ಇಲ್ಲಿ “ಏಪ್ರಿಲ್’ ಅನ್ನೋದು ಸಿನಿಮಾದಲ್ಲಿ ಬರುವ ಪಾತ್ರವೊಂದರ ಹೆಸರಾಗಿದೆ. ಸಿನಿಮಾಕ್ಕೆ ಯಾಕೆ ಈ ಟೈಟಲ್ ಇಡಲಾಗಿದೆ, ಟೈಟಲ್ ವಿಶೇಷತೆಯೇನು ಅನ್ನೋದನ್ನು ಹೀರೋ ಮೂಲಕ ಹೇಳಿಸುತ್ತಾ, ಅದಕ್ಕೊಂದು ಸಮರ್ಥನೆ ಕೊಡಲಾಗಿದೆ.
ಸದ್ಯ ಈ ವರ್ಷ ಒಂದರ ಹಿಂದೊಂದು ಚಿತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬರುವ ಪ್ಲಾನ್‌ನಲ್ಲಿರುವ ನಟ ಚಿರಂಜೀವಿ ಸರ್ಜಾ ಅವರ ಸಿನಿಮಾ ಲಿಸ್ಟ್‌ಗೆ ಈಗ ಇನ್ನೊಂದು ಹೊಸ ಸಿನಿಮಾ “ಏಪ್ರಿಲ್’ ಸೇರ್ಪಡೆಯಾಗುತ್ತಿದೆ. ಹೌದು, ಚಿರಂಜೀವಿ ಸರ್ಜಾ ಅಭಿನಯದ “ಖಾಕಿ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಇದರ ನಡುವೆಯೇ ಚಿರು ಅಭಿನಯದ ಹೊಸಚಿತ್ರ “ಏಪ್ರಿಲ್’ ಸೆಟ್ಟೇರಿದೆ. ಇತ್ತೀಚೆಗೆ “ಏಪ್ರಿಲ್’ ಚಿತ್ರದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನೆರವೇರಿದ್ದು, ಸದ್ಯ ಬಿಡುಗಡೆಯಾಗಿರುವ “ಏಪ್ರಿಲ್’ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಗಮನ ಸೆಳೆಯುತ್ತಿದೆ.
ಈ ಹಿಂದೆ ರಚಿತಾ ರಾಮ್ ಅಭಿನಯದಲ್ಲಿ “ಏಪ್ರಿಲ್’ ಎಂಬ ಟೈಟಲ್‌ನಲ್ಲಿ ಮಹಿಳಾ ಪ್ರಧಾನ ಚಿತ್ರ ಶುರುವಾಗಲಿದೆ ಎಂಬ ವಿಷಯ ಸುದ್ದಿಯಾಗಿದ್ದು, ಗೊತ್ತಿರಬಹುದು. ಅದೇ ಕಥೆ ಈಗ ಮತ್ತೂಂದು ಸ್ವರೂಪದಲ್ಲಿ ಈಗ ಸಿನಿಮಾವಾಗುತ್ತಿದೆ. ಅಂದಹಾಗೆ, ಈ ಚಿತ್ರದಲ್ಲಿ ರಚಿತಾ ರಾಮ್ ಅವರೇ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಆದರೆ ಈ ಹಿಂದೆ ಅಂದುಕೊಂಡಂತೆ ಮಹಿಳಾ ಪ್ರಧಾನ ಕಥೆ ಆಧಾರಿತ ಸಿನಿಮಾ ಇದಾಗಿರುವುದಿಲ್ಲ ಎನ್ನುವುದು ಚಿತ್ರತಂಡದ ಸ್ಪಷ್ಟನೆ. ಒಟ್ಟಾರೆ ಕಳೆದ ಕೆಲ ತಿಂಗಳಿನಿಂದ ಕನ್ನಡಕ್ಕಿಂತ ಹೆಚ್ಚಾಗಿ ಟಾಲಿವುಡ್ ಅಂಥ ಓಡಾಡಿಕೊಂಡಿದ್ದ ರಚಿತಾ ರಾಮ್, ಮತ್ತೆ “ಏಪ್ರಿಲ್’ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು ಮೊದಲಾದ ಕಲಾವಿದರು “ಏಪ್ರಿಲ್’ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.
