Advertisement

ಬಾಲ್ಯವಿವಾಹ ದುಷ್ಪರಿಣಾಮದ ಅರಿವು ಮೂಡಿಸಿ

12:07 PM Jun 26, 2019 | Naveen |

ಚಿತ್ರದುರ್ಗ: ಬಾಲ್ಯವಿವಾಹದ ದುಷ್ಪರಿಣಾಮಗಳು ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಲ್ಯವಿವಾಹ ತಡೆಗಟ್ಟುವ ಕುರಿತು ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತ ಕಿರು ಹೊತ್ತಿಗೆಯನ್ನು ಸಿದ್ಧಪಡಿಸಿ ಎಲ್ಲ ಶಾಲಾ ಮಕ್ಕಳಿಗೂ ವಿತರಿಸಬೇಕು. ಶಿಕ್ಷಕರು ಬಾಲ್ಯ ವಿವಾಹದ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು, ಮಕ್ಕಳ ಹಕ್ಕುಗಳ ಬಗ್ಗೆ ಪುಸ್ತಕದಲ್ಲಿರುವ ಅಂಶಗಳನ್ನು ಮಕ್ಕಳಿಗೆ ಬೋಧಿಸಿದರೆ ಮಕ್ಕಳಲ್ಲಿ ಅರಿವು ಮೂಡುತ್ತದೆ. ಎಲ್ಲ ಶಾಲೆಗಳ ಕಾಂಪೌಂಡ್‌ಗಳ ಮೇಲೆ ಬಾಲ್ಯವಿವಾಹ ನಿಷೇಧ ಕಾಯ್ದೆ, ಶಿಕ್ಷೆ, ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ, ಮಕ್ಕಳ ಸಹಾಯವಾಣಿ ಸೇರಿದಂತೆ ಎಲ್ಲ ವಿವರಗಳನ್ನು ಗೋಡೆ ಬರಹದ ಮೇಲೆ ಬರೆಸಬೇಕು. ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಎಂಬ ಫಲಕ ಹಾಕಬೇಕು. ಅಲ್ಲದೆ ಶಾಲಾ ಕೊಠಡಿಯೊಳಗೂ ಮಾಹಿತಿ ಫಲಕ ಇರಬೇಕು. ಶಾಲೆಯ ಪ್ರಾರ್ಥನೆ ಸಂದರ್ಭದಲ್ಲಿ ಮಕ್ಕಳಿಂದ ಬಾಲ್ಯವಿವಾಹವಾಗುವುದಿಲ್ಲ ಎಂಬ ಪ್ರತಿಜ್ಞಾ ವಿಧಿ ಸ್ವೀಕಾರದಂತಹ ಕಾರ್ಯಕ್ರಮ ತಪ್ಪದೇ ನಡೆಯಬೇಕು ಎಂದು ಡಿಡಿಪಿಐ ಆಂಥೋನಿ ಅವರಿಗೆ ಸೂಚಿಸಿದರು.

ಎಲ್ಲ ಗ್ರಾಮಗಳಲ್ಲಿ ಮಕ್ಕಳ ಹಕ್ಕುಗಳ ಸಭೆಗಳು, ತಾಲೂಕು ಮಟ್ಟದ ಸಮಿತಿ ಸಭೆಗಳು, ಜಾಗೃತಿ ಕಾರ್ಯಕ್ರಮಗಳನ್ನು ಆಯಾ ಸಿಡಿಪಿಒಗಳು ಕಡ್ಡಾಯವಾಗಿ ಆಯೋಜಿಸಬೇಕು. ಹಳ್ಳಿಗಳಲ್ಲಿ ಪೋಷಕರು ಬಡತನ ಹಾಗೂ ಆರ್ಥಿಕ ಪರಿಸ್ಥಿತಿಯ ನೆಪವೊಡ್ಡಿ ಜಾತ್ರೆಗಳು ನಡೆಯುವ ಸಂದರ್ಭದಲ್ಲಿ ಬಾಲ್ಯವಿವಾಹಗಳನ್ನು ಮಾಡುತ್ತಾರೆ. ಅಧಿಕಾರಿಗಳು ಜಾತ್ರೆಗಳು ನಡೆಯುವಂತಹ ಸಂದರ್ಭಗಳಲ್ಲಿ ಅಂತಹ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ಪಡೆದುಕೊಳ್ಳುತ್ತಿರಬೇಕು. ಬಾಲ್ಯವಿವಾಹದ ಬಗ್ಗೆ ಜಾಗೃತಿ ಫಲಕಗಳನ್ನು ದೇವಸ್ಥಾನ, ಮಸೀದಿ, ಮಠ, ಕಲ್ಯಾಣಮಂಟಪಗಳಲ್ಲಿ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎಂದು ಜಾಗ್ರತಿ ಬರಹಗಳು, ಚಿತ್ರಗಳ ಸಹಿತ ಅಳವಡಿಸಬೇಕು ಎಂದು ಸಿಡಿಪಿಒಗಳಿಗೆ ತಿಳಿಸಿದರು.

