Advertisement

Chiranjeevi Singh: ಪಿ.ಬಿ.ಶ್ರೀನಿವಾಸ್‌ ಅವರ ಹಾಡು ಕೇಳುತ್ತಾ ಕನ್ನಡ ಕಲಿತೆ!

12:24 PM Sep 24, 2023 | Team Udayavani |

ದೂರದ ಪಂಜಾಬ್‌ನಿಂದ ಐಎಎಸ್‌ ಅಧಿಕಾರಿಯಾಗಿ ಕರ್ನಾಟಕಕ್ಕೆ ಬಂದು, ಅಚ್ಚ ಕನ್ನಡಿಗರೇ ಆಗಿಹೋದವರು ಚಿರಂಜೀವಿ ಸಿಂಘ್. ಕನ್ನಡ ಸಾಹಿತ್ಯಲೋಕದ ಮೇರು ಪ್ರತಿಭೆಗಳ ಆಪ್ತವಲಯದಲ್ಲಿ ಅವರಿಗೆ ಮುಖ್ಯ ಸ್ಥಾನವಿತ್ತು. ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿ ಸಲ್ಲಿಸಿರುವ ಸೇವೆಯನ್ನು ಗಮನಿಸಿ, ಅವರಿಗೆ ಈ ಬಾರಿಯ ವಿ. ಕೃ. ಗೋಕಾಕ್‌ ಪ್ರಶಸ್ತಿ ನೀಡಿ ಇಂದು (ಸೆ. 24) ಗೌರವಿಸಲಾಗುತ್ತಿದೆ. ತಮ್ಮ ವೃತ್ತಿ, ಬದುಕು ಮತ್ತು ಕನ್ನಡ ಪ್ರೇಮದ ಬಗ್ಗೆ ಅವರಿಲ್ಲಿ ಮಾತಾಡಿದ್ದಾರೆ.

Advertisement

ನೀವು ಹುಟ್ಟಿದ್ದು ಪಂಜಾಬಿನಲ್ಲಿ. ಕೆಲಸಕ್ಕೆಂದು ಬಂದದ್ದು ಕರ್ನಾಟಕಕ್ಕೆ. ಕನ್ನಡ ಮತ್ತು ಕರ್ನಾಟಕದ ಬಗೆಗೆ ನಿಮಗೆ ಎಣೆಯಿಲ್ಲದ ಪ್ರೀತಿ ಯಾವ ಕಾರಣಕ್ಕೆ?

ಎಲ್ಲಿಂದಲೋ ಬಂದ ನನ್ನನ್ನು ಕರ್ನಾಟಕದ ಜನ ಪ್ರೀತಿಯಿಂದ ಕಂಡರು. ನನ್ನ ಮಾತುಗಳನ್ನು ಆಸಕ್ತಿಯಿಂದ ಕೇಳಿದರು. ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡುವ ಸಮಯದಲ್ಲಿ ನನಗಿದ್ದ ಮಿತಿಯಲ್ಲಿಯೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹೊರಟಾಗ ಎಲ್ಲ ರೀತಿಯ ಬೆಂಬಲ ಕೊಟ್ಟರು. ನಾನು ಕನ್ನಡ ಕಲಿತು ಮಾತಾಡಿದಾಗ, ಬೆರಗಾಗಿ ಚಪ್ಪಾಳೆ ಹೊಡೆದರು. ಇವ ನಮ್ಮವ ಎಂದು ಸಂಭ್ರಮಿಸಿದರು. ಇಂಥವೇ ಹಲವು ಕಾರಣಗಳಿಂದ ನನಗೆ ಕರ್ನಾಟಕ ಮತ್ತು ಕನ್ನಡವೆಂದರೆ ಬಹಳ ಇಷ್ಟ. ಇದು ಯಾವ ಜನ್ಮದ ಮೈತ್ರಿಯೋ ಗೊತ್ತಿಲ್ಲ.

