ರಂಗ ಕಲೆಗಳಲ್ಲಿ ಪ್ರಧಾನವಾದ ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಎನ್ನುವ ನಾಲ್ಕು ಅಂಗಗಳಲ್ಲಿ ಪ್ರಥಮ ಪ್ರಾಶಸ್ತ ಆಹಾರ್ಯ (ವೇಷಭೂಷಣ ಮತ್ತು ಬಣ್ಣಗಾರಿಕೆ)ಕ್ಕೆ. ಯಾಕೆಂದರೆ ಪಾತ್ರಗಳ ಮುಖವರ್ಣಿಕೆಯೇ ರಂಗದ ಮುಂದಿರುವ ಪ್ರೇಕ್ಷಕರಿಗೆ ಪಾತ್ರದ ಗುಣಸ್ವಭಾವಗಳನ್ನು ತಿಳಿಸುತ್ತದೆ. ಇಲ್ಲಿ ಮುಖವರ್ಣಿಕೆಗೆ ಬೇಕಾಗಿರುವುದು ಸಾಕಷ್ಟು ತಾಳ್ಮೆ, ಶ್ರದ್ಧೆ ಮತ್ತು ಪಾತ್ರಗಳ ಬಗ್ಗೆ ಅರಿವು. ಇದನ್ನು ಎಳವೆಯಲ್ಲಿಯೇ ಮಕ್ಕಳಿಗೆ ಪ್ರಾಯೋಗಿಕತೆಯೊಂದಿಗೆ ತಿಳಿಹೇಳಿದಾಗ ಮುಂದೆ ಉತ್ತಮ ಕಲಾವಿದರಾಗಬಲ್ಲರು. ಅದಕ್ಕಾಗಿ ನಲವತ್ತೆರಡರ ಹರೆಯದ ಸಾಲಿಗ್ರಾಮ ಮಕ್ಕಳ ಮೇಳವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು (ಉಡುಪಿ ಜಿಲ್ಲೆ) ಇದರ ಸಹಯೋಗದೊಂದಿಗೆ ಮೇಳದ ಕಚೇರಿಯ ಆವರಣದಲ್ಲಿ “”ಚಿಣ್ಣರ ಮುಖವರ್ಣಿಕೆ ಶಿಬಿರ”ವನ್ನು ಏರ್ಪಡಿಸಿತ್ತು. ಮೊದಲಿಗೆ ಪೂರ್ವರಂಗದ ಹಾಡುಗಳಿಗೆ ಸೊಗಸಾಗಿ ಹೆಜ್ಜೆಗಳನ್ನು ಹಾಕಿದ ಎಳೆಯರು, ಯಕ್ಷರಂಗದ ಶಿಸ್ತು ಮತ್ತು ಚಟುವಟಿಕೆಗಳು ಹೇಗಿರಬೇಕೆಂಬುದನ್ನು ಅರಿತರು. ಮುಂದೆ ಮುಖವರ್ಣಿಕೆಯ ಭಾಗದಲ್ಲಿ ಬಿಳಿಬಣ್ಣದ (ಜಿಂಕ್ ಆಕ್ಸೆ„ಡ್) ಹುಡಿಯನ್ನು ಅಂಗೈಯಲ್ಲಿ ಹಿಡಿದು ಅದಕ್ಕೆ ಮಿತವಾಗಿ ಹಳದಿ ಮತ್ತು ಕೆಂಪು ವರ್ಣಗಳನ್ನು ಸೇರಿಸಿ ತೆಂಗಿನೆಣ್ಣೆ ಯೊಂದಿಗೆ ಕಲಸಿ ತಯಾರಿಸಿದ ಪೇಸ್ಟನ್ನು ಮುಖಕ್ಕೆ ಹಚ್ಚುವ ಕ್ರಮ, ಬಳಿಕ ರೋಸ್ ಪೌಡರ್ ಬಳಕೆ, ಅನಂತರ ಮುಖದ ಸೂಕ್ತ ಭಾಗದಲ್ಲಿ ಒಟ್ಟಂದಕ್ಕೆ ಪೂರಕವಾದ ಕೆಂಪು ಹಳದಿ ಮಿಶ್ರಣ ಶೇಡ್, ಕಾಡಿಗೆಯಿಂದ ಕಣ್ಣಿನ ರೆಪ್ಪೆಗಳ ಮುಂಭಾಗ ಮತ್ತು ಹುಬ್ಬಿನ ರಚನೆಯೊಂದಿಗೆ ಎರಡೂ ಕಣ್ಣುಗಳ ಬದಿಗಳಲ್ಲಿ ಬಿಳಿವರ್ಣದ ಮುದ್ರೆಗಳು, ಹಣೆಯಲ್ಲಿ ನಾಮ ಗಳನ್ನು ಬರೆಯುವ ರೀತಿಯನ್ನು ಕುಂಚಗಳ ಹಿಡಿತದ ಅರಿವಿನೊಂದಿಗೆ ಕಲಿತರು. ಪಾತ್ರಗಳ ಸಾತ್ವಿಕ, ರಾಜಸ ಮತ್ತು ತಾಮಸ ಗುಣಗಳನ್ನು ಬಣ್ಣ ಮತ್ತು ರೇಖೆಗಳ ಮುಖೇನ ಮುಖದಲ್ಲಿ ಅಭಿವ್ಯಕ್ತಿಗೊಳಿಸುವುದು, ಹಾಸ್ಯ ಪಾತ್ರಗಳನ್ನು ಬಿಂಬಿಸುವ ವಿವಿಧ ಮುಖವರ್ಣಿಕೆಗಳ ಬಗೆಗೆ ಅರಿತುಕೊಂಡರು. ಅಡಿಯಿಂದ ಮುಡಿಯವರೆಗೆನ ಯûಾಭರಣಗಳ ಮತ್ತು ವಸ್ತ್ರವಿನ್ಯಾಸಗಳ ಪ್ರಾತ್ಯಕ್ಷಿಕೆ ಸಹಿತ ಪರಿಚಯ ಮಾಡಿಕೊಂಡರು. ದಿನವಿಡೀ ನಡೆದ ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷ್ಣಸ್ವಾಮಿ ಜೋಯಿಸ್ ಬ್ರಹ್ಮಾವರ, ಬಿರ್ತಿ ಬಾಲಕೃಷ್ಣ, ಸುಜಯೀಂದ್ರ ಹಂದೆ, ಸುಹಾಸ ಕರಬ ಮುಂತಾದವರು ಸಹಕರಿಸಿದ್ದರು.
ತಮ್ಮ ಮುಖವರ್ಣಿಕೆಯನ್ನು ತಾವೇ ಮಾಡಿ ಕೊಂಡು ಆತ್ಮವಿಶ್ವಾಸದ ನಗುವಿನೊಂದಿಗೆ ಅರಳಿದ ಚಿಣ್ಣರ ಮುಖಗಳು ಕಾರ್ಯಗಾರದ ಯಶಸ್ಸನ್ನು ಸಾರಿದವು. ಈ ಕಾರ್ಯಕ್ರಮದ ರೂವಾರಿ ಮೇಳದ ಸ್ಥಾಪಕ ಎಚ್. ಶ್ರೀಧರ ಹಂದೆ ಮತ್ತು ಬಳಗ ಸ್ತುತ್ಯರ್ಹರು.
ಕೆ. ದಿನಮಣಿ ಶಾಸ್ತ್ರೀ