Advertisement

ಚಿತ್ತಾಪುರ-ಜೇವರ್ಗಿ ಇನ್ನಷ್ಟು ಹತ್ತಿರ

01:39 PM Sep 07, 2018 | |

ವಾಡಿ: ತೂತು ದೋಣಿಯಲ್ಲಿ ಕುಳಿತು ನದಿ ದಾಟಿ ಸರಕಾರಿ ಶಾಲೆ ಸೇರುತ್ತಿದ್ದ ಚಾಮನೂರು ಗ್ರಾಮದ ಮಕ್ಕಳಿಗೆ ಕೊನೆಗೂ ಸೇತುವೆ ಭಾಗ್ಯ ಒದಗಿಬಂದಿದ್ದು, ಕಾಮಗಾರಿ ಚುರುಕಿನಿಂದ ಸಾಗಿದೆ.

Advertisement

ಚಿತ್ತಾಪುರ ತಾಲೂಕಿನ ಚಾಮನೂರು ಹಾಗೂ ಜೇವರ್ಗಿ ತಾಲೂಕಿನ ನರಿಬೋಳಿ ಗ್ರಾಮಗಳ ನಡುವೆ ಹರಿಯುವ ಭೀಮಾ ನದಿ ಎರಡು ರಾಜ್ಯಗಳ ನಡುವಿನ ಗಡಿ ರೇಖೆಯಂತಾಗಿ ಸಾರಿಗೆ ಸಂಪರ್ಕ ಸಂಕಟದಿಂದ ಕೂಡಿತ್ತು. ಚಾಮನೂರಿನ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು, ನದಿಯಾಚೆಗಿನ ನರಿಬೋಳಿ ಗ್ರಾಮದ ಸರಕಾರಿ ಶಾಲೆಯನ್ನೇ
ಆಶ್ರಯಿಸಿದ್ದರು. ಕೃಷಿ ಸಲಕರಣೆ, ರಸಗೊಬ್ಬರ, ಬೀಜಗಳನ್ನು ತರಲು ರೈತರು ದೋಣಿ ಮೂಲಕವೇ ಪಯಣಿಸಿ ನರಿಬೋಳಿ ಮಾರ್ಗವಾಗಿ ಜೇವರ್ಗಿಗೆ ಹೋಗುತ್ತಿದ್ದರು. ಶಿಕ್ಷಕರು ಶಾಲೆ ತಲುಪಲು ಹರಸಾಹಸ ಪಡುತ್ತಿದ್ದರು. ಸರಿಯಾದ ಸಮಯಕ್ಕೆ ನಾವಿಕರು ಲಭ್ಯವಾಗದೆ ವಿದ್ಯಾರ್ಥಿಗಳು ನದಿ ದಂಡೆಯಲ್ಲೇ ಕುಳಿತು ಅನುಭವಿಸುತ್ತಿದ್ದ ತೊಂದರೆ ನಿವಾರಣೆಗೆ ಕಾಲ ಕೂಡಿಬಂದಿದ್ದು, ಉಭಯ ಗ್ರಾಮಸ್ಥರಲ್ಲಿ ಹರ್ಷ ಮೂಡಿದೆ.

ಚಿತ್ತಾಪುರ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಜೇವರ್ಗಿ ಶಾಸಕ ಡಾ| ಅಜಯಸಿಂಗ್‌ ಪ್ರಯತ್ನದಿಂದ ರಾಜ್ಯ ಸರಕಾರ ಚಾಮನೂರ-ನರಿಬೋಳಿ ಮಧ್ಯೆ ಸೇತುವೆ ನಿರ್ಮಾಣಕ್ಕೆ 5000 ಲಕ್ಷ ರೂ. ಮಂಜೂರಾಗಿದ್ದು, ಕಾಮಗಾರಿಗೆ ಚಾಲನೆ ದೊರೆತಿದೆ. ಈ ಮೂಲಕ ಶತಮಾನಗಳಿಂದ ಕಾಡುತ್ತಿದ್ದ ಸಾರ್ವಜನಿಕ ಸಮಸ್ಯೆಯೊಂದಕ್ಕೆ ಮುಕ್ತಿ ದೊರಕಿದಂತಾಗಿದೆ.

