ನಟ ಚಿರಂಜೀವಿ ಸರ್ಜಾ ಅಗಲಿ ಇಂದಿಗೆ (ಜೂ.7) ಮೂರು ವರ್ಷ. ಅವರ ಸಾವು ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೊಡೆತ. ಅವರು ಇನ್ನಿಲ್ಲ ಎಂಬುದನ್ನು ಇವತ್ತಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಹನ್ನೆರೆಡು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿ ಜನಮನ ಗೆದ್ದಿದ್ದ ಚಿರಂಜೀವಿ ಸರ್ಜಾ, ಹಲವು ಯಶಸ್ವಿ ಚಿತ್ರಗಳ ಮೂಲಕ ಸಿನಿ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದ್ದರು. ಇನ್ನಷ್ಟು ಹೊಸ ಬಗೆಯ ಸಿನಿಮಾಗಳ ಮೂಲಕ ಎಲ್ಲರನ್ನೂ ರಂಜಿಸುವ ಉತ್ಸಾಹದಲ್ಲಿದ್ದ ಚಿರಂಜೀವಿ, ನಿಜಕ್ಕೂ ಚಿರಂಜೀವಿಯಾಗಿಯೇ ಉಳಿದಿದ್ದಾರೆ.
ವಾಯುಪುತ್ರ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಅವರಿಗೆ ಆ ಚಿತ್ರ ಹೇಳಿಕೊಳ್ಳುವಂತಹ ದೊಡ್ಡ ಗೆಲುವು ತಂದುಕೊಡದಿದ್ದರೂ, ಚಿರು ಎಂಬ ಯುವ ನಟ ಬೆಳಕಿಗೆ ಬಂದಿದ್ದು ಸುಳ್ಳಲ್ಲ. ಆ ಬಳಿಕ ಚಿರು ತಮ್ಮ ಸ್ವಂತ ಸಾಮರ್ಥ್ಯದಿಂದಲೇ ಹೊಸ ಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ಯಶಸ್ಸಿನ ಮೆಟ್ಟಿಲು ಏರಿದರು. ಈವರೆಗೆ ಸುಮಾರು 22ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಚಿರಂಜೀವಿ ಸರ್ಜಾ ಎಲ್ಲಾ ಜಾನರ್‌ನ ಸಿನಿಮಾಗಳಲ್ಲಿ ಕಾಣಿಸಿಕೊಂಡು ವರ್ಸಟೈಲ್ ಆ್ಯಕ್ಟರ್ ಎಂದೇ ಕರೆಸಿಕೊಂಡಿದ್ದರು.
2009ರಲ್ಲಿ ಚಿರು ವಾಯುಪುತ್ರ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾದರು. ನಂತರದ ದಿನಗಳಲ್ಲಿ ಅವರು ಗಂಡೆದೆ, ಚಿರು, ದಂಡಂ ದಶಗುಣಂ, ಕೆಂಪೇಗೌಡ, ವರದನಾಯಕ, ವಿಷಲ್, ಚಂದ್ರಲೇಖ, ಅಜಿತ್, ರುದ್ರತಾಂಡವ, ಆಟಗಾರ, ಆಕೆ,ಸಂಹಾರ, ಸೀಜರ್, ಅಮ್ಮಾ ಐ ಲವ್‌ಯು, ಸಿಂಗ, ಖಾಕಿ, ಆದ್ಯ, ಶಿವಾರ್ಜುನ ಚಿತ್ರಗಳಲ್ಲಿ ನಟಿಸಿದ್ದರು. ಪ್ರತಿ ಸಿನಿಮಾಗಳಲ್ಲೂ ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದಿದ್ದ ಅವರು ಸೋಲು-ಗೆಲುವಿನ ಲೆಕ್ಕಾಚಾರ ಹಾಕದೆ ಬಂದಿದ್ದನ್ನು ಸ್ವೀಕರಿಸಿ ಮುನ್ನಡೆಯುತ್ತಿದ್ದರು.
ಕನ್ನಡ ಚಿತ್ರರಂಗದಲ್ಲಿ ನಟರು ವರ್ಷಕ್ಕೆ ಎರಡು ಸಿನಿಮಾಗಳಲ್ಲಿ ನಟಿಸುವ ಮೂಲಕ ನಿರ್ಮಾಪಕರ ಸಹಾಯಕ್ಕೆ ಬರಬೇಕು ಎಂಬ ಮಾತು ಕೇಳಿಬರುತ್ತಲೇ ಇದೆ. ಈ ನಿಟ್ಟಿನಲ್ಲಿ ಚಿರಂಜೀವಿ ಕೂಡ ಮೊದಲಿನಿಂದಲೂ ನಿರ್ಮಾಪಕರ ಸ್ನೇಹಿ ನಟರಾಗಿಯೇ ಬಂದವರು. ಅದೇ ಹಾದಿಯಲ್ಲಿ ಸಾಗಿದ ಆವರು, ವರ್ಷಕ್ಕೆ ಎರಡು, ಮೂರು ಸಿನಿಮಾಗಳಲ್ಲಿ ನಟಿಸುವ ಮೂಲಕ ನಿರ್ಮಾಪಕರ ಪರ ಇದ್ದರು.