Advertisement

ಮುರುಕಲು ಮನೆಯಾದ ಶಾಲಾ ಕೊಠಡಿ!

11:37 AM Jul 29, 2019 | Naveen |

ಹರಿಯಬ್ಬೆ ಹೆಂಜಾರಪ್ಪ
ಚಿತ್ರದುರ್ಗ:
ಸರ್ಕಾರಿ ಶಾಲೆ ಉಳಿಸಿ ಬೆಳೆಸಿ, ಆಂಗ್ಲ ಭಾಷೆ ವ್ಯಾಮೋಹ ಬಿಡಿ ಎನ್ನುವುದು ಘೋಷಣೆಗಷ್ಟೇ ಸೀಮಿತವಾಗುತ್ತದೆಯೇ ವಿನಃ ಕಾರ್ಯರೂಪಕ್ಕೆ ಬರುತ್ತಿಲ್ಲ. ಅದೇ ರೀತಿ 1962ನೇ ಸಾಲಿನಲ್ಲಿ ನಿರ್ಮಾಣ ಮಾಡಲಾಗಿರುವ ಸಾವಿರಾರು ಮಕ್ಕಳು ಕಲಿತ ಕುಗ್ರಾಮದಲ್ಲಿನ ಸರ್ಕಾರಿ ಶಾಲೆಯ ಕೊಠಡಿ ಶಿಥಿಲಾವಸ್ಥೆ ತಲುಪಿದ್ದರೂ ಸಂಬಂಧಿಸಿದವರು ಗಮನ ನೀಡುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

Advertisement

ಹಿರಿಯೂರು ತಾಲೂಕಿನ ದಿಂಡಾವರ ಗ್ರಾಪಂ ವ್ಯಾಪ್ತಿಯ ವೀರವ್ವನಾಗುತಿಹಳ್ಳಿಯ ಸರ್ಕಾರಿ ಕಿರಿಯ

ಪ್ರಾಥಮಿಕ ಶಾಲೆ ಯಾವಾಗ ಬೇಕಾದರೂ ಕುಸಿದು ಬೀಳುವ ಅಪಾಯ ಎದುರಿಸುತ್ತಿದೆ. ಶಾಸಕರ ನಿಧಿ, ಸಂಸದರ ನಿಧಿ, ವಿಧಾನ ಪರಿಷತ್‌ ಸದಸ್ಯರ ನಿಧಿ ಸೇರಿದಂತೆ ಸರ್ಕಾರಿ ಅನುದಾನವಿದ್ದರೂ ಈ ಶಾಲೆಯ ಕೊಠಡಿ ನಿರ್ಮಾಣಕ್ಕೆ ನೀಡುತ್ತಿಲ್ಲ. ಯಾರಾದರೂ ಜನಪ್ರತಿನಿಧಿ ಐದೋ, ಹತ್ತೋ ಲಕ್ಷ ರೂ. ಅನುದಾನ ನೀಡಿ ಹೊಸ ಕೊಠಡಿ ನಿರ್ಮಿಸಿದ್ದರೆ ಈ ಶಾಲೆಗೆ ಇಂದು ಇಂತಹ ದುಸ್ಥಿತಿ ಬರುತ್ತಿರಲಿಲ್ಲ. ಬಹುತೇಕ ಜನಪ್ರತಿನಿಗಳಿಗೆ ಶಾಲಾ ಕೊಠಡಿ, ಕಟ್ಟಡಗಳಿಗೆ ಅನುದಾನ ನೀಡಲು ಮನಸ್ಸು ಬರುವುದಿಲ್ಲ. ಅವರು ಏನಿದ್ದರೂ ಹೈಮಾಸ್ಟ್‌ ಲೈಟ್, ಚರಂಡಿ, ರಸ್ತೆ ನಿರ್ಮಾಣ, ದೇವಸ್ಥಾನಗಳಿಗೆ ಅನುದಾನ ನೀಡುತ್ತಾರೆ. ಆದರೆ ಮಕ್ಕಳನ್ನು ಪ್ರಜ್ಞಾವಂತರನ್ನಾಗಿಸುವ ಶಾಲೆಗಳಿಗೆ ಅನುದಾನ ನೀಡುವವವರು ವಿರಳ.