ನಿಮಗೆ ಕನ್ನಡದ ಬಗೆಗೆ ಆಸಕ್ತಿ ಮೂಡಿದ್ದು ಹೇಗೆ? ಕನ್ನಡ ಭಾಷೆ ಕಲಿಯಲು ನೀವು ಮಾಡಿದ ಪ್ರಯತ್ನಗಳ ಕುರಿತು ಹೇಳಿ.

ಕರ್ನಾಟಕದಲ್ಲಿ ಕೆಲಸ ಮಾಡಬೇಕಿದ್ದುದರಿಂದ ಕನ್ನಡ ಕಲಿಯುವುದು ಅನಿವಾರ್ಯ- ಅಗತ್ಯವಾಗಿತ್ತು. ನನಗೆ ಕನ್ನಡದ ಬಗೆಗೆ ಅಭಿಮಾನ ಮೂಡುವುದಕ್ಕೆ ಯಾವುದೋ ಜನ್ಮದ ಋಣಾನುಬಂಧವೇ ಕಾರಣ ಅಂದುಕೊಳೆ¤àನೆ. ನಾನು ಕನ್ನಡ ಕಲಿತದ್ದು ಪಿ. ಬಿ. ಶ್ರೀನಿವಾಸ್‌ ಅವರು ಹಾಡಿದ್ದ ಚಲನಚಿತ್ರ ಗೀತೆಗಳನ್ನು ಕೇಳಿ. “ಬೆಳದಿಂಗಳಿನ ನೊರೆ ಹಾಲು…’ ಎಂಬಂಥ ಸಾಲುಗಳನ್ನು ಕೇಳುವಾಗಲೇ ಮನದಲ್ಲಿ ಎಂಥದೋ ಮಧುರ ಭಾವನೆ ಉಂಟಾಗುತ್ತಿತ್ತು. ಆಗೆಲ್ಲ ನನ್ನ ಗೆಳೆಯರೂ, ಸಹಾಯಕ ಅಧಿಕಾರಿಯೂ ಆಗಿದ್ದ ಮಹೇಶನ್‌ ಅವರಲ್ಲಿ ಆ ಪದಗಳ ಅರ್ಥ ಕೇಳುತ್ತಿ¨ªೆ. ಅರ್ಥ ತಿಳಿದ ನಂತರ ಮತ್ತೆ ಹಾಡು ಕೇಳಿದಾಗ ಅದು ಮತ್ತಷ್ಟು ಮಧುರ ಅನ್ನಿಸುತ್ತಿತ್ತು. ಹೀಗೆ, ಪಿ. ಬಿ. ಶ್ರೀನಿವಾಸ್‌ ಅವರು ಹಾಡಿದ ಚಿತ್ರಗೀತೆಗಳನ್ನು ಕೇಳುತ್ತಲೇ ನಾನು ಕನ್ನಡ ಭಾಷೆ ಕಲಿತೆ.

Advertisement

ನಿಮ್ಮದು ಕವಿ ಹೃದಯ. ಆಡಳಿತ ನಡೆಸುವಾಗ ಕೆಲವೊಮ್ಮೆ ಕಠೊರ ನಿಲುವುಗಳನ್ನು ತಳೆಯಬೇಕಾಗುತ್ತದೆ. ಈ ಸ್ಥಿತಿಯನ್ನು ಹೇಗೆ ನಿಭಾಯಿಸಿದಿರಿ?

