ಚಿತ್ರದುರ್ಗ: ಸರ್ಕಾರಿ ಎಸ್ಸಿ-ಎಸ್ಟಿ ಹಾಸ್ಟೆಲ್ಗಳಲ್ಲಿನ ವಿದ್ಯಾರ್ಥಿಗಳ ಮಂಜೂರಾತಿ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನ ತೆಗೆದುಕೊಳ್ಳುವಂತಿಲ್ಲ ಎಂದು ಸಮಾಜಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದರಿಂದ ಜಿಲ್ಲೆಯ ಸಾವಿರಾರು ಎಸ್ಸಿ-ಎಸ್ಟಿ ವರ್ಗಗಳ ಮಕ್ಕಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿದೆ.
Advertisement
ಸತತ ಬರಗಾಲಕ್ಕೆ ತುತ್ತಾಗುತ್ತಿರುವ ಹಿಂದುಳಿದ ಜಿಲ್ಲೆಯಲ್ಲಿ ಬಡತನದಿಂದ ಬದುಕುತ್ತಿರುವ ಜನರಿಗೆ ಸಮಾಜಕಲ್ಯಾಣ ಇಲಾಖೆಯ ಸುತ್ತೋಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಸ್ಟೆಲ್ ಸಿಗುತ್ತದೆ ಎಂದು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ನಿರಾಸೆ ಅನುಭವಿಸುವಂತಾಗಿದೆ.
Related Articles
Advertisement
ಅಲ್ಲದೆ ಜಿಲ್ಲೆಯಲ್ಲಿನ 7 ಪರಿಶಿಷ್ಟ ವರ್ಗದ ಮೆಟ್ರಿಕ್‌ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ 525 ಮಂಜೂರಾತಿ ಇತ್ತು. 543 ಮಕ್ಕಳಿಗೆ ಪ್ರವೇಶ ಕಲ್ಪಿಸಲಾಗಿತ್ತು. ಅದೇ ರೀತಿ ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳು 7 ಇದ್ದು, ಮಂಜೂರಾತಿ ಸಂಖ್ಯೆ 713 ಆಗಿತ್ತು. ಆದರೆ 936 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿ ಶೈಕ್ಷಣಿಕವಾಗಿ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ಸರ್ಕಾರದ ಸುತ್ತೋಲೆಯಿಂದಾಗಿ ಬಹಳಷ್ಟು ಬಡ ಮಕ್ಕಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.
ಮೆಟ್ರಿಕ್‌ಪೂರ್ವ ಮತ್ತು ನಂತರದ ವಸತಿ ನಿಲಯಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ಜಿಲ್ಲಾ ಕೇಂದ್ರ ಚಿತ್ರದುರ್ಗ ನಗರದಲ್ಲಿ ಹಾಸ್ಟೆಲ್ ಸ್ಥಾನಗಳ ಬೇಡಿಕೆಗೆ ತಕ್ಕಂತೆ ವಸತಿ ನಿಲಯಗಳಿಲ್ಲ. ಇರುವ ಹಾಸ್ಟೆಲ್ಗಳಲ್ಲೇ ಅವಕಾಶ ಕಲ್ಪಿಸಲಾಗುತ್ತಿತ್ತು. ಈಗ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲದಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿ ಪದವಿ, ಪಿಯುಸಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಕಾಲೇಜು, ನರ್ಸಿಂಗ್, ಐಟಿಐ, ಬಿಇಡಿ, ಎಂಜಿನಿಯರಿಂಗ್, ಮೆಡಿಕಲ್ ಕಾಲೇಜು ಸೇರಿದಂತೆ ಶೈಕ್ಷಣಿಕವಾಗಿ ಹೆಚ್ಚಿನ ಅವಕಾಶಗಳಿವೆ. ಇದರಿಂದ ಹೆಚ್ಚಿನ ವಿದ್ಯಾರ್ಥಿಗಳು ಜಿಲ್ಲೆಗೆ ಆಗಮಿಸಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಹಾಸ್ಟೆಲ್ಗಳಿಲ್ಲ. ಹಾಗಾಗಿ ಮಕ್ಕಳು ಮತ್ತು ಪೋಷಕರು, ಜನಪ್ರತಿನಿಧಿಗಳ ಬೆನ್ನು ಬಿದ್ದು ಹಾಸ್ಟೆಲ್ನಲ್ಲಿ ಸ್ಥಾನ ಕೊಡಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಜನಪ್ರತಿನಿಧಿಗಳಿಗೂ ಸಮಸ್ಯೆಯಾಗುತ್ತಿದೆ.
ಹಾಸ್ಟೆಲ್ ವಂಚಿತ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ 1,500 ರೂ. ಪಾವತಿಸಲಾಗುತ್ತದೆ. ಆದರೆ ಹಾಸ್ಟೆಲ್ ವಂಚಿತ ಎಲ್ಲ ಮಕ್ಕಳಿಗೂ ‘ವಿದ್ಯಾಸಿರಿ’ ಯೋಜನೆ ಅನ್ವಯವಾಗುವುದಿಲ್ಲ. ವಿದ್ಯಾಸಿರಿ ಆಯ್ಕೆಗೆ ಮೆರಿಟ್ ಆಧರಿಸಿರುವುದರಿಂದ ಮಕ್ಕಳಿಗೆ ಸಾಕಷ್ಟು ತೊಂದರೆಯಾಗಿದೆ. ಇದರಿಂದ ಕೆಲವು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಆತಂಕ ವ್ಯಕ್ತಪಡಿಸುತ್ತಿದ್ದರೆ, ಮತ್ತೆ ಕೆಲವು ವಿದ್ಯಾರ್ಥಿಗಳು ದುಬಾರಿ ಶುಲ್ಕ ಪಾವತಿಸಿ ಪಿಜಿಗಳ ಮೋರೆ ಹೋಗಿ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಆದ್ದರಿಂದ ಸಂಬಂಧಿಸಿದವರು ಕೂಡಲೇ ಸಮಸ್ಯೆ ನಿವಾರಣೆಗೆ ಮುಂದಾಗಬೇಕಿದೆ.
ಮೂಲ ಸೌಲಭ್ಯ ಇರುವಂತಹ ಹಾಸ್ಟೆಲ್ಗಳಲ್ಲಿ ಹೆಚ್ಚುವರಿಯಾಗಿ ಸಾಕಷ್ಟು ವಿದ್ಯಾರ್ಥಿಗಳಿಗೆ ಹಾಸ್ಟೆಲ್ನಲ್ಲಿ ಪ್ರವೇಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿತ್ತು. ಈಗ ಸರ್ಕಾರ ನಿರ್ಬಂಧಿಸಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಹೆಚ್ಚುವರಿ ಪ್ರವೇಶ ಕಲ್ಪಿಸಲು ಸಾಧ್ಯವಾಗದು.•ಕೆ. ನಾಗರಾಜ್,
ಉಪನಿರ್ದೇಶಕರು, ಸಮಾಜಕಲ್ಯಾಣ ಇಲಾಖೆ.