Advertisement

ಇಂದು ಕ್ರಿಸ್ಮಸ್‌ ಸಂಭ್ರಮ : ಇಲ್ಲಿದೆ ಯುವ ಜನತೆಯ ಅಭಿಪ್ರಾಯ

01:50 AM Dec 25, 2018 | Team Udayavani |

ಇಂದು ಕ್ರಿಸ್ಮಸ್‌ ಸಂಭ್ರಮ: ಹಬ್ಬವನ್ನು ರೀತಿ ಆಚರಿಸುವ ಕುರಿತಂತೆ ಇಲ್ಲಿದೆ ಯುವ ಜನತೆಯ ಅಭಿಪ್ರಾಯ.

Advertisement

ಸಂತೋಷವನ್ನು ಹಂಚುತ್ತೇನೆ


ಕ್ರಿಸ್ಮಸ್‌ ಹಬ್ಬವೆಂದರೆ ದೇವರು ಹುಟ್ಟಿದ್ದಾರೆ ಎಂಬ ಸಂತೋಷವನ್ನು ಹಂಚುವ ಹಬ್ಬವಾಗಿದ್ದು, ಈ ನಿಟ್ಟಿನಲ್ಲಿ ಪರಸ್ಪರ ಸಂತೋಷವನ್ನು ಹಂಚಿಕೊಳ್ಳುತ್ತೇವೆ. ಹಬ್ಬದ ಹಿನ್ನೆಲೆಯಲ್ಲಿ ಪ್ರತಿ ಚರ್ಚ್‌ಗಳಂತೆ ಯುವಜನತೆ ಸೇರಿ ಕ್ಯಾರಲ್‌ ಆಚರಣೆ ಮಾಡುತ್ತೇವೆ. ಈ ಸಂದರ್ಭದಲ್ಲಿ ದೇವರ ವಚನಗಳನ್ನು ಪ್ರತಿಯೊಂದು ಮನೆಗೂ ಮುಟ್ಟಿಸುವ ಕಾರ್ಯ ಮಾಡುತ್ತೇವೆ.
– ಜೋಸ್ನಾ ಜೋಸೆಫ್‌, ಉಜಿರೆ

ಕ್ರಿಸ್ಮಸ್‌ ಹಬ್ಬ ಶುಭವನ್ನು ತರಲಿ


ತನ್ನನ್ನು ವಿರೋಧಿಸುವ ಮಂದಿಯನ್ನು ಕೂಡಾ, ಅವರು ಕೆಟ್ಟ ಕೃತ್ಯಗಳನ್ನು ಮಾಡಿದ್ದರೂ ದ್ವೇಷ ಇಲ್ಲದೆ ಕ್ಷಮಿಸುವಂತೆ ಏಸುಕ್ರಿಸ್ತರ ಸಂದೇಶವಾಗಿದೆ. ಕ್ಷಮೆ ಎನ್ನುವುದು ಇನ್ನೊಬ್ಬರನ್ನು ತಿದ್ದುವ, ಸೈರಿಸುವ ಗುಣವನ್ನು ಹೊಂದಿರುವುದು. ಕ್ಷಮಿಸುವ ಮೂಲಕ ವ್ಯಕ್ತಿ ಎತ್ತರಕ್ಕೆ ಏರುತ್ತಾನೆ. ಕ್ರಿಸ್ಮಸ್‌ ಹಬ್ಬ ಶುಭವನ್ನು ತರಲಿ.
– ರೀನಾ ಡಿ’ಸೋಜಾ, ಬಂಟ್ವಾಳ

