Advertisement

ಕಾಳಿಂಗಗಳ ಸಮಗ್ರ ಅಧ್ಯಯನಕ್ಕೆ “ಚಿಪ್‌’

09:59 AM Oct 22, 2019 | Sriram |

ಕುಂದಾಪುರ: ವಿಶ್ವದಲ್ಲಿಯೇ ಅತೀ ಹೆಚ್ಚು ಕಾಳಿಂಗ ಸರ್ಪಗಳ ವಾಸ ಸ್ಥಾನವಾಗಿರುವ ಪಶ್ಚಿಮ ಘಟ್ಟ ಪ್ರದೇಶದ ಆಗುಂಬೆಯಲ್ಲಿ ಅವುಗಳ ಸಮಗ್ರ ಅಧ್ಯಯನಕ್ಕಾಗಿ 2 ಗಂಡು ಕಾಳಿಂಗ ಸರ್ಪಗಳಿಗೆ ಜಿಪಿಎಸ್‌ ಮಾದರಿ ಚಿಪ್‌ ಅಳವಡಿಸಲಾಗಿದೆ.

Advertisement

ಆಗುಂಬೆ ಮಳೆಕಾಡು ಅಧ್ಯಯನ (ರೈನ್‌ ಫಾರೆಸ್ಟ್‌ ರಿಸರ್ಚ್‌ ಸೆಂಟರ್‌) ಕೇಂದ್ರವು ಈ ಸಂಶೋಧನೆ ಕೈಗೊಂಡಿದ್ದು, 20 ಗ್ರಾಂ ತೂಕದ ಚಿಪ್‌ ಅಳವಡಿಸಲಾಗಿದೆ. ಕಾಳಿಂಗಗಳ ಜೀವನ ಕ್ರಮ, ಆಹಾರ ಪದ್ಧತಿ, ಚಲನವಲನ, ಸಂತನಾಭಿವೃದ್ಧಿ ಸಹಿತ ಸಮಗ್ರ ಮಾಹಿತಿ ಕಲೆ ಹಾಕುವುದು ಉದ್ದೇಶ.

ಏನಿದು ಚಿಪ್‌?
ಸುಮಾರು 20 ಗ್ರಾಂ. ತೂಕದ ಜಿಪಿಎಸ್‌ ಮಾದರಿಯ ಚಿಪ್‌ ಇದು. 6 ತಿಂಗಳ ಹಿಂದೆ ಕಾಳಿಂಗಗಳನ್ನು ಸೆರೆ ಹಿಡಿದು, ಬೆನ್ನಿನ ಮೇಲೆ ಚಿಪ್‌ ಅಳವಡಿಸಿದ ಬಳಿಕ ಆಗುಂಬೆ ಆಸುಪಾಸಿನ ಮೇಗರವಳ್ಳಿ ಮತ್ತು ತಲ್ಲೂರಂಗಡಿಯಲ್ಲಿ ಅರಣ್ಯಕ್ಕೆ ಬಿಡಲಾಗಿದೆ. ಮುಂದಿನ 3 ವರ್ಷದವರೆಗೆ ಈ ಚಿಪ್‌ ಅಳವಡಿಸಿದ ಹಾವಿನ ಚಲನ ವಲನ ತಿಳಿಯಬಹುದು. ತಲಾ ಇಬ್ಬರಿಂದ ಪ್ರತಿದಿನ ಬೆಳಗ್ಗೆ 7.30ರಿಂದ ಸಂಜೆ 6 ಗಂಟೆಯವರೆಗೆ ಹಾವಿನ ದಿನಚರಿಯ ಮಾಹಿತಿ ಸಂಗ್ರಹ ಮತ್ತು ಸಂಶೋಧನೆ ನಡೆಯುತ್ತಿದೆ.

ಗಣತಿಗೆ ಪಿಟ್‌ಟ್ಯಾಗ್‌
ಹಾವುಗಳ ಗಣತಿಗಾಗಿ ಆಗುಂಬೆ ಸುತ್ತಮುತ್ತ 183 ಹಾವುಗಳಿಗೆ ಪಿಟ್‌ ಟ್ಯಾಗ್‌ ಅಳವಡಿಸಲಾಗಿದೆ. ಇಂಥ ಹಾವುಗಳಿಗೆ ಪ್ರತ್ಯೇಕ ಯೂನಿಕ್‌ ಐಡೆಂಟಿಟಿ ನಂಬರ್‌ ಇರುತ್ತದೆ. ಇದರಿಂದ ಈ ಭಾಗದಲ್ಲಿ ಎಲ್ಲೇ ಕಾಳಿಂಗ ಸರ್ಪ ಹಿಡಿದರೂ ಕೇಂದ್ರದ ತಂಡ ಬಂದು ಸ್ಕ್ಯಾನ್‌ ಮಾಡಿದಾಗ ಪಿಟ್‌ ಟ್ಯಾಗ್‌ ಅಳವಡಿಸಿದ್ದರೆ, ಯೂನಿಕ್‌ ನಂಬರ್‌ ತೋರಿಸುತ್ತದೆ. 7 ಜನರ ತಂಡ ಈ ಅಧ್ಯಯನ ನಡೆಸುತ್ತಿದೆ. ಗರಿಷ್ಠ 16 ಕೆ.ಜಿ.ಯ ಹಾವುಗಳು ಕೂಡ ಪಿಟ್‌ಟ್ಯಾಗ್‌ ಮೂಲಕ ಪತ್ತೆಯಾಗಿವೆ ಎಂದು ಕೇಂದ್ರದ ಬೇಸ್‌ ಮ್ಯಾನೇಜರ್‌ ಜೈಕುಮಾರ್‌ ಮಾಹಿತಿ ನೀಡುತ್ತಾರೆ.

ಪಿಟ್‌ ಟ್ಯಾಗ್‌ ಅಧ್ಯಯನದಿಂದ
ಗಂಡಿಗಿಂತ ಹೆಣ್ಣು ಕಾಳಿಂಗಗಳ ಸಂಖ್ಯೆ ತುಂಬಾ ಕಡಿಮೆಯಿದೆ ಎಂದು ತಿಳಿದು ಬಂದಿದೆ. ಈಗಿನ ಪ್ರಕಾರ 100 ಗಂಡು ಹಾವಿಗೆ ಕೇವಲ 3 ಹೆಣ್ಣು ಕಾಳಿಂಗಗಳು ಮಾತ್ರ ಇವೆ. ಲಿಂಗಾನುಪಾತದಲ್ಲಿ ಇಷ್ಟು ವ್ಯತ್ಯಾಸಕ್ಕೆ ಕಾರಣವೇನು ಅನ್ನುವುದನ್ನು “ಚಿಪ್‌’ ಮೂಲಕ ಅಧ್ಯಯನ ಮಾಡಲಾಗುತ್ತಿದೆ.
– ಅಜಯ್‌ಗಿರಿ
ಸಂಶೋಧನ ನಿರ್ದೇಶಕ, ಆಗುಂಬೆ ಮಳೆಕಾಡು ಅಧ್ಯಯನ ಕೇಂದ್ರ

Advertisement
Advertisement

Udayavani is now on Telegram. Click here to join our channel and stay updated with the latest news.

Next