Advertisement

ತೆರೆದ ಶಾಲೆಯಲ್ಲೀಗ ಚಿಣ್ಣರ ಕಲರವ

12:11 AM Jun 08, 2019 | Sriram |

ಬಸ್ರೂರು: ಕಂಡ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಕನ್ನಡ) ಯಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಕಂಡ್ಲೂರು ಕನ್ನಡ ಶಾಲೆಯನ್ನು ಹತ್ತಿರದ ಬೇರೊಂದು ಶಾಲೆಯ ಜತೆ ವಿಲೀನಗೊಳಿಸುವ ಯೋಚನೆಯನ್ನು ಇಲಾಖೆ ಹೊಂದಿದ್ದು ಈ ಶಾಲೆಗೆ ಖಾಯಂ ಬೀಗ ಬೀಳುವ ಮಾತುಗಳೂ ಕೇಳಿ ಬರುತ್ತಿದ್ದವು.

Advertisement

ಇದನ್ನರಿತ ಊರ ಪ್ರಮುಖರೆಲ್ಲಾ ಒಂದೆಡೆ ಸೇರಿ 134 ವರ್ಷಗಳ ಸುದೀರ್ಘ‌ ಶೈಕ್ಷಣಿಕ ಇತಿಹಾಸ ಹೊಂದಿರುವ ಕಂಡ್ಲೂರು ಕನ್ನಡ ಶಾಲೆಗೆ ಬೀಗ ಜಡಿಯದೆ ಉಳಿಸಿಕೊಳ್ಳುವ ಕುರಿತು ಹೊಸ ಯೋಜನೆಯೊಂದನ್ನು ರೂಪಿಸಿದರು.

ಚುಕ್ಕಾಣಿ ಹಿಡಿದ ಅಧ್ಯಕ್ಷೆ
ಈ ಯೋಜನೆಯ ಪರಿಣಾಮವಾಗಿ ಶಾಲಾ ಅಭ್ಯುದಯ ಸಮಿತಿ ರಚನೆಗೊಂಡಿತು. ಇದರ ಅಧ್ಯಕ್ಷೆಯಾಗಿ ಕಾವ್ರಾಡಿ ಗ್ರಾ.ಪಂ. ಅಧ್ಯಕ್ಷೆ ಗೌರಿ ಆರ್‌. ಶ್ರೀಯಾನ್‌ ಅವರು ಆಯ್ಕೆಯಾದರು. ಅಭ್ಯುದಯ ಸಮಿತಿ ಜತೆ ಶಾಲಾ ಎಸ್‌.ಡಿ.ಎಂ.ಸಿ ಮತ್ತು ಊರ ಶೈಕ್ಷಣಿಕ ಅಭಿಮಾನಿಗಳು ಕೈಜೋಡಿಸಿದರು. ಶಾಲಾ ಅಭ್ಯುದಯ ಸಮಿತಿ ಮತ್ತು ಶಾಲಾ ಎಸ್‌.ಡಿ.ಎಂ.ಸಿ. ಯವರು ಕಂಡ್ಲೂರು ಮತ್ತು ಪರಿಸರದ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿದರು. ಶಾಲೆಯಲ್ಲಿ ಕೆಲವೊಂದು ಹೊಸ ಸೌಲಭ್ಯಗಳನ್ನು ಅಳವಡಿಸಿರುವುದರ ಬಗ್ಗೆ ತಿಳಿ ಹೇಳಿದರು.