ವೀರವ್ವನಾಗುತಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5ನೇ ತರಗತಿ ತನಕ ತರಗತಿ ನಡೆಯುತ್ತವೆ. ಐದು ತರಗತಿಗಳಿರುವ ಈ ಶಾಲೆಯಲ್ಲಿ ಸದ್ಯ 38 ಮಕ್ಕಳು ಕಲಿಯುತ್ತಿದ್ದಾರೆ. ಇಬ್ಬರು ಶಿಕ್ಷಕರು 1 ರಿಂದ 5ನೇ ತರಗತಿಯವರೆಗೆ ಬೋಧನೆ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಎರಡು ಕೊಠಡಿಗಳು ಮಾತ್ರ ಇದ್ದು ಎರಡರಲ್ಲೊಂದು ಮುರುಕಲಾಗಿದೆ. ಇರುವ ಒಂದೇ ಕೊಠಡಿಯಲ್ಲಿ ಎಲ್ಲ ತರಗತಿಯ ಮಕ್ಕಳು ಪಾಠ ಕೇಳಬೇಕು. ಅಲ್ಲದೆ ಇಬ್ಬರು ಶಿಕ್ಷಕರು ಒಂದೇ ಕೊಠಡಿಯಲ್ಲಿ ಯಾವ ರೀತಿ ಬೋಧನೆ ಮಾಡುತ್ತಾರೆ ಎಂಬುದನ್ನು ಆ ದೇವರೇ ಬಲ್ಲ.

ಮೂಲ ಸೌಕರ್ಯಗಳಿಲ್ಲದೆ ಸಂಪೂರ್ಣ ಮುರುಕಲು ಮನೆಯಂತಾಗಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಪುನಶ್ಚೇತನಕ್ಕೆ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರು ಮುಂದಾಗಬೇಕಿದೆ. ಒಂದೊಂದು ಕೊಠಡಿಗೆ ಅನುದಾನ ನೀಡಿದರೆ ಸುಂದರವಾದ ಬೋಧನಾ ಕೊಠಡಿಗಳನ್ನು ನಿರ್ಮಿಸಬಹುದು. ಆದರೆ ಇಚ್ಛಾಶಕ್ತಿ ಕೊರತೆಯಿಂದಾಗಿ ಕೊಠಡಿ ಭಾಗ್ಯ ಲಭ್ಯವಾಗುವುದು ಅನುಮಾನ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ವೀರವ್ವನಾಗುತಿಹಳ್ಳಿ ಶಾಲೆಗೆ ಕಾಯಕಲ್ಪ ನೀಡಬೇಕಿದೆ.

ಗ್ರಾಮಸ್ಥರ ಮನವಿಗೆ ಸ್ಪಂದನೆಯೇ ಇಲ್ಲ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೊಠಡಿಯ ದುರಸ್ತಿಗಾಗಿ ಕಳೆದ ಮೂರು ವರ್ಷದಿಂದ ಅಧಿಕಾರಿಗಳಿಗೆ ಗ್ರಾಮಸ್ಥರು ಅರ್ಜಿ ಸಲ್ಲಿಸಿದರೂ ಸ್ಪಂದನೆ ವ್ಯಕ್ತವಾಗಿಲ್ಲ. ಬಿಸಿಲು-ಮಳೆಯಲ್ಲಿ ಮಕ್ಕಳು ಹೊರಗಡೆ ಕುಳಿತು ಪಾಠ ಕೇಳಬೇಕು. ವೀರವ್ವನಾಗುತಿಹಳ್ಳಿ ಗ್ರಾಮದಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುವಷ್ಟು ಸ್ಥಿತಿವಂತರಲ್ಲ. ಆಂಧ್ರ ಗಡಿ ತಾಲೂಕಿನ ಶಾಲೆಗೆ ಸೌಲಭ್ಯ ಕಲ್ಪಿಸುವುದು ತುರ್ತು ಅಗತ್ಯ.
ಶಿಥಿಲಾವಸ್ಥೆಯಲ್ಲಿ ಕೊಠಡಿ ತೆರವುಗೊಳಿಸುವಂತೆ ಅನುಮತಿ ಮತ್ತು ಆದೇಶ ನೀಡಲಾಗಿದೆ. ಶೀಘ್ರದಲ್ಲೇ ಕೊಠಡಿ ತೆರವು ಮಾಡಲಾಗುತ್ತದೆ. ಅಲ್ಲದೆ ನೂತನ ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ.
ನಟರಾಜ್‌,
ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ.
Advertisement
Advertisement

Udayavani is now on Telegram. Click here to join our channel and stay updated with the latest news.

Next