ಚಿತ್ರದುರ್ಗ: ಮದ್ಯ ನಿಷೇಧಿಸುವಂತೆ ಆಗ್ರಹಿಸಿ ಮದ್ಯ ನಿಷೇಧ ಆಂದೋಲನ-ಕರ್ನಾಟಕ, ಸ್ವಾಭಿಮಾನಿ ವುಮನ್ಸ್ ವೆಲ್‌ಫೇರ್ ಅಸೋಸಿಯೇಷನ್, ಸ್ಫೂರ್ತಿ ವಿಕಲಚೇತನರ ಟ್ರಸ್ಟ್ ಚಿತ್ರದುರ್ಗ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯಾದ್ಯಂತ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಜಿಲ್ಲಾಡಳಿತ ಇದಕ್ಕೆ ತಡೆ ಹಾಕಬೇಕು. ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ, ಕೊಳಗೇರಿ ಪ್ರದೇಶಗಳಲ್ಲಿ ಹಾಗೂ ಕೆಲವು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ದಿನನಿತ್ಯ ಕೂಲಿ ಮಾಡಿ ದುಡಿಯುವ ಹಣವನ್ನು ಕುಡಿತಕ್ಕೆ ಹಾಕುತ್ತಿದ್ದಾರೆ. ಇದರಿಂದ ಮನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಉಪವಾಸವಿರುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಳ್ಳಿಗಾಡಿನಲ್ಲಿ ಮದ್ಯದ ಹಾವಳಿಯಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಮದ್ಯ ನಿಷೇಧ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮದ್ಯ ನಿಷೇಧ ಆಂದೋಲನದ ಜಿಲ್ಲಾ ಸಂಚಾಲಕಿ ಬೀಬಿಜಾನ್ ಮಾತನಾಡಿ, ರಾಜ್ಯದಲ್ಲಿ ಮದ್ಯ ನಿಷೇಧಿಸುವಂತೆ ಮದ್ಯ ನಿಷೇಧ ಆಂದೋಲನ-ಕರ್ನಾಟಕದ ನೇತೃತ್ವದಲ್ಲಿ ಚಿತ್ರದುರ್ಗದಿಂದ ಬೆಂಗಳೂರಿಗೆ ಮಹಿಳೆಯರು ಪಾದಯಾತ್ರೆ ನಡೆಸಿದ್ದರು. ಮುಖ್ಯಮಂತ್ರಿ ಎಚ್.ಡಿ. ಮಾರಸ್ವಾಮಿಯವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮದ್ಯ ಮಾರಾಟ ನಿಷೇಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮದ್ಯ ನಿಷೇಧ ಆಂದೋಲನ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಬೆರಳೆಣಿಕೆಯಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ಮಹಿಳೆಯರನ್ನು ಅವಮಾನಿಸಲಾಗಿದೆ. ರಾಜಕೀಯದಲ್ಲಿ ಶೇ. 33 ರಷ್ಟು ಮೀಸಲಾತಿ ನೆಪ ಮಾತ್ರಕ್ಕೆ ಘೋಷಣೆಯಾಗಿದೆ. ಎಲ್ಲಾ ರಂಗದಲ್ಲಿಯೂ ಪುರುಷರಿಗೆ ಸರಿಸಮಾನವಾಗಿ ದುಡಿಯುತ್ತಿರುವ ಮಹಿಳೆಗೆ ಅಧಿಕಾರ ನೀಡಲು ಎಲ್ಲ ಪಕ್ಷಗಳು ಹಿಂದೇಟು ಹಾಕುತ್ತಿವೆ. ಈ ಮೂಲಕ ಮಹಿಳೆಯನ್ನು ರಾಜಕೀಯವಾಗಿ ಬೆಳೆಯಲು ಬಿಡದೆ ಹತ್ತಿಕ್ಕುವ ಹುನ್ನಾರ ನಡೆಸುತ್ತಿವೆ. ರಾಜ್ಯ ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಲೋಕಸಭೆ ಚುನಾವಣೆಯಲ್ಲಿ ನೋಟಾಕ್ಕೆ ಮತ ಚಲಾಯಿಸಲಾಗುವುದು ಎಂದರು.
ರೈತ ಮುಖಂಡ ಈ.ಎನ್. ಲಕ್ಷ್ಮೀಕಾಂತ್, ಟಿ.ವಿ. ಜಯಶೀಲ, ನಸ್ರಿನ್, ಶಾಕೀರ, ಶಾಮೀದಾ, ಮಮತಾ, ಮಂಜಮ್ಮ, ಲಲಿತಮ್ಮ, ಸಾಮಾಜಿಕ ಕಾರ್ಯಕರ್ತ ನರೇನಹಳ್ಳಿ ಅರುಣ್‌ಕುಮಾರ್ ಇದ್ದರು.