ನವ ಪ್ರತಿಭೆ ಸತ್ಯ ರಾಯಲ “ಏಪ್ರಿಲ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸತ್ಯ, “ಇದೊಂದು ಆಕ್ಷನ್-ಥ್ರಿಲ್ಲರ್ ಕಧಾಹಂದರದ ಸಿನಿಮಾವಾಗಿದೆ. ಇಲ್ಲಿ “ಏಪ್ರಿಲ್’ ಅನ್ನೋದು ಸಿನಿಮಾದಲ್ಲಿ ಬರುವ ಪಾತ್ರವೊಂದರ ಹೆಸರಾಗಿದೆ. ಸಿನಿಮಾಕ್ಕೆ ಯಾಕೆ ಈ ಟೈಟಲ್ ಇಡಲಾಗಿದೆ, ಟೈಟಲ್ ವಿಶೇಷತೆಯೇನು ಅನ್ನೋದನ್ನು ಹೀರೋ ಮೂಲಕ ಹೇಳಿಸುತ್ತಾ, ಅದಕ್ಕೊಂದು ಸಮರ್ಥನೆ ಕೊಡಲಾಗಿದೆ. ಜೊತೆಗೆ ಅಲಂಕಾರಿಕವಾಗಿ ಅರ್ಥವನ್ನು ಈ ಟೈಟಲ್ ಹೇಳುತ್ತದೆ. ಸಿನಿಮಾದ ಒಂದು ಕಡೆ ಒಂದು ಪೊಲೀಸ್ ಅಧಿಕಾರಿ ನಾಯಕಿಯನ್ನು ಹುಡುಕುತ್ತಿದ್ದರೆ, ಮತ್ತೂಂದು ಕಡೆ ಆಕೆ ಮಗುವಿಗೋಸ್ಕರ ಪರಿತಪಿಸುತ್ತಿರುತ್ತಾಳೆ.
ಅದು ಹೇಗೆ ಅನ್ನೋದನ್ನ ಸ್ಕ್ರೀನ್ ಮೇಲೇ ನೋಡಬೇಕು. ಹೀಗೆ ಒಂದಷ್ಟು ಕುತೂಹಲದ ನಡುವೆ ಇಡೀ ಸಿನಿಮಾ ಸಾಗುತ್ತದೆ. ಈ ಹಿಂದೆ ಇದೇ ಹೆಸರಿನಲ್ಲಿ ಮಹಿಳಾ ಪ್ರಧಾನ ಚಿತ್ರ ಮಾಡಬೇಕಿತ್ತು. ಆದರೆ ಅದಕ್ಕೆ ಬಜೆಟ್ ಜಾಸ್ತಿಯಾಗುವುದರಿಂದ, ಮತ್ತೂಂದು ಮಾದರಿಯಲ್ಲಿ ಕಥೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದೇವೆ. ಪರಿಕಲ್ಪನೆ ಹಳೆಯದೇ ಆಗಿದ್ದರೂ, ಇದೊಂದು ಪಕ್ಕಾ ಕಮರ್ಷಿಯಲ್ ಸ್ಟೈಲ್‌ನಲ್ಲಿ ಬರುತ್ತಿರುವ ಸಿನಿಮಾ’ ಎಂದು ವಿವರಣೆ ನೀಡುತ್ತಾರೆ.
ಇನ್ನು ಈ ಚಿತ್ರದಲ್ಲಿ ಚಿರು ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಚಿತಾರಾಂ ಪಾತ್ರದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಚಿತ್ರದ ನಾಲ್ಕು ಹಾಡುಗಳಿಗೆ ಸಚ್ಚಿನ್ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಗಿರೀಶ್.ಆರ್ ಗೌಡ ಛಾಯಾಗ್ರಹಣ, ಪ್ರತೀಕ್ ಶೆಟ್ಟಿ ಸಂಕಲನ, ಹರೀಶ್ ಸಂಭಾಷಣೆಯಿದೆ. “ಹರಿ ಚರಣ್ ಆರ್ಟ್ಸ್’ ಬ್ಯಾನರ್‌ನಲ್ಲಿ ನಾರಾಯಣ ಬಾಬು ಈ ಚಿತ್ರಕ್ಕೆರ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.
– ಜಿ.ಎಸ್.ಕಾರ್ತಿಕ ಸುಧನ್