ಕೆಲಸ ಮಾಡುವಾಗ ಕೆಲವು ಸಂದರ್ಭಗಳಲ್ಲಿ ನಿಷ್ಠುರವಾಗಿ ನಡೆದುಕೊಳ್ಳಬೇಕಾಗುತ್ತದೆ. ನಾನು ಪ್ರತಿ ಸಂದರ್ಭದಲ್ಲೂ ಹೆಚ್ಚು ಜನರಿಗೆ ಒಳಿತಾಗುವ ಕುರಿತು ಯೋಚಿಸಿಯೇ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ. ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವಾಗಲೂ ಜನರ ಅಭಿಪ್ರಾಯ ಕೇಳಿಯೇ ಮುಂದುವರಿಯುತ್ತಿದ್ದೆ. ಸಂಘರ್ಷಕ್ಕೆ ದಾರಿಯಾಗದಂತೆ ಎಚ್ಚರ ವಹಿಸುತ್ತಿದ್ದೆ. ಹಾಗಾಗಿ, ಅನಿವಾರ್ಯ ಸಂದರ್ಭಗಳಲ್ಲಿ ನಿಷ್ಠುರವಾಗಿ ನಡೆದುಕೊಳ್ಳುವುದೂ ಕಷ್ಟವಾಗಲಿಲ್ಲ.

ಯುನೆಸ್ಕೋ ರಾಯಭಾರಿಯಾಗಿ ಕೆಲಸ ಮಾಡಲು ಕಷ್ಟ ಆಗಲಿಲ್ಲವಾ? ಪ್ರಪಂಚದ ವಿವಿಧ ಭಾಗದ ಜನ ಭಾರತದ ಬಗೆಗೆ ಯಾವ ರೀತಿಯ ನಿರೀಕ್ಷೆ ಇಟ್ಟುಕೊಂಡಿದ್ದಾರೆ?

ತಂದೆಯ ಜತೆಗೆ ಲಿಬಿಯಾ, ಜರ್ಮನ್‌ ದೇಶಗಳಲ್ಲಿ ಬೆಳೆದವನು ನಾನು. ಯೂರೋಪಿನ ದೇಶಗಳ ಬಗ್ಗೆ, ಆರ್ಟಿಯಾಲಜಿ, ಟೂರಿಸಂ ಮುಂತಾದ ವಿಷಯಗಳ ಬಗ್ಗೆ ಗೊತ್ತಿದ್ದುದರಿಂದ ಹಾಗೂ ಜರ್ಮನ್‌ ಮುಂತಾದ ಭಾಷೆಗಳೂ ಗೊತ್ತಿದ್ದುದರಿಂದ ಯುನೆಸ್ಕೊದಲ್ಲಿ ಕೆಲಸ ಮಾಡಲು ಸುಲಭವಾಯ್ತು. ನಾನು ಅರ್ಥ ಮಾಡಿಕೊಂಡಂತೆ ಈ ಜಗತ್ತಿನಲ್ಲಿ ಎರಡು ಬಗೆಯ ಜನರಿದ್ದಾರೆ. ಒಂದು- ಭಾರತದ ಪುರಾತನ ಸಂಸ್ಕೃತಿ, ಕಲೆ, ಸಾಹಿತ್ಯಗಳ ಬಗೆಗೆ ಆಸಕ್ತಿ ಇಟ್ಟುಕೊಂಡವರು. ಇನ್ನೊಂದು- ಭಾರತದಲ್ಲಿ ತಮ್ಮ ಸರಕುಗಳನ್ನು ಮಾರಲು ಇರುವ ಅವಕಾಶಗಳ ಬಗೆಗೆ, ವಿಶೇಷವಾಗಿ ಐಟಿಬಿಟಿಗಳ ವಲಯದ ಬಗೆಗೆ ಆಸಕ್ತರಾದವರು. ಎರಡೂ ಬಗೆಯ ಜನರಿಗೂ ಭಾರತದ ಕುರಿತು ಸದಭಿಪ್ರಾಯವಿದೆ.

ಆಡಳಿತಗಾರರಾಗಿ ನೀವು ಹೋದಲ್ಲೆಲ್ಲಾ ಒಳ್ಳೆಯ ಕೆಲಸ ಮಾಡಿದ್ದೀರೆಂಬ ಮಾತು ಎಲ್ಲರಿಂದ ಕೇಳಿಬರುತ್ತದೆ. ಇದು ಹೇಗೆ ಸಾಧ್ಯವಾಯ್ತು?

