“ಒಂದೊಂದು ಹಾಡುಗಳು ಕೂಡಾ ಅದ್ಭುತವಾಗಿ ಮೂಡಿ ಬಂದಿದೆ, ಇದು ಖಂಡಿತಾ ಎಲ್ಲರೂ ಇಷ್ಟಪಡುವ ಸಿನಿಮಾವಾಗುತ್ತದೆ…’ -ಆಗಷ್ಟೇ ಜಾತ್ರೆ ಸೆಟಪ್‌ನ ಫೈಟ್ ಸೀನ್‌ನಲ್ಲಿ ಭಾಗಿಯಾಗಿ ಬಂದು ಕುಳಿತಿದ್ದ ಶಿವಣ್ಣ ಖುಷಿಯಿಂದ ಮಾತನಾಡುತ್ತಾ ಹೋದರು. ಅವರು ಹೇಳಿದ್ದು ತಮ್ಮ “ಬೈರಾಗಿ’ ಸಿನಿಮಾ ಬಗ್ಗೆ.
ಬನ್ನೇರುಘಟ್ಟದ ಚಂಪಕಧಾಮಸ್ವಾಮಿ ದೇವಸ್ಥಾನವ ವಠಾರದಲ್ಲಿ ಹಾಕಲಾದ ಸೆಟ್‌ನಲ್ಲಿ ಅವರ ಇಂಟ್ರೋಡಕ್ಷನ್ ಫೈಟ್ ಶೂಟ್ ನಡೆಯುತ್ತಿತ್ತು. ಕಲರ್‌ಫುಲ್ ಹಾಡಿನ ಚಿತ್ರೀಕರಣದ ಬಿಡುವಿನಲ್ಲಿ ಶಿವಣ್ಣ ಮಾತನಾಡುತ್ತಾ ಹೋದರು. “ಬೈರಾಗಿ ಸಿನಿಮಾ ಬೇರೆ ಲೆವೆಲ್ ಸಿನಿಮಾ. ಇದರಲ್ಲಿ ಆ್ಯಕ್ಷನ್ ಜೊತೆಗೆ ಭಾವನೆಗಳಿಗೆ ಹೆಚ್ಚು ಮಹತ್ವವಿದೆ. ನಿರ್ದೇಶಕರು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದಕ್ಕೂ ಕಾಂಪ್ರಮೈಸ್ ಆಗುವವರಲ್ಲ. ಅದಕ್ಕೆ ತಕ್ಕಂತೆ ಸಿನಿಮಾ ಕೂಡಾ ಅದ್ಧೂರಿಯಾಗಿ ಮೂಡಿಬರುತ್ತಿದೆ’ ಎಂದರು.
ಇನ್ನು, ಈ ಚಿತ್ರದಲ್ಲಿ ಡಾಲಿ ಧನಂಜಯ್, ಪೃಥ್ವಿ ಅಂಬರ್ ಸೇರಿದಂತೆ ಅನೇಕರು ನಟಿಸಿದ್ದಾರೆ. “ಎಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಧನಂಜಯ್‌ಗೂ ಒಳ್ಳೆಯ ಪಾತ್ರವಿದೆ. ಒಂದು ಸಿನಿಮಾ ಅಂದಮೇಲೆ ತುಂಬಾ ಜನ ಕಲಾವಿದರಿರ ಬೇಕು ಮತ್ತು ಎಲ್ಲರಿಗೂ ಸ್ಕೋಪ್ ಕೊಡಬೇಕು. ಫ್ರೇಮ್ ಟು ಫ್ರೇಮ್ ಹೀರೋ, ಸ್ಟಾರ್ ಒಬ್ಬನೇ ಇರುತ್ತೇನೆ ಎಂದರೆ ಆಗಲ್ಲ. ಅದು ಅಪ್ಪಾಜಿಗೆ ಮಾತ್ರ ಸೀಮಿತ. ಜನ ಫ್ರೇಮ್ ಟು ಫ್ರೇಮ್ ಅಪ್ಪಾಜಿಯನ್ನು ನೋಡಲು ಬಯಸುತ್ತಿದ್ದರು. ಆ ತರಹದ ಒಂದು ಸ್ಟಾರ್‌ಡಮ್ ಇದ್ದ ನಟ ಅಪ್ಪಾಜಿ. ಆದರೆ, ಈಗ ಕಾಲ ಬದಲಾಗಿದೆ, ಸ್ಟಾರ್ ಒಬ್ಬನೇ ಕಾಣಿಸಿಕೊಳ್ಳುತ್ತೇನೆ ಎಂದರೆ ಆಗಲ್ಲ’ ಎನ್ನುವುದು ಶಿವಣ್ಣ ಮಾತು.
