Advertisement

ಚಿಣ್ಣರ ಬಿಂಬ:ನಾರ್ಥ್ -ಈಸ್ಟ್‌;ಮಕ್ಕಳ ಪ್ರತಿಭಾ ಸ್ಪರ್ಧೆ ಉದ್ಘಾಟನೆ

03:34 PM Nov 28, 2018 | Team Udayavani |

ನವಿ ಮುಂಬಯಿ: ಹೊರನಾಡಿನಲ್ಲಿ ನಮ್ಮೂರಿನ ಭಾಷೆ, ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಚಿಣ್ಣರ ಬಿಂಬದ ಮಕ್ಕಳ ಉತ್ಸವಕ್ಕೆ ಬಂದು ತುಂಬಾ ಸಂತೋಷವಾಗುತ್ತಿದೆ. ಈ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿ ಮಕ್ಕಳ ಪ್ರತಿಭೆಯನ್ನು ಕಂಡು ಆಶ್ಚರ್ಯವಾಗುತ್ತಿದೆ ಎಂದು  ನವಿಮುಂಬಯಿ ಮಹಾನಗರ ಪಾಲಿಕೆಯ ನಗರ ಸೇವಕಿ ವಿನಯಾ ಮಡ್ವಿ ಅವರು ನುಡಿದರು.

Advertisement

ನ. 25ರಂದು ಐರೋಲಿಯ ಜ್ಞಾನ ವಿಕಾಸ ಮಂಡಳ ಪದವಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಚಿಣ್ಣರ ಬಿಂಬ ಮುಂಬಯಿ ಇದರ ಶಿಬಿರ ವಲಯ ಮಟ್ಟದ ಪ್ರತಿಭಾ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಚಿಣ್ಣರ ಪ್ರತಿಭೆಗೆ ತಕ್ಕ ವೇದಿಕೆಯನ್ನು ಒದಗಿಸುವ ಈ ಸಂಸ್ಥೆಯ ರೂವಾರಿ ಪ್ರಕಾಶ್‌ ಭಂಡಾರಿ ಮತ್ತು ಅವರ ತಂಡದ ಕಾರ್ಯ ಅಭಿನಂದನೀಯ. ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವಲ್ಲಿ ಚಿಣ್ಣರ ಬಿಂಬದ ಪಾತ್ರ ಅಭಿನಂದನೀಯ. ಈ ಸಂಸ್ಥೆಯು ಇನ್ನಷ್ಟು ಪ್ರಸಿದ್ಧಿಯನ್ನು ಪಡೆಯಲಿ ಎಂದು ಹಾರೈಸಿದರು.

ಸಮಾರಂಭಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡಿದ ಶಿಕ್ಷಣ ಪ್ರೇಮಿ ಎಂ. ಎಸ್‌. ಭೂಮರೆಡ್ಡಿ ಅವರು, ಕಳೆದ ಹದಿನಾರು ವರ್ಷಗಳಿಂದ ಚಿಣ್ಣರ ಬಿಂಬದ ವಿಕಾಸವನ್ನು ಕಂಡು ಬಹಳ ಸಂತೋಷವಾಗುತ್ತಿದೆ. ಈ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ದುಡಿಯುವ ಚಿಣ್ಣರ ಬಿಂಬದ ರೂವಾರಿಗಳು, ಪಾಲಕರು-ಪೋಷಕರ ಪರಿಶ್ರಮ ಅಭಿನಂದನೀಯ ಎಂದು ನುಡಿದರು.
ನೆರೂಲ್‌ ಶ್ರೀ ಶನೀಶ್ವರ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಚಿಣ್ಣರ ಬಿಂಬದ ರೂವಾರಿಗಳಲ್ಲಿ ಒಬ್ಬರಾದ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ ಅವರು ಮಾತನಾಡಿ, ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅವರಿಗೆ ಸೂಕ್ತವಾದ ಮಾರ್ಗದರ್ಶನ ನೀಡಬೇಕು. 