ನೂತನ ಸೌಕರ್ಯ
ಹೊಸ ಸೌಲಭ್ಯಗಳಲ್ಲಿ ಮಕ್ಕಳಿಗೆ ಉಚಿತ ವಾಹನ ವ್ಯವಸ್ಥೆ, ನ್ಪೋಕನ್‌ ಇಂಗ್ಲೀಷ್‌, ಕಂಪ್ಯೂಟರ್‌ ಶಿಕ್ಷಣ, ಸ್ಮಾರ್ಟ್‌ ಕ್ಲಾಸ್‌, ಮೂವರು ಸ್ನಾತಕೋತ್ತರ ಪದವಿ ಪಡೆದ ಗೌರವ ಶಿಕ್ಷಕರೊಂದಿಗೆ ನಾಲ್ಕು ಮಂದಿ ಖಾಯಂ ಶಿಕ್ಷಕರು, ಉತ್ತಮ ಶಾಲಾ ಪರಿಸರ, ಆಂಗ್ಲ ಮಾಧ್ಯಮ ಶಿಕ್ಷಣಗಳು ಮುಖ್ಯವಾಗಿದೆ. ಬೇಸಿಗೆ ರಜೆಯಲ್ಲಿ ಶಿಕ್ಷಕರು, ಶಾಲಾ ಅಭ್ಯುದಯ ಸಮಿತಿ ಮತ್ತು ಶಾಲಾ ಎಸ್‌.ಡಿ.ಎಂ.ಸಿ. ಯವರು ಶಾಲೆಯಲ್ಲೆ ಇದ್ದು ಈ ಎಲ್ಲಾ ಸೌಲಭ್ಯಗಳ ಜೊತೆಗೆ ಶಾಲೆಗೆ ಬಣ್ಣ ಬಳಿದು ಹೊಸರೂಪ ನೀಡಿದ್ದು ಪ್ರಾರಂಭೋತ್ಸವದಂದು ಶಾಲೆ ಮಕ್ಕಳಿಗೆ, ಪೋಷಕರಿಗೆ ಆಕರ್ಷಕವಾಗಿ ಕಾಣ ತೊಡಗಿತು.

ಮಕ್ಕಳ ಸೇರ್ಪಡೆ
ಈ ಎಲ್ಲಾ ಯೋಜನೆ-ಯೋಚನೆಗಳ ಪರಿಣಾಮವಾಗಿ ಪ್ರಸ್ತುತ ಕಂಡ್ಲೂರು ಕನ್ನಡ ಶಾಲೆಯಲ್ಲಿ 57 ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಹೊಸ ಮಕ್ಕಳು ಸೇರ್ಪಡೆಯಾಗುತ್ತಿದ್ದಾರೆ.

Advertisement

ಆಂಗ್ಲ ಮಾಧ್ಯಮ ಶಾಲೆಗೆ ಹೋಗುತ್ತಿದ್ದ ಮಕ್ಕಳೂ ಪ್ರಸ್ತುತ ಕಂಡ್ಲೂರು ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎನ್ನವವರಿಗೆ ಕಂಡ್ಲೂರು ಶಾಲೆ ಮಾದರಿ ಶಾಲೆಯಾಗಿದೆ ಎನ್ನಬಹುದು.

ಸೌಲಭ್ಯ ಆಕರ್ಷಿಸಿತು
ನಾವು ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದೆವು. ಆದರೆ ನಮ್ಮ ಕಾಲಬುಡದಲ್ಲೆ ಸರಕಾರಿ ಕನ್ನಡ ಶಾಲೆಯು ಇಷ್ಟೊಂದು ಸೌಲಭ್ಯಗಳನ್ನು ಹೊಂದಿರುವುದನ್ನು ಕಂಡು ನಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿದ್ದೇವೆ.
-ಶಕುಂತಲಾ,
ಶಾಲಾ ಪೋಷಕಿ

ಪರಿಶ್ರಮದ ಫಲ
ಬೇಸಿಗೆ ರಜಾ ಅವಧಿಯಲ್ಲಿ ನಮ್ಮ ಸಮಿತಿಯವರು ಮನೆ ಮನೆಗೆ ಭೇಟಿ ನೀಡಿ ಪೋಷಕರಿಗೆ ಶಾಲಾ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿದ್ದ ಪರಿಶ್ರಮದ ಫಲವಾಗಿ ಶಾಲೆ ಈಗ ಹೊಸ ರೂಪ ಪಡೆದಿದೆ.
-ಗೌರಿ ಆರ್‌. ಶ್ರೀಯಾನ್‌,
ಅಧ್ಯಕ್ಷೆ, ಶಾಲಾ ಅಭ್ಯುದಯ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next