ಚಿಂತಾಮಣಿ: ಕಳೆದ ಒಂದು ವಾರದ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಚಿಕ್ಕಬಳ್ಳಾಪುರ,ಶಿಡ್ಲಘಟ್ಟ, ಚಿಂತಾಮಣಿ ತಾಲ್ಲೂಕಿನ ಹಲವು ಗ್ರಾಮಗಳ ಸಂಪರ್ಕ ಸೇತುವೆ,ರಸ್ತೆ ಮತ್ತು ಕೆರೆ ಕಟ್ಟೆಗಳಿಗೆ ಹಾನಿಯಾಗಿದ್ದ ಹಿನ್ನೆಲೆಯಲ್ಲಿ ಬುಧವಾರ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿಂತಾಮಣಿ ತಾಲೂಕಿನ ಮುಂಗಾನಹಳ್ಳಿ ಹೋಬಳಿಯ ರಾಘುಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಗೊಲ್ಲಹಳ್ಳಿ ಹಾಗೂ ಮಾದಮಂಗಲ ಗ್ರಾಮದ ಸಂಪರ್ಕ ಸೇತುವೆ ಹಾನಿಯಾಗಿದ್ದು,ತಾತ್ಕಾಲಿಕ ರಸ್ತೆ ನಿರ್ಮಾಣವಾಗಿರುವುದನ್ನು ವೀಕ್ಷಿಸಿ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚಿಸಿದರು.ಇದೇ ತಾಲೂಕಿನ ಚಿಲಕಲನೇರ್ಪು ಹೋಬಳಿಯ ಕದಿರೇಪಲ್ಲಿ ಮತ್ತು ಪಾಪತಿಮ್ಮನಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಹಾನಿಯಾಗಿದ್ದು,ಸ್ಥಳೀಯರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಎರಡೂ ಗ್ರಾಮಗಳ ಜನರ ಸಂಚಾರಕ್ಕೆ ತೊಂದರೆಯಾಗದೆ ಆದ್ಯತೆಯ ಮೇಲೆ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡುವಂತೆ ಹಾಗೂ ಶಾಶ್ವತ ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದರು.
ಜಿಲ್ಲೆಯಲ್ಲಿ ಮಳೆಯಿಂದಾಗಿ ಕೃಷಿ, ತೋಟಗಾರಿಕೆ,ರೇಷ್ಮೆ ಬೆಳೆಗಳಿಗೆ ಹಾಗಿರುವ ಹಾನಿಯ ಬಗ್ಗೆ ಕೃಷಿ, ತೋಟಗಾರಿಕೆ, ರೇಷ್ಮೆ,ಕಂದಾಯ ಇಲಾಖೆಗಳ ಮೂಲಕ ಜಂಟಿ ಸಮೀಕ್ಷೆ ಮಾಡಿಸಿ ಅಂಕಿ ಸಂಖ್ಯೆಯೊಂದಿಗೆ ಸಂಪೂರ್ಣ ವರದಿಯನ್ನು ಬೇಗ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಈ ವೇಳೆ ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆ,ಸೇತುವೆ ಮತ್ತು ಕೆರೆಕಟ್ಟೆಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯಕ್ಕೆ ಅಗತ್ಯವಿರುವ ಸಮೀಕ್ಷೆ ನಡೆಸಿ ಪ್ರಸ್ತಾವನೆಯನ್ನೂ ಸಲ್ಲಿಸಬೇಕು.ಮಳೆಹಾನಿಯ ವಿವಿಧ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಿ ಗ್ರಾಮೀಣ ಪ್ರದೇಶದ ಜನಜೀವನ ಸಹಜ ಸ್ಥಿತಿಗೆ ಬರುವಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಎ.ಎನ್. ರಘುನಂದನ್,ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್,ಸಣ್ಣನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ನರೇಂದ್ರ ಸ್ವಾಮಿ,ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ತಿಮ್ಮರಾಯಪ್ಪ, ಪಿ.ಆರ್.ಇ.ಡಿ ಯ ಕಾರ್ಯಪಾಲಕ ಅಭಿಯಂತರ ರಾಮಕೃಷ್ಣಪ್ಪ,ತಹಸೀಲ್ದಾರ್,
ಹನುಮಂತರಾಯಪ್ಪ , ಸ್ಥಳೀಯ ಜನಪ್ರತಿನಿಧಿಗಳು, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು/ಸಿಬ್ಬಂದಿ ಹಾಜರಿದ್ದರು.