ಜಿಪಂ ಸಿಇಒ ಸಿ. ಸತ್ಯಭಾಮ ಮಾತನಾಡಿ, ಶಿಕ್ಷಣದ ಬಗ್ಗೆ ಜ್ಞಾನವಿಲ್ಲದ ಹಳ್ಳಿಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚುತ್ತಿವೆ. ಸಂಪ್ರದಾಯ, ಬಡತನ ಅಥವಾ ಅನಕ್ಷರತೆ ಕಾರಣದಿಂದ ಬಾಲ್ಯ ವಿವಾಹ ಹೆಚ್ಚಿವೆ. ಜಿಲ್ಲೆಯ ಗೊಲ್ಲರಹಟ್ಟಿ, ಲಂಬಾಣಿಹಟ್ಟಿ, ಭೋವಿ ಹಟ್ಟಿಗಳಲ್ಲಿ ಹೆಚ್ಚಿನದಾಗಿ ಬಾಲ್ಯವಿವಾಹಗಳು ನಡೆಯುತ್ತಿವೆ. ಹೊಸದುರ್ಗ ತಾಲೂಕಿನಲ್ಲಿಯೇ ಅತಿ ಹೆಚ್ಚು ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ. ಮಾಡದಕೆರೆ, ಮಾದಿಹಳ್ಳಿ, ದುಗ್ಗಾವರ, ಅತ್ತಿಘಟ್ಟ, ಮೆಟ್ಟಿನಹೊಳೆ ಮತ್ತಿತರ ಕಡೆಗಳಲ್ಲಿ ಬಾಲ್ಯವಿವಾಹಗಳು ನಡೆಯುತ್ತಿದ್ದು, ತಡೆಗಟ್ಟಲು ಏನು ಜಾಗೃತಿ ಮೂಡಿಸಿದ್ದೀರಾ ಎಂದು ಹೊಸದುರ್ಗ ಸಿಡಿಪಿಒ ಅವರನ್ನು ಪ್ರಶ್ನಿಸಿದರು.

Advertisement

ಇದಕ್ಕೆ ಉತ್ತರ ನೀಡಲು ಸಿಡಿಪಿಒ ಸಮರ್ಪಕ ಉತ್ತರ ನೀಡಲಿಲ್ಲ. ಆದ್ದರಿಂದ ಸಿಡಿಪಿಒ ಕಾರ್ಯವೈಖರಿಗೆ ಸಿಇಒ ಅಸಮಾಧಾನ ವ್ಯಕ್ತಪಡಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಾ ನಾಯಕ್‌ ಮಾತನಾಡಿ, ಜಿಲ್ಲೆಯಲ್ಲಿ 24 ಸಾವಿರ ಗರ್ಭಿಣಿಯರು ಇದ್ದಾರೆ. ವಿವಿಧ ಯೋಜನೆಗಳಡಿ ಸೌಲಭ್ಯ ದೊರಕಿಸಲು ಇಲಾಖೆ ಕ್ರಮ ಕೈಗೊಂಡಿದೆ ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ. ನಂದಗಾವಿ, ಡಿಡಿಪಿಐ ಎ.ಜೆ. ಆಂಥೋನಿ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್‌, ಸಿಡಿಪಿಒಗಳು ಹಾಗೂ ವಿವಿಧ ಇಲಾಖೆಗಳು ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next