೆ ವಿಮಾ ಕಂಪನಿಗಳಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಕೈಕೊಟ್ಟಿದೆ. ಪ್ರಸ್ತುತ ವರ್ಷ ಸಕಾಲದಲ್ಲಿ ಮಳೆ ಬಾರದ್ದರಿಂದ ಬೆಳೆ ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ರೈತರು ಖಾಸಗಿ ಬೆಳೆ ವಿಮಾ ಕಂಪನಿಗಳಿಗೆ ಕೃಷಿ ಇಲಾಖೆಯ ಸಲಹೆಯಂತೆ ಸಾವಿರಾರು ರೈತರು ಲಕ್ಷಾಂತರ ರೂಪಾಯಿಗಳನ್ನು ಖಾಸಗಿ ವಿಮಾ ಖಾಸಗಿ ಕಂಪನಿಗಳಿಗೆ ಪಾವತಿ ಮಾಡಿದ್ದಾರೆ. ಈ ಹಿಂದೆ ರೈತರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಹಣ ಪಾವತಿ ಮಾಡುವ ಬಗ್ಗೆ ಭರವಸೆ ನೀಡಿ ಈಗ ನಿರ್ಲಕ್ಷé ತೋರಲಾಗುತ್ತಿದೆ.
ಮುಂಗಾರು ಹಂಗಾಮು ಪ್ರಾರಂಭವಾಗಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಬೆಳೆ ಬಿತ್ತಲಾರದ ಸ್ಥಿತಿ ತಲುಪಿಸಿದ್ದಾರೆ. ಕೂಡಲೇ ಬೆಳೆ ವಿಮೆ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್‌ಕುಮಾರ್ ದೀಕ್ಷಿತ್ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಆದಷ್ಟು ಬೇಗ ಖಾಸಗಿ ವಿಮಾ ಕಂಪನಿಯ ಹಣ ರೈತರಿಗೆ ಬಿಡುಗಡೆ ಆಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್, ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ರೈತ ಮುಖಂಡರಾದ ಬಡಗಲಪುರ ನಾಗೇಂದ್ರಪ್ಪ, ಮಂಜುನಾಥ ರೆಡ್ಡಿ, ಜಗದೀಶ್, ಮತ್ಸಮುದ್ರ ಜಯಣ್ಣ, ಬುಡ್ಡಾ ರೆಡ್ಡಿ, ರಾಜಣ್ಣ, ತಿಮ್ಮಾರೆಡ್ಡಿ, ಕ್ಯಾತಣ್ಣ, ತಿಪ್ಪೇಸ್ವಾಮಿ ಮತ್ತಿತರರು ಇದ್ದರು.