ನಾನು ಯಾವ ಇಲಾಖೆಯನ್ನೂ ಅಪೇಕ್ಷಿಸಿ ಹೋದವನಲ್ಲ. ಅದರೆ ಕೆಲಸ ಮಾಡಿದ ಎಲ್ಲ ಕಡೆಯೂ ಆಸಕ್ತಿಯಿಂದ ಕೆಲಸ ಮಾಡಿದೆ. ಕೃಷಿ ಇಲಾಖೆ ಇರಬಹುದು, ಡಿಫೆನ್ಸ್‌, ನೇವಿ ಮುಂತಾದ ಕ್ಷೇತ್ರಗಳಿರಬಹುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇರಬಹುದು; ಎಲ್ಲಿಯೂ ನನಗೆ ಕಷ್ಟವಾಗಲಿಲ್ಲ. ಕಾರಣ, ನಾನು ಕೆಲಸ ಮಾಡುವಾಗ ಆಯಾ ಇಲಾಖೆಗಳಲ್ಲಿದ್ದ ಎಲ್ಲರೂ ನನಗೆ ಸಹಾಯ ಮಾಡಿದರು. ಸಹಕಾರ ಕೊಟ್ಟರು. ಅದಕ್ಕಿಂತ ಮುಖ್ಯವಾಗಿ, ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ನಮ್ಮ ಹಿರಿಯ ಅಧಿಕಾರಿಗಳು ಮಾದರಿಯೊಂದನ್ನು ಹಾಕಿಕೊಟ್ಟಿದ್ದರು. ಹೀಗಾಗಿ ಯಾವ ಸಂದರ್ಭದಲ್ಲೂ ಕೆಲಸಗಳು “ಹೊರೆ’ ಆಗಲಿಲ್ಲ. ಕಷ್ಟ ಅನ್ನಿಸಲಿಲ್ಲ.

ಸಾಮಾನ್ಯವಾಗಿ ನಾನು ಪ್ರತಿದಿನ ರಾತ್ರಿ ಎಂಟೂವರೆಯ ಮೇಲಷ್ಟೇ ಕಚೇರಿಯಿಂದ ಮನೆಗೆ ಹೋಗುತ್ತಿದ್ದೆ. ಆಗೆಲ್ಲಾ ನನ್ನ ಮಡದಿ ಹೇಳುತ್ತಿದ್ದ ಮಾತು: ಇಷ್ಟು ಹೊತ್ತೂ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದೆವು ಅಂತ ನೀವು ಸರ್ಕಾರಿ ನೌಕರರು ಹೇಳ್ತೀರಿ. ಆದರೆ ಜನಸಾಮಾನ್ಯರು-“ನಾನು ಆ ಕಚೇರಿಗೆ ಹೋಗಿದ್ದೆ. ಅಲ್ಲಿ ನನ್ನ ಕೆಲಸ ಆಯಿತು’ ಅಂತ ಹೇಳುವುದನ್ನು ನಾನು ಕೇಳಿಲ್ಲ. ನೀವೆಲ್ಲ ಏನು ಮಾಡುತ್ತೀರಿ?’- ಅಧಿಕಾರಿಯಾದವನು ಸಾಮಾನ್ಯ ಜನರ ಕೆಲಸ ಮಾಡಿಕೊಡಲು ಮುಂದಾಗಬೇಕು ಎಂಬ ಎಚ್ಚರ ಉಂಟಾಗಲು ಇಂಥ ಮಾತುಗಳೂ ಕಾರಣ ಅನ್ನಬಹುದು…

-ವಾರದ ಅತಿಥಿ:  ಚಿರಂಜೀವಿ ಸಿಂಘ್, ನಿವೃತ್ತ ಐಎಎಸ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next