ಜಗ್ಗೇಶ್ ಅಭಿನಯದ “ಭೈರವ’ ಚಿತ್ರ ಎಲ್ಲರಿಗೂ ಗೊತ್ತು. 1993 ರಲ್ಲಿ ಬಿಡುಗಡೆಯಾದ “ಭೈರವ’ ಆ ಕಾಲಕ್ಕೆ ಒಳ್ಳೆಯ ಮೆಚ್ಚುಗೆ ಪಡೆದಿತ್ತು. ಎಲ್ಲಾ ಸರಿ, ಈಗ ಯಾಕೆ ಈ “ಭೈರವ’ ವಿಷಯ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಕಾರಣ, ಅದೇ ಹೆಸರಿನಲ್ಲಿ ಪುನಃ ಸೆಟ್ಟೇರುತ್ತಿರುವ ಚಿತ್ರ. ಹೌದು, “ಭೈರವ’ ಎಂಬ ಹೆಸರಿನ ಚಿತ್ರಕ್ಕೆ ಇದೀಗ ಎಲ್ಲಾ ತಯಾರಿ ನಡೆಯುತ್ತಿದೆ. ಈ ಚಿತ್ರಕ್ಕೆ ಚಿರಂಜೀವಿ ಸರ್ಜಾ ನಾಯಕರಾಗಿದ್ದಾರೆ.
ಇನ್ನು, “ಧೈರ್ಯಂ’ ನಂತರ ಶಿವತೇಜಸ್ ಅವರು ಮತ್ತೂಂದು ಮಾಸ್ ಸಿನಿಮಾಗೆ ಕೈ ಹಾಕಿದ್ದಾರೆ. ಈ ಚಿತ್ರವನ್ನು ಶಿವಾರ್ಜುನ್ ನಿರ್ಮಾಣ ಮಾಡುತ್ತಿದ್ದಾರೆ. ಇವರಿಗೆ ಇದು ಮೊದಲ ನಿರ್ಮಾಣದ ಚಿತ್ರ. ಶಿವಾರ್ಜುನ್‌ಗೆ ನಿರ್ಮಾಣ ಹೊಸದಾಗಿದ್ದರೂ, ಸಿನಿಮಾ ರಂಗ ಹೊಸದೇನಲ್ಲ. ಸುಮಾರು 25 ವರ್ಷಗಳ ಕಾಲ ಸಿನಿಮಾರಂಗದಲ್ಲಿ ಅವರು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದವರು. ಈಗ ನಿರ್ಮಾಣಕ್ಕೆ ಮುಂದಾಗಿದ್ದಾರೆ. “ಧೈರ್ಯಂ’ ನಂತರ ಇನ್ನೊಂದು ಆ್ಯಕ್ಷನ್ ಚಿತ್ರ ಮಾಡಬೇಕು ಎಂದು ನಿರ್ಧರಿಸಿದ್ದ ನಿರ್ದೇಶಕ ಶಿವತೇಜಸ್, ಚಿರಂಜೀವಿ ಸರ್ಜಾ ಅವರಿಗಾಗಿಯೇ ಮಾಸ್ ಕಥೆ ಹೆಣೆದಿದ್ದಾರೆ. ಕಥೆ ಕೇಳಿದ ಚಿರಂಜೀವಿ, ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಅಂದಹಾಗೆ, “ಭೈರವ’ ಚಿತ್ರದ ಕಥೆ ಏನು? ಇದಕ್ಕೆ ಉತ್ತರಿಸುವ ನಿರ್ದೇಶಕ ಶಿವತೇಜಸ್, “ಇದು ಪಕ್ಕಾ ಸ್ವಮೇಕ್ ಚಿತ್ರ. ಇಲ್ಲಿ ಭರ್ಜರಿ ಆ್ಯಕ್ಷನ್ ಇದೆ. ಫ್ಯಾಮಿಲಿ ಸ್ಟೋರಿ ಹೈಲೈಟ್ ಆಗಿರಲಿದೆ. ಜೊತೆಗೆ ಪ್ರೀತಿ, ಸೆಂಟಿಮೆಂಟ್, ಹಾಸ್ಯ ಕೂಡ ಹೆಚ್ಚಾಗಿಯೇ ಇರಲಿದೆ. ಎಲ್ಲಾ ವರ್ಗಕ್ಕೂ ಒಂದು ಮಜವೆನಿಸುವ ಚಿತ್ರ ಕೊಡುವ ಉದ್ದೇಶದಿಂದ ಈ ಬಾರಿ ಪಕ್ಕಾ ತಯಾರಿಯೊಂದಿಗೆ ಬರುತ್ತಿದ್ದೇನೆ’ ಎಂಬುದು ನಿರ್ದೇಶಕ ಶಿವತೇಜಸ್ ಅವರ ಮಾತು. ಸದ್ಯಕ್ಕೆ ಚಿರಂಜೀವಿ ಸರ್ಜಾ ಚಿತ್ರ ನಾಯಕರಾಗಿ ಪಕ್ಕಾ ಆಗಿದ್ದಾರೆ.
ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಉಳಿದಂತೆ ಚಿತ್ರದಲ್ಲಿ ಸಾಧುಕೋಕಿಲ, ಕುರಿಪ್ರತಾಪ್ ಸೇರಿದಂತೆ ಇತರೆ ಕಲಾವಿದರ ದಂಡು ಇಲ್ಲಿರಲಿದೆ. ಎಚ್.ಸಿ.ವೇಣು ಛಾಯಾಗ್ರಹಣ ಮಾಡಲಿದ್ದು, ಸಾಧುಕೋಕಿಲ ಅವರ ಪುತ್ರ ಸುರಾಗ್ ಚಿತ್ರಕ್ಕೆ ನಾಲ್ಕು ಹಾಡುಗಳಿಗೆ ಸಂಗೀತ ನೀಡಲಿದ್ದಾರೆ. ರವಿವರ್ಮ ಅವರಿಲ್ಲಿ ಐದು ಭರ್ಜರಿ ಫೈಟ್ಸ್‌ಗೆ ಸಾಹಸ ನಿರ್ದೇಶನ ಮಾಡಲಿದ್ದಾರೆ.
ಮೈಸೂರು, ಬೆಳಗಾವಿ ಸೇರಿದಂತೆ ಇತರೆ ಸ್ಥಳಗಳಲ್ಲಿ ಸುಮಾರು 60 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಏಪ್ರಿಲ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ ಎಂಬುದು ನಿರ್ದೇಶಕರ ಮಾತು.