Advertisement

ಜಿಲ್ಲಾದ್ಯಂತ ಸಂಭ್ರಮದ ಈದ್‌-ಉಲ್-ಫಿತರ್‌

11:36 AM Jun 06, 2019 | Naveen |

ಚಿತ್ರದುರ್ಗ: ನಗರ ಹಾಗೂ ಜಿಲ್ಲಾದ್ಯಂತ ಮುಸ್ಲಿಂ ಸಮುದಾಯದವರು ಬುಧವಾರ ರಂಜಾನ್‌ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು.

Advertisement

ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಸಲಾಯಿತು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಲಾಯಿತು. ಕಳೆದ ಒಂದು ತಿಂಗಳಿಂದ ಮನೆಯಲ್ಲಿ ಮಕ್ಕಳಾದಿಯಾಗಿ ರೋಜಾ ಆಚರಣೆ ಮಾಡಲಾಯಿತು. ಆತ್ಮ ಶುದ್ಧಿಗೆ ಒತ್ತು ನೀಡಿ ತಮ್ಮ ಶಕ್ತ್ಯಾನುಸಾರ ಬಡ ಕುಟುಂಬಗಳಿಗೆ ದಾನ ಧರ್ಮ ಮಾಡಲಾಯಿತು.

ಚಿತ್ರದುರ್ಗದ ನೂರ್‌ ಮಸೀದಿ, ಉಮರ್‌ ಮಸೀದಿ, ಬಾರ್‌ಲೈನ್‌ ಮಸೀದಿ, ಆಲ್ ಮಸೀದಿ, ಶಾಫಿ ಮಸೀದಿ, ಚಂದ್ರವಳ್ಳಿ ಈದ್ಗಾ ಮೈದಾನ, ಆರ್‌ಎಂಸಿ ಯಾರ್ಡ್‌, ಅಗಸನಕಲ್ಲು ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಸಮುದಾಯದವರು ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಸೀದಿ ಮತ್ತು ಈದ್ಗಾ ಮೈದಾನಗಳ ಪ್ರಾರ್ಥನಾ ಸ್ಥಳದಲ್ಲಿ ಮುಸ್ಲಿಂ ಸಮಾಜದ ಧರ್ಮ ಗುರುಗಳಾದಿಯಾಗಿ, ಮಸೀದಿಗಳ ಮುತುವಲ್ಲಿಗಳು, ಸಮಾಜದ ಹಿರಿಯರು, ಕಿರಿಯರು, ಗಣ್ಯರು ಒಂದೆಡೆ ಸೇರಿ ರಂಜಾನ್‌ ಹಬ್ಬ ಆಚರಿಸಿದರು.

ರಂಜಾನ್‌ ಮಾಸದ ಅಂಗವಾಗಿ ಕಳೆದ 30 ದಿನಗಳಿಂದ ಮುಸ್ಲಿಂ ಸಮುದಾಯದವರು ಉಪವಾಸ ಮಾಡಿದ್ದರು. ಚಂದ್ರ ದರ್ಶನದ ನಂತರ ಉಪವಾಸ ಅಂತ್ಯಗೊಂಡಿತು. ನಗರದ ಹೊರವಲಯದ ಚಂದ್ರವಳ್ಳಿ ಈದ್ಗಾ ಮೈದಾನದಲ್ಲಿ ಮಹಿಳೆಯರು ಪ್ರಾರ್ಥನೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.

ಬಡವ-ಬಲ್ಲಿದ ಎನ್ನುವ ಭೇದ ಭಾವವಿಲ್ಲದೆ ಮನೆಗಳಿಗೆ ಭೇಟಿ ನೀಡಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರವಾದಿಯವರು ತಿಳಿಸಿರುವಂತೆ ಕಡ್ಡಾಯವಾಗಿ ತಮ್ಮ ದುಡಿಮೆಯಲ್ಲಿ ಶೇ. 2.5 ಭಾಗವನ್ನಾದರೂ ದಾನ, ಧರ್ಮ ಮಾಡುವುದು, ಅನ್ಯಾಯ, ಅಕ್ರಮ, ಅಸೂಯೆ, ಅಹಂಕಾರಗಳಿಲ್ಲದಂತೆ ಸರ್ವದೊಂದಿಗೆ ಪ್ರೀತಿ ವಿಸ್ವಾಸದಿಂದ ಬಾಳುವುದು ಈ ಹಬ್ಬದ ಮಹತ್ವ ಎಂದು ಸತ್ಯ ಸಂದೇಶ ಸಂಸ್ಥೆಯ ಮಹಮ್ಮದ್‌ ನೂರ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next