ವಿಜಯ ರಾಘವೇಂದ್ರ ಸುಮಾರು ಎರಡು ವರ್ಷಗಳ ಹಿಂದೆ ಒಪ್ಪಿಕೊಂಡ ಚಿತ್ರವೊಂದು ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಫಸ್ಟ್‌ಲುಕ್ ಟೀಸರ್ ಬಿಡುಗಡೆಯಾಗಿದೆ. ಹೌದು, “ಯದಾ ಯದಾ ಹೀ ಧರ್ಮಸ್ಯ’ ಎಂಬ ಚಿತ್ರವೊಂದರಲ್ಲಿ ವಿಜಯರಾಘವೇಂದ್ರ ನಟಿಸಿದ್ದಾರೆ. ನೀವು ಈ ಹಿಂದೆ ನೋಡಿದ ವಿಜಯರಾಘವೇಂದ್ರ ಅವರಿಗೂ ಈ ಚಿತ್ರದಲ್ಲಿ ನೋಡುವ ವಿಜಯರಾಘವೇಂದ್ರ ಅವರಿಗೂ ಸಾಕಷ್ಟು ವ್ಯತ್ಯಾಸವಿದೆ. ಮೊದಲ ಬಾರಿಗೆ ಔಟ್ ಅಂಡ್ ಔಟ್ ಆ್ಯಕ್ಷನ್ ಇಮೇಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ ವಿಜಯ ರಾಘವೇಂದ್ರ. ಕನ್ನಡ, ತಮಿಳು ಮತ್ತು ತೆಲುಗಿನ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ವಿರಾಜ್, “ಯದಾ ಯದಾ ಹೀ ಧರ್ಮಸ್ಯ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಕನ್ನಡ ಬಾರದಿದ್ದರೂ, ಕನ್ನಡದ ಮೇಲಿನ ಪ್ರೀತಿ, ಮತ್ತು ಇತ್ತೀಚೆಗೆ ಬರುತ್ತಿರುವ ಹೊಸತರದ ಕನ್ನಡ ಚಿತ್ರಗಳ ಮೇಲಿನ ಆಸಕ್ತಿಯಿಂದಾಗಿ ಇಂಧೋರ್ ಮೂಲದ ಅಕ್ಷರ ತಿವಾರಿ, “ಅಕ್ಷರ ಪ್ರೊಡಕ್ಷನ್ಸ್’ ಬ್ಯಾನರ್‌ನಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ವಿಜಯ ರಾಘವೇಂದ್ರ, “ನಿರ್ದೇಶಕರು ಬಂದು ಕಥೆ ಹೇಳಿದಾಗ, ಆರಂಭದಲ್ಲಿ ಬೇಡ ಅಂದಿದ್ದೆ. ಏಕೆಂದರೆ ನನಗೆ ಜೋರಾಗಿ ಕಿರುಚೋದು, ಅಬ್ಬರಿಸೋದು ಇಷ್ಟವಿಲ್ಲ. ಆದರೆ, ನಿರ್ದೇಶಕರು ಈ ಪಾತ್ರವನ್ನು ನೀವೇ ಮಾಡಬೇಕು ಎಂದರು. ಹಾಗಾಗಿ, ಮಾಡಿದೆ. ಈಗ ಫಸ್ಟ್‌ಲುಕ್ ಟೀಸರ್ ನೋಡಿದ ಮೇಲೆ ಸ್ವಲ್ಪ ಸಮಾಧಾನವಾಯಿತು’ ಎಂದರು. ಚಿತ್ರದಲ್ಲಿ ಸಾಯಿಕುಮಾರ್ ವಿಲನ್ ಆಗಿ ನಟಿಸಿದ್ದು, ಶ್ರಾವ್ಯಾ ನಾಯಕಿ.
“ಇದೊಂದು ಕಮರ್ಷಿಯಲ್ ಆ್ಯಕ್ಷನ್ ಎಂಟರ್‌ಟೈನ್ಮೆಂಟ್ ಚಿತ್ರ. ನೋಡುಗರಿಗೆ ಪ್ರತಿ ದೃಶ್ಯವೂ ಇಷ್ಟವಾಗುವಂತೆ ಚಿತ್ರವನ್ನು ಮಾಡಿದ್ದೇವೆ. ಚಿತ್ರದ ದೃಶ್ಯಗಳು ಅದ್ಧೂರಿಯಾಗಿ ಮೂಡಿಬಂದಿದ್ದು, ನೋಡುಗರಿಗೆ ಹೊಸ ಅನುಭವ ನೀಡಲಿದೆ. ಅಂದುಕೊಂಡಿರುವುದನ್ನು ತೆರೆಮೇಲೆ ತರಲು ಯಶಸ್ವಿಯಾಗಿದ್ದೇವೆ. ನಮ್ಮ ಪ್ರಯತ್ನ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ. ಔಟ್ ಆ್ಯಂಡ್ ಔಟ್ ಮಾಸ್ ಎಂಟರ್‌ಟೈನ್ಮೆಂಟ್ ಸಿನಿಮಾವಾದ್ರೂ, ಇದರಲ್ಲಿ ಒಂದು ಸಂದೇಶವಿದೆ’ ಎನ್ನುವುದು ನಿರ್ದೇಶಕ ವಿರಾಜ್ ಮಾತು. ನಿರ್ಮಾಪಕ ಅಕ್ಷರ ತಿವಾರಿ ಹೆಚ್ಚೇನು ಮಾತನಾಡಲಿಲ್ಲ. ನಾಯಕಿ ಶ್ರಾವ್ಯಾ ಕೂಡಾ ತಮ್ಮ ಪಾತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಚಿತ್ರದಲ್ಲಿ ಬುಲೆಟ್ ಕೂಡಾ ಓಡಿಸಿದ್ದಾರಂತೆ. ಪ್ರಥಮ್ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ಲಹರಿ ವೇಲು ಕೂಡಾ ಸಿನಿಮಾದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದು, ಇವತ್ತಿನ ಕಾಲಕ್ಕೆ ಈ ಟೈಟಲ್ ಹೊಂದಿಕೆಯಾಗುತ್ತದೆ ಎಂದರು. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಜ್ಯೂಡಾ ಸ್ಯಾಂಡಿ ಮತ್ತು ಪರಾಗ್ ಈ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. “ಯದಾ ಯದಾ ಹೀ ಧರ್ಮಸ್ಯ’ ಚಿತ್ರವನ್ನು ಬೆಂಗಳೂರು, ಮುರುಡೇಶ್ವರ, ಗೋಕರ್ಣ, ಸಕಲೇಶಪುರ ಸ್ತುಮುತ್ತ ಮತ್ತು ಗೋವಾ, ಕೇರಳದ ಸುಂದರ ತಾಣಗಳಲ್ಲಿ ಸುಮಾರು 65 ದಿನಗಳ ಕಾಲ ಚಿತ್ರೀಕರಿಸಲಾಗಿದೆ.