ತಿಂಗಳಲ್ಲಿ ಮೂರು ದಿನ ಶಕ್ತಿಧಾಮಕ್ಕೆ ಮೀಸಲು: ಪಾರ್ವತಮ್ಮ ರಾಜ್‌ಕುಮಾರ್ ಅವರು ಆರಂಭಿಸಿರುವ ಮೈಸೂರಿನ ಶಕ್ತಿಧಾಮವನ್ನು ಈಗ ಗೀತಾ ಶಿವರಾಜ್‌ಕುಮಾರ್ ಅವರು ಮುಂದು ವರೆಸಿಕೊಂಡು ಹೋಗುತ್ತಿದ್ದಾರೆ. ಶಿವಣ್ಣ ಕೂಡಾ ಗೀತಾ ಅವರಿಗೆ ಸಾಥ್ ಕೊಡುತ್ತಿದ್ದು, ತಿಂಗಳಲ್ಲಿ ಮೂರು ದಿನವನ್ನು ಶಕ್ತಿಧಾಮಕ್ಕೆ ಮೀಸಲಿರಿಸಿದ್ದಾರೆ. “ಗೀತಾ ಶಕ್ತಿಧಾಮಕ್ಕಾಗಿ ಹೊಸ ಹೊಸ ಕಾರ್ಯಕ್ರಮ ರೂಪಿಸುತ್ತಿದ್ದಾಳೆ. ಬೇಕಿಂಗ್ ತರಬೇತಿ ಜೊತೆ ಹಲವು ಆಲೋಚನೆಗಳು ಇವೆ. ತಿಂಗಳಲ್ಲಿ ಮೂರು ದಿನ ಅದಕ್ಕಾಗಿ ನಾನೂ ಮೀಸಲಿರಿಸಿದ್ದೇನೆ. ಶಕ್ತಿಧಾಮದಲ್ಲಿರುವವರಿಗೂ ಒಂದು ಬದಲಾವಣೆ ಬೇಕಲ್ವಾ? ಅವರೂ ಬೇರೆ ಬೇರೆ ಚಟುವಟಿಕೆಗಳಲ್ಲಿ ಬೆರೆಯಬೇಕೆಂಬ ಆಶಯ ನಮ್ಮದು’ ಎನ್ನುತ್ತಾರೆ ಶಿವಣ
“ಜೇಮ್ಸ್’ನಲ್ಲಿ ಪುನೀತ್‌ಗೆ ಧ್ವನಿಯಾಗಲು ನಾನು ಸಿದ್ಧ: “ಜೇಮ್ಸ್’ ಚಿತ್ರದಲ್ಲಿನ ಪುನೀತ್ ಪಾತ್ರಕ್ಕೆ ಶಿವರಾಜ್‌ಕುಮಾರ್ ಡಬ್ಬಿಂಗ್ ಮಾಡುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಕೇಳಿದಾಗ ಶಿವಣ್ಣ ಕಣ್ಣಂಚು ಒದ್ದೆಯಾಯಿತು. “ಅಪ್ಪು ಇಲ್ಲ ಎಂಬುದನ್ನು ನನಗೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು, ಅವನು ಒಂದು ದಿನ ಕೂಡಾ ಜಗಳವಾಡಿಕೊಂಡಿಲ್ಲ. ಫ್ರೆಂಡ್ಸ್ ತರಹ ಇದ್ದವರು. ಈಗ ಅಪ್ಪು ಇಲ್ಲದೇ, ಅವನ ಪಾತ್ರಕ್ಕೆ ಧ್ವನಿ ನೀಡಬೇಕೆಂದಾಗ ಬೇಸರವಾಗುತ್ತದೆ. ಒಬ್ಬ ನಟನಾಗಿ, ವ್ಯಕ್ತಿಯಾಗಿ ಅಪ್ಪು ಸಾಧನೆ ದೊಡ್ಡದು. ಅವನ ಪಾತ್ರಕ್ಕೆ ಧ್ವನಿ ನೀಡಲು ನನಗೇನೂ ಅಭ್ಯಂತರವಿಲ್ಲ’ ಎನ್ನುತ್ತಾರೆ. “ಬೈರಾಗಿ’ ಚಿತ್ರದ ಲವ್ ಟ್ರ್ಯಾಕ್ ವೊಂದಕ್ಕೆ ಪುನೀತ್ ಹಾಗೂ ಶಿವಣ್ಣ ಒಟ್ಟಿಗೆ ಹಾಡಬೇಕಿತ್ತು. ಪುನೀತ್ ಕೂಡಾ ಒಪ್ಪಿಕೊಂಡಿದ್ದರಂತೆ.
ವೇದದತ್ತ ಶಿವಣ್ಣ: ಶಿವರಾಜ್‌ಕುಮಾರ್ ಅವರ ಬಹುನಿರೀಕ್ಷಿತ “ಬೈರಾಗಿ’ ಚಿತ್ರದ ಚಿತ್ರೀಕರಣ ಗುರುವಾರ (ಜ.13)ಕ್ಕೆ ಮುಗಿದಿದೆ. ಈ ನಡುವೆಯೇ ಶಿವಣ್ಣ ಅವರದ್ದೇ ನಿರ್ಮಾಣದ “ವೇದ’ ಶುರುವಾಗಿದೆ. ಬೆಂಗಳೂರಿನಲ್ಲಿ ಒಂದು ಶೆಡ್ನೂಲ್ ಮುಗಿಸಿರುವ ಈ ಚಿತ್ರ ಮುಂದೆ ಮೈಸೂರು, ಸೋಮವಾರ ಪೇಟೆಯಲ್ಲಿ ಚಿತ್ರೀಕರಣ ನಡೆಯಲಿದೆ.
ರವಿಪ್ರಕಾಶ್ ರೈ