ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ (Superstar Chiranjeevi) ಭಾರತೀಯ ಸಿನಿಮಾರಂಗದ ದಿಗ್ಗಜ ನಟರಲ್ಲಿ ಒಬ್ಬರು. ದಶಕಗಳಿಂದ ಮನರಂಜನೆ ಕ್ಷೇತ್ರದಲ್ಲಿ ರಂಜಿಸಿ ಉತ್ತುಂಗಕ್ಕೇರಿದ ಚಿರಂಜಿವಿ ಅವರ ಪ್ರತಿಭೆಗೆ ಸಂದಿರುವ ಪ್ರಶಸ್ತಿ – ಪುರಸ್ಕಾರ ಒಂದೆರೆಡಲ್ಲ.
ಪದ್ಮವಿಭೂಷಣದಂತಹ ಮಹಾನ್ ಪ್ರಶಸ್ತಿಗೆ ಭಾಜನರಾಗಿರುವ ಸೂಪರ್ ಸ್ಟಾರ್ ಚಿರಂಜೀವಿ ಅವರ ಹೆಸರು ಈಗ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (Guinness World Records) ನಲ್ಲಿ ದಾಖಲಾಗಿದೆ. ಆ ಮೂಲಕ ಅವರ ಅಭಿಮಾನಿಗಳು ಹೆಮ್ಮೆ ಪಟ್ಟಿದ್ದಾರೆ.
ಹೈದರಾಬಾದ್‌ನಲ್ಲಿ ಭಾನುವಾರ(ಸೆ.22ರಂದು) ನಡೆದ ಸಮಾರಂಭದಲ್ಲಿ ಗಿನ್ನಿಸ್ ಪ್ರಮಾಣ ಪತ್ರವನ್ನು ಅವರಿಗೆ ವಿತರಿಸಲಾಗಿದೆ. ಬಾಲಿವುಡ್ ನಟ ಅಮೀರ್ ಖಾನ್ (Aamir Khan) ಚಿರಂಜೀವಿ ಅವರಿಗೆ ಗಿನ್ನಿಸ್ ಪ್ರತಿನಿಧಿ ರಿಚರ್ಡ್ ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದಾರೆ.
150ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಚಿರಂಜೀವಿ ನಟಿಸಿದ್ದಾರೆ. ಅವರ ಸಿನಿಮಾಗಳು ರಿಲೀಸ್ ಆದರೆ ಇಂದಿಗೂ ಸರತಿ ಸಾಲಿನಲ್ಲಿ ನಿಂತು ಟಿಕೆಟ್‌ಗಾಗಿ ಕಾಯುವ ಸಾವಿರಾರು ಅಭಿಮಾನಿಗಳಿದ್ದಾರೆ. ಹಲವು ದಶಕಗಳಿಂದ ಸಿನಿಮಾರಂಗದಲ್ಲಿರುವ ಚಿರಂಜೀವಿ ನಟನೆ ಮಾತ್ರವಲ್ಲದೆ ಡ್ಯಾನ್ಸ್‌ನಿಂದಲೂ ನಟನೆಯಷ್ಟೇ ಜನಪ್ರಿಯವೂ ಹೌದು.
ಅವರ ಸಿನಿಮಾದಲ್ಲಿ ಅವರ ಡ್ಯಾನ್ಸ್ ನೋಡಿಯೇ ಅನೇಕರು ಪ್ರೇರಣೆಗೊಂಡು ಸ್ಟೆಪ್ ಹಾಕೋದಿದೆ. ಅವರ ಡ್ಯಾನ್ಸ್ ಮೂವ್ಸ್ ಗಳು ಯುವಜನರನ್ನೇ ನಾಚಿಸುವಷ್ಟು ಸೂಪರ್ ಆಗಿರುತ್ತದೆ. ಅವರು ತನ್ನ 46 ವರ್ಷಗಳ ಸಿನಿ ಜರ್ನಿಯಲ್ಲಿ 156 ಸಿನಿಮಾಗಳಲ್ಲಿ 537 ಹಾಡುಗಳಲ್ಲಿ 24,000 ಸ್ಟೆಪ್ಸ್ ಹಾಕಿದ್ದಾರೆ. ಆ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ದಾಖಲಾಗುವ ಸಾಧನೆಯನ್ನು ಮಾಡಿದ್ದಾರೆ.
ಗಿನ್ನಿಸ್ ತಂಡವು ಕೇವಲ 143 ಚಿತ್ರಗಳನ್ನು ಮಾತ್ರ ಇದರಲ್ಲಿ ಉಲ್ಲೇಖಿಸಿದೆ. ಚಿರಂಜೀವಿ 156 ಚಿತ್ರಗಳಲ್ಲಿ ನಟಿಸಿದ್ದಾರೆ.
“ನೀವು ಅವರ ಯಾವುದೇ ಹಾಡುಗಳನ್ನು ವೀಕ್ಷಿಸಿದರೆ, ಅವರ ಮನಸ್ಸು ಸಂಪೂರ್ಣವಾಗಿ ಅದರಲ್ಲಿದೆ. ಅವರು ತನ್ನ ಪ್ರತಿ ಮೂವ್ಸ್ ಗಳನ್ನು ಆನಂದಿಸುತ್ತಾರೆ. ಅದರಿಂದಾಗಿಯೇ ಅವರನ್ನು ನೋಡುತ್ತಲೇ ಇರಬೇಕೆನಿಸುತ್ತದೆ.” ಎಂದು ಅಮೀರ್ ಹೇಳಿ ಚಿರಂಜೀವಿ ಅವರನ್ನು ಅಭಿನಂದಿಸಿದ್ದಾರೆ.
ನಟರಾದ ವರುಣ್ ತೇಜ್, ಸಾಯಿ ಧರಮ್ ತೇಜ್ ಮತ್ತು ಪಂಜಾ ವೈಷ್ಣವ್ ತೇಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವಿಶೇಷ ಗೌರವಕ್ಕೆ ಕುಟುಂಬ ಸಮೇತ ಚಿರಂಜೀವಿ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಸಿನಿಮಾದ ವಿಚಾರಕ್ಕೆ ಬಂದರೆ ಚಿರಂಜೀವಿ ಮುಂದೆ ʼವಿಶ್ವಂಭರʼದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಲ್ಲಿಡಿ ವಸಿಷ್ಟ ನಿರ್ದೇಶನದ ಈ ಚಿತ್ರವು ಜನವರಿ 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.