Advertisement

ಮೈಸೂರಲ್ಲಿ ಚಿಣ್ಣರ ದಸರಾ, ರೈತ ದಸರಾಗಳಿಗೆ ಚಾಲನೆ

09:35 AM Oct 13, 2018 | |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಚಿಣ್ಣರ ದಸರಾ, ರೈತ ದಸರಾಗಳಿಗೆ ಚಾಲನೆ ನೀಡಲಾಯಿತು. ನಗರದ ಜೆ.ಕೆ.ಮೈದಾನದಲ್ಲಿ ಆಯೋಜಿಸಿರುವ ರೈತ ದಸರಾ ಉದ್ಘಾಟಿಸಿ ಮಾತನಾಡಿದ ಪ್ರವಾಸೋದ್ಯಮ ಮತ್ತು ರೇಷೆಸಚಿವ ಸಾ.ರಾ.ಮಹೇಶ್‌, ರೈತರ 49 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿರುವ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. 

Advertisement

ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಮಾತನಾಡಿ, ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳದೆ ರೈತ ಸಮುದಾಯ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ರೈತರ ಬವಣೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸಮ್ಮಿಶ್ರ ಸರ್ಕಾರ ರೈತರ 48 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದರೂ ರೈತರು ಇನ್ನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ರೈತರು ಯಾರನ್ನೋ ಮೀರಿಸಲು ತಮ್ಮ ಜಮೀನು ಮಾರಿ ಆಡಂಬರದಿಂದ ಮಕ್ಕಳ ಮದುವೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿಕೊಳ್ಳಿ. ಸಚಿವನಾಗಿರುವ ನಾನು ನನ್ನ ಮಕ್ಕಳಿಗೆ ತಿರುಪತಿಯಲ್ಲಿ ಸರಳ ವಿವಾಹ ಮಾಡಿದ್ದೇನೆ. ಆಡಂಬರದ ಮದುವೆಗೆ ಜಮೀನು ಮಾರುವ ಬದಲು
ಆ ಜಮೀನನ್ನೇ ಅವರಿಗೆ ಕೊಟ್ಟರೆ ಉತ್ತಮ ಬದುಕು ರೂಪಿಸಿಕೊಳ್ಳುತ್ತಾರೆ ಎಂದರು. 

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಿಂದ ರೈತ ದಸರಾ  ಮೆರವಣಿಗೆ ನಡೆಯಿತು. ಸಚಿವ ಜಿ.ಟಿ.ದೇವೇಗೌಡ ಅವರು ಸ್ವತ: ಎತ್ತಿನಗಾಡಿ ಹೊಡೆದುಕೊಂಡು ಬಂದು ಗಮನ ಸೆಳೆದರು. ಇದೇ ವೇಳೆ, ಮಾನಸ ಗಂಗೋತ್ರಿಯ ರಾಣಿಬಹದ್ದೂರ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಚಿಗುರು ಕವಿಗೋಷ್ಠಿಯನ್ನು ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ ಉದ್ಘಾಟಿಸಿದರು. ನಗರದ ಶಾರದಾ ವಿಲಾಸ
ಶತಮಾನೋತ್ಸವ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಮಕ್ಕಳ ದಸರಾ ಸಮಾರಂಭ ಆಯೋಜಿಸಲಾಗಿತ್ತು. ಮಕ್ಕಳ ದಸರಾ ಕಾರ್ಯಕ್ರಮ ಒಂದೆಡೆ ಮಕ್ಕಳ ಪ್ರತಿಭೆ ಅನಾವರಣಗೊಳಿಸಿದರೆ, ಮತ್ತೂಂದೆಡೆ ವಿದ್ಯಾರ್ಥಿಗಳ ಜ್ಞಾನಾರ್ಜನೆಗೂ ಸಾಕ್ಷಿಯಾಯಿತು. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಸ್ತುಪ್ರದರ್ಶನದಲ್ಲಿ ಮಕ್ಕಳು ತಾವೇ ತಯಾರಿಸಿದ ವಿವಿಧ ವಸ್ತುಗಳನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.

ಮಕ್ಕಳ ದಸರದಲ್ಲಿ ಸಚಿವರ ಮುನಿಸು
ಮೈಸೂರು: ಮಕ್ಕಳ ದಸರಾ ಉದ್ಘಾಟನೆ ವೇಳೆ ವೇದಿಕೆಯಲ್ಲಿ ಕುಳಿತಿದ್ದ ಸಚಿವರ ಹೆಸರು ಹೇಳದ ಕಾರಣಕ್ಕೆ ಅಸಮಾಧಾನಗೊಂಡ ಸಚಿವದ್ವಯರು ಕಾರ್ಯಕ್ರಮದಿಂದ ನಿರ್ಗಮಿಸಿದ ಪ್ರಸಂಗ ನಡೆಯಿತು. ನಗರದ ಶಾರದಾ ವಿಲಾಸ ಕಾಲೇಜಿನಲ್ಲಿ ನಡೆದ ಮಕ್ಕಳ ದಸರಾ ಕಾರ್ಯಕ್ರಮವನ್ನು ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎನ್‌.ಮಹೇಶ್‌ ಉದ್ಘಾಟಿಸಬೇಕಿತ್ತು. ಆದರೆ ಅವರ ಬದಲಿಗೆ ಇದೇ ಮೊದಲ ಬಾರಿಗೆ ದಸರಾ ಸಮಾರಂಭಗಳಲ್ಲಿ ಭಾಗವಹಿಸಿದ್ದ ಕೃಷಿ ಸಚಿವ ಶಿವಶಂಕರ್‌ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸುವ ಸಂದರ್ಭ ವೇದಿಕೆಯಲ್ಲಿದ್ದ ಸಚಿವ ಶಿವಶಂಕರ್‌ ರೆಡ್ಡಿ ಅವರನ್ನು ಸ್ವಾಗತಿಸಲು ಅಧಿಕಾರಿಗಳು ಮರೆತರು. ಇದರಿಂದ ಸಿಡಿಮಿಡಿಗೊಂಡ ಸಚಿವ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್‌, ವೇದಿಕೆಯಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀವೇ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಅಸಮಾಧಾನ ವ್ಯಕ್ತಪಡಿಸಿ, ಮೂವರೂ ಕಾರ್ಯಕ್ರಮದಿಂದ ಹೊರ ನಡೆದರು.

Advertisement

Udayavani is now on Telegram. Click here to join our channel and stay updated with the latest news.

Next