ಅಕ್ಟೋಬರ್‌ 2017ರಲ್ಲಿ ಸೇತುವೆ ನಿರ್ಮಾಣಕ್ಕೆ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅಡಿಗಲ್ಲು ಹಾಕಿದ್ದರು. 18 ತಿಂಗಳಲ್ಲಿ ಸೇತುವೆ ಬಳಕೆಗೆ ಮುಕ್ತಗೊಳಿಸುವುದಾಗಿ ಭರವಸೆ ಕೊಟ್ಟು ಕಾಮಗಾರಿ ಆರಂಭಿಸಿರುವ ಹೈದರಾಬಾದ ಮೂಲದ ಕೆಎಂವಿ ಗುತ್ತಿಗೆದಾರ ಕಂಪನಿ, ನದಿಯೊಳಗೆ ನಿರ್ಮಿಸಬೇಕಾದ ಒಟ್ಟು 17 ಪಿಲ್ಲರ್‌ಗಳಲ್ಲಿ ಸದ್ಯ ಆರು ಪಿಲ್ಲರ್‌ ನಿರ್ಮಿಸಿದ್ದು, ಉಳಿದ ಕಾಮಗಾರಿ ಭರದಿಂದ ಸಾಗಿದೆ.

ಚಿತ್ತಾಪುರ ಮತ್ತು ಜೇವರ್ಗಿ ತಲುಪಲು 41 ಕಿ.ಮೀ ಸುತ್ತಿ ಬರಬೇಕಿತ್ತು. ಸೇತುವೆ ನಿರ್ಮಾಣವಾದಿಂದ ವಾಡಿ, ನಾಲವಾರ, ಮದ್ರಿ, ನರಿಬೋಳಿ, ಕಟ್ಟಿಸಂಗಾವಿ, ಆಂದೋಲಾ, ಮಲ್ಲಾ, ಜೇವರ್ಗಿ, ಚಿತ್ತಾಪುರ ಸೇರಿದಂತೆ ಒಟ್ಟು 26ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ 26 ಕಿ.ಮೀ ಅಂತರ ಕಡಿಮೆಯಾಗಲಿದೆ. ನಿಗದಿತ ಕಾಲಾವಕಾಶದಲ್ಲಿ ಸೇತುವೆ ಕಾಮಗಾರಿ ಪೂರ್ಣವಾಗಿ ಸಾರಿಗೆ ಸಂಚಾರಕ್ಕೆ ಚಾಲನೆ ದೊರೆತರೆ ಚಿತ್ತಾಪುರ-ಜೇವರ್ಗಿ ಇನ್ನಷ್ಟು ಹತ್ತಿರವಾಗಲಿವೆ.

Advertisement

ಚಿತ್ತಾಪುರ ಹಾಗೂ ಸೇಡಂ ತಾಲೂಕಿನ ಜನರು ಜೇವರ್ಗಿ ಹಾಗೂ ವಿಜಯಪುರ ನಗರಗಳಿಗೆ ವಾಡಿ ಪಟ್ಟಣದ ಮಾರ್ಗವಾಗಿ ಪ್ರಯಾಣಿಸಲು ಚಾಮನೂರು ಮತ್ತು ನರಿಬೋಳಿ ಮಧ್ಯೆ ನಿರ್ಮಿಸಲಾಗುತ್ತಿರುವ ಭೀಮಾ ಬ್ರಿಡ್ಜ್ ಅತ್ಯಂತ ಅನುಕೂಲಕರ ಆಗಲಿದೆ. ನಾಡದೋಣಿ ಮೂಲಕ ಆತಂಕದ ಪಯಣ ಮಾಡಿ ಜೀವಭಯ ಎದುರಿಸುತ್ತಿದ್ದ ಜನರು ನಿಟ್ಟುಸಿರು ಬಿಡುವಂತಾಗಿದೆ. ಸೇತುವೆ ಮಂಜೂರು ಮಾಡಿಸುವ ಮೂಲಕ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಗಂಭೀರ ಸಮಸ್ಯೆಯೊಂದನ್ನು ಬಗೆಹರಿಸಿದ್ದಾರೆ. 
 ಸಿದ್ದಯ್ಯಶಾಸ್ತ್ರೀ ನಂದೂರಮಠ, ಕಸಾಪ ಗೌರವ ಕಾರ್ಯದರ್ಶಿ, ವಾಡಿ

„ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next