ಅದಕ್ಕಾಗಿಯೇ 7ರಿಂದ 14 ವರ್ಷದೊಳಗಿನ ಮಕ್ಕಳಿಗೆ ಅರ್ಥವಾಗುವ ವಯಸ್ಸಿನಲ್ಲಿ ಸಂಸ್ಕಾರ, ಸಂಸ್ಕೃತಿಯ ಜತೆಗೆ ಅವರ ಪ್ರತಿಭೆಗೆ ಸೂಕ್ತವಾದ ವೇದಿಕೆಯನ್ನು ಒದಗಿಸುವುದು ಚಿಣ್ಣರ ಬಿಂಬದ ಉದ್ದೇಶವಾಗಿದೆ. ಮಕ್ಕಳ ಜತೆಗೆ ಪಾಲಕರಿಗೂ ತಮ್ಮ ಪ್ರತಿಭೆಯನ್ನು ಹೊರಗೆಡವಲು ಅವಕಾಶ ಕಲ್ಪಿಸಲಾಗುತ್ತದೆ. ಹಾಗಾಗಿ ಪಾಲಕರು ಕೂಡಾ ಇಂದು ಚಿಣ್ಣರ ಬಿಂಬ ಸಂಸ್ಥೆಯನ್ನು ಮುಂದುವರಿಸುವ ಅನುಭವವನ್ನು ಹೊಂದಿದ್ದಾರೆ. ನಾವು ಕಟ್ಟಿದ ಈ ಚಿಣ್ಣರ ಬಿಂಬ ಎಂಬ ಮನೆಯಲ್ಲಿ ಒಳ್ಳೆಯ ಮನಸ್ಸಿನ, ತುಂಬು ಹೃದಯದ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗಟ್ಟಾಗಿ ಬಾಳಬೇಕು ಎಂಬುವುದೇ ನಮ್ಮ ಆಶಯವಾಗಿದೆ ಎಂದರು.
ಶಿಲ್ಪಿಯು ಒಂದು ಕಲ್ಲನ್ನು ಕೆತ್ತಿ ಮೂರ್ತಿಯನ್ನಾಗಿಸುವಂತೆ ನಾವು ನಮ್ಮ ಚಿಣ್ಣರ ಬಿಂಬದ ಮಕ್ಕಳನ್ನು ಪ್ರೀತಿಯಿಂದ ತಿದ್ದಿ ಸಂಸ್ಕಾರವಂತರನ್ನಾಗಿಸಬೇಕು. ಮಕ್ಕಳಲ್ಲಿ ನಂಬಿಕೆ ಹಾಗೂ ವಿಶ್ವಾಸ ಮೂಡಿಸುವಂತಹ ಕಾರ್ಯವನ್ನು ಚಿಣ್ಣರ ಬಿಂಬ ಮಾಡುತ್ತಿದೆ. ಚಿಣ್ಣರ ಬಿಂಬ ಒಂದು ಕುಟುಂಬ ಇದ್ದಂತೆ. ಇಲ್ಲಿ ಆತ್ಮೀಯತೆಯಿದೆ. ಶಿಸ್ತಿನ ಜೊತೆಗೆ ಒಳ್ಳೆಯ ವಿಚಾರಗಳನ್ನು ಕಲಿಯಬಹುದು ಎಂದು ಚಿಣ್ಣರ ಬಿಂಬ ಕೇಂದ್ರೀಯ ಸಮಿತಿಯ ಸದಸ್ಯೆ ಗೀತಾ ಹೇರಾಳ ಅವರು ಪ್ರಾಸ್ತಾವಿಕವಾಗಿ ನುಡಿದರು.
ಸಮಾರಂಭದಲ್ಲಿ ಸತೀಶ್‌ ಶೆಟ್ಟಿ ಮೂಡುಕೊಟ್ರಪಾಡಿ, ನಾಗೇಶ್‌ ಶೆಟ್ಟಿ ಬೈಕಾಡಿ ಹೆದ್ದಾರಿಮನೆ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ, ವಿವಿಧ ಪದಾಧಿಕಾರಿಗಳಾದ  ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು, ಜಯಪ್ರಕಾಶ್‌ ಶೆಟ್ಟಿ, ಜಯಂತ್‌ ಕೋಟ್ಯಾನ್‌, ಅಶೋಕ್‌ ಶೆಟ್ಟಿ, ಆಶಾ ಪೂಜಾರಿ, ಸಂಧ್ಯಾ ಮೋಹನ್‌, ಮಂಜುಳಾ ಶೆಟ್ಟಿ, ನೀತಾ ಶೆಟ್ಟಿ, ಪ್ರತಿಭಾ ಶೆಟ್ಟಿ, ಭಾರತಿ ಹೆಗ್ಡೆ, ಚೈತ್ರಾ ಆಳ್ವ ಉಪಸ್ಥಿತರಿದ್ದರು.
ಜಾಹ್ನವಿ ಕೋಟ್ಯಾನ್‌, ಶ್ರಾವ್ಯಾ ಬಿ. ಶೆಟ್ಟಿ, ನೇಹಾ ಉದಯ್‌ ಶೆಟ್ಟಿ, ದರ್ಶನ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿರು. 

ಡೊಂಬಿವಲಿ ಶಿಬಿರದ ಚಿಣ್ಣರು ಪ್ರಾರ್ಥನೆಗೈದರು.  ಇದೇ ಸಂದರ್ಭದಲ್ಲಿ ಭಾಷಣ, ನೃತ್ಯ, ಏಕಪಾತ್ರಾಭಿನಯ, ಸಮೂಹ ಗಾಯನ, ಭಾವಗೀತೆ, ಶ್ಲೋಕ ಪಠಣ ಇನ್ನಿತರ ವಿವಿಧ ಸ್ಪರ್ಧೆಗಳು ನಡೆದವು. ತೀರ್