ಸಿಹಿತಿಂಡಿ ಹಂಚಿ ಆಚರಣೆ


ಅಕ್ಕಪಕ್ಕದವರು, ಸ್ನೇಹಿತರಿಗೆ ಸಿಹಿತಿಂಡಿ ಹಂಚುವ ಮೂಲಕ ಕ್ರಿಸ್ಮಸ್‌ ಹಬ್ಬವನ್ನು ಆಚರಿಸುತ್ತೇನೆ. ಜತೆಗೆ ಚರ್ಚ್‌ನಲ್ಲಿ ಈಗಾಗಲೇ ಕ್ಯಾರಲ್‌ ಸಿಂಗಿಂಗ್‌, ಪೂಜೆ ನಡೆದಿದ್ದು, ಅದರಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದೇವೆ. ಡಿ. 25ರಂದು ಸಂಜೆ ಸ್ಟೇಜ್‌ ಪ್ರೋಗ್ರಾಂನಲ್ಲಿ ಸ್ಕಿಟ್‌, ಡ್ಯಾನ್ಸ್‌ನಲ್ಲಿ ಪಾಲ್ಗೊಳ್ಳಲಿದ್ದೇವೆ.
– ಗ್ಲೇನ್‌ ಮೊನೀಸ್‌, ಚರ್ಚ್‌ರೋಡ್‌, ಬೆಳ್ತಂಗಡಿ

ಮನೆ ಮನೆಗೂ ಕ್ರಿಸ್ಮಸ್‌ ಸಂದೇಶ


ಕ್ರಿಸ್ಮಸ್‌ ಹಬ್ಬದ ಸಿದ್ಧತೆಯನ್ನು ಡಿಸೆಂಬರ್‌ ತಿಂಗಳ ಆರಂಭದಲ್ಲೇ ನಡೆಸಲಾಗುತ್ತದೆ. ನಾವು ಹಬ್ಬಕ್ಕಾಗಿ ಸಾಧ್ಯವಾದಷ್ಟು ಆಹಾರ ಸೇವನೆಯಲ್ಲಿ ನಿಯಂತ್ರಣ ಸಾಧಿಸಿಕೊಂಡು ಹಬ್ಬದ ಸಂದರ್ಭದಲ್ಲಿ ಉತ್ತಮ ಭೋಜನ ನಡೆಸುತ್ತೇವೆ. ಜತೆಗೆ ಕ್ಯಾರಲ್‌ ಕಾರ್ಯಕ್ರಮ ನಡೆಸುತ್ತಿದ್ದೇವೆ.
– ರೋಶನ್‌ ಸೆಬಾಸ್ಟಿನ್‌, ಉಜಿರೆ

Advertisement

ಪ್ರಯತ್ನದಿಂದ ಮೇಲೆ ಬರಬೇಕು ಸಂದೇಶ


ಏಸು ಕ್ರಿಸ್ತರು ಗೋದಲಿಯಲ್ಲಿ ಹುಟ್ಟಿದರೂ, ಮಾನವ ಎಷ್ಟೆತ್ತರಕ್ಕೂ ಏರಬಹುದು ಎಂಬುದಕ್ಕೆ ಸಾಕ್ಷಿ ಆಗುತ್ತಾರೆ. ಹಾಗಾಗಿ ಯಾರೂ ಕೂಡ ಹುಟ್ಟಿನಿಂದ ಬಡವ ಬಲ್ಲಿದ ಎಂಬುದಾಗಿ ಯೋಚಿಸಬಾರದು. ತನ್ನ ಪ್ರಯತ್ನದಿಂದ ಮೇಲೆ ಬರಬೇಕು ಸಂದೇಶ. ಎಲ್ಲರಿಗೂ ಕ್ರಿಸ್ಮಸ್‌ ಹಬ್ಬದ ಶುಭಾಶಯಗಳು.
– ವಿಲ್ಸನ್‌ ವಿನಯ್‌ ಕ್ರಾಸ್ತ, ಕುರಿಯಾಳ

ಕಷ್ಟ, ದುಃಖ ಮೀರಿದ ಬದುಕು


ಕ್ರಿಸ್ಮಸ್‌ ಗೋದಳಿ ಏಸು ಕ್ರಿಸ್ತರ ಜನ್ಮದ ಸಂಕೇತವಾಗಿ ನಿರ್ಮಿಸಲಾಗುತ್ತದೆ. ಸೃಷ್ಟಿಕರ್ತನಿಂದ ಸಿಗುವ ಸಂಜ್ಞೆಯಾಗಿ ನಕ್ಷತ್ರಗಳನ್ನು ಸಂಕೇತಿಸುವುದಾಗಿದೆ. ಎಲ್ಲರ ಬದುಕು ಕೂಡಾ ಕಷ್ಟ ದುಃಖದಿಂದ ಕೂಡಿದ್ದರೂ ಅದನ್ನು ಮೀರಿ ಬದುಕುವುದು ಏಸುಕ್ರಿಸ್ತರ ಬದುಕಿನ ಸಂದೇಶವಾಗಿದೆ.
– ಅಲ್ಸನ್‌ ಗುತ್ತಾರ್‌, ಲೊರೆಟ್ಟೊ

ಹಬ್ಬಕ್ಕೆ ಕುಶ್ವಾರ್‌ ಹಂಚುತ್ತೇವೆ


ಕ್ರಿಸ್ಮಸ್‌ ಹಬ್ಬವೆಂದರೆ ನಮಗೆ ಅತ್ಯಂತ ಸಡಗರದ ಕ್ಷಣವಾಗಿದ್ದು, ಕ್ರಿಸ್ಮಸ್‌ ಟ್ರೀ, ಗೋದಳಿಯನ್ನು ಮಾಡಿ ಹಬ್ಬವನ್ನು ಆಚರಿಸುತ್ತೇನೆ. ಕುಶ್ವಾರ್‌ ಮಾಡಿ ಮನೆ ಮನೆಗೆ ಹಂಚುವ ಕಾರ್ಯ ಮಾಡುತ್ತೇನೆ. ಜತೆಗೆ ಬೆಳಕಿನ ಸಂಕೇತವಾಗಿ ನಕ್ಷತ್ರಗಳನ್ನು ಮನೆಯ ಮುಂದೆ ಹಾಕಿ, ಸಂಭ್ರಮಿಸುತ್ತೇನೆ. ಒಟ್ಟಿನಲ್ಲಿ ಏಸು ಕ್ರಿಸ್ತನ ಜನುಮ ದಿನದ ಸಂಕೇತವಾದ ಕ್ರಿಸ್ಮಸ್‌ ಎಂದರೆ ನಮಗೆಲ್ಲರಿಗೂ ವಿಶೇಷ ಸಂಭ್ರಮ.
– ಅನುಷಾ ಮರಿನಾ ಕ್ರಾಸ್ತಾ, ಬದ್ಯಾರ್‌

ಬದುಕು ಇರುವುದು ಜಗತ್ತನ್ನು ಬೆಳಗುವುದಕ್ಕೆ


ಕ್ರಿಸ್ಮಸ್‌ ನಮ್ಮ ಎಲ್ಲರ ಬಾಳಿನಲ್ಲಿ ಒಳ್ಳೆಯ ದಿನವನ್ನು ಮೂಡಿಸಲಿ. ಬದುಕು ಇರುವುದು ಜಗತ್ತನ್ನು ಬೆಳಗುವುದಕ್ಕೆ ಎಂಬುದೇ ಏಸು ಕ್ರಿಸ್ತರ ಜನನದ ಹಿಂದಿನ ತತ್ವವಾಗಿತ್ತು.
– ಫ್ರಾಯಿಡಿ ಫೆರ್ನಾಂಡಿಸ್‌, ಲೊರೆಟ್ಟೊ ಚರ್ಚ್‌

ಎಲ್ಲರನ್ನೂ ಪ್ರೀತಿಸುವುದೇ ಧ್ಯೇಯ


ಎಲ್ಲರನ್ನೂ ಪ್ರೀತಿಸುವುದೇ ಏಸುಕ್ರಿಸ್ತರ ಧ್ಯೇಯವಾಗಿದೆ. ನಮ್ಮ ನೆರೆಹೊರೆಯವರು ಹಸಿದಿದ್ದಾಗ ನಾವು ಅವರ ಹಸಿವನ್ನು ನೀಗಿಸಿ ನಮ್ಮ ಊಟವನ್ನು ಮಾಡಬೇಕು ಎಂಬುದು ಆಧುನಿಕ ಬದುಕಿನ ಇಂದಿಗೂ ಉತ್ತಮ ಸಂದೇಶವಾಗಿದೆ. ಕ್ರಿಸ್ಮಸ್‌ ಹಬ್ಬ ಎಲ್ಲರ ಬದುಕಿನಲ್ಲಿಯೂ ನೋವನ್ನು ನಿವಾರಿಸುವಂತಾಗಲಿ.
– ಪ್ರವೀಣ್‌ ಪೊನ್ಸೆಕ, ಕುರಿಯಾಳ

ತಿಂಡಿ-ಹಣ್ಣು ಹಂಚುತ್ತೇವೆ


ನಾವು ಯುವಕರು ಸೇರಿಕೊಂಡು ಕ್ರಿಸ್ಮಸ್‌ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತೇವೆ. ಮನೆ ಮನೆಗೆ ತೆರಳಿ ಕ್ಯಾರೆಲ್‌ ಆಚರಿಸಿದರೆ, ಜತೆಗೆ ಕೆಲವೊಂದು ಅಶಕ್ತ ಕುಟುಂಬಗಳ ಮನೆಗೆ ತೆರಳಿ ಹಬ್ಬದ ತಿಂಡಿ ತಿನಸುಗಳು, ಹಣ್ಣು ಹಂಪಲುಗಳನ್ನು ಹಂಚುವ ಕಾರ್ಯ ಮಾಡುತ್ತೇವೆ. ಜತೆಗೆ ಮನೆಯ ಸುತ್ತಮುತ್ತಲ ಮನೆಗಳಿಗೆ ಸಿಹಿತಿಂಡಿಗಳನ್ನು ಹಂಚುತ್ತೇವೆ. 
– ಅನಿಷಾ ಮೊರಾಸ್‌, ಉಜಿರೆ

ಸ್ತುತಿಗೀತೆ ಹಾಡಿ ಏಸುವಿಗೆ ಸ್ವಾಗತ


ಏಸುಕ್ರಿಸ್ತರು ಹುಟ್ಟಿದ ಸ್ತುತಿಗೀತೆ ಹಾಡುವ ಮೂಲಕ ಅವರ ಬರುವಿಕೆಯನ್ನು ಸ್ವಾಗತಿಸೋಣ. ಬದುಕಿನಲ್ಲಿ ಇದರಿಂದ ಸುಖಶಾಂತಿ ನೆಮ್ಮದಿ ದೊರೆಯುವುದು.
– ಲಾಝಿಲ್‌ ಡಿ’ಸೋಜಾ, ಲೊರೆಟ್ಟೊ

ಕ್ರಿಬ್‌ ರಚನೆಗೆ ಹೆಚ್ಚಿನ ಮಹತ್ವ


ಕ್ರಿಸ್ಮಸ್‌ ಹಬ್ಬವನ್ನು ಕ್ರಿಬ್‌, ಟ್ರೀಗಳ ಮೂಲಕ ಹಬ್ಬವನ್ನು ಆಚರಣೆ ಮಾಡುತ್ತೇವೆ. ಜತೆಗೆ ಪ್ರತಿ ಮನೆಯ ಕ್ರಿಬ್‌ಗಳನ್ನೂ ಚರ್ಚ್‌ನ ಸಮಿತಿಯವರು ನೋಡಿ ಬಹುಮಾನ ನೀಡುವುದರಿಂದ ಕ್ರಿಬ್‌ ರಚನೆಗೆ ಹೆಚ್ಚಿನ ಮಹತ್ವ ನೀಡುತ್ತೇವೆ. ಜತೆಗೆ ಚರ್ಚ್‌ನಲ್ಲಿ ಲಕ್ಕಿ ಗೇಮ್ಸ್‌, ಹೌಸಿ ಹೌಸಿಯಂತಹ ಗೇಮ್‌ಗಳನ್ನು ಆಯೋಜನೆ ಮಾಡುತ್ತಿದ್ದು, ಅದರಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತೇವೆ.
– ವರ್ಣನ್‌ ರೊಡ್ರಿಗಸ್‌, ಕುಂಟಿನಿ, ಟಿ.ಬಿ.ಕ್ರಾಸ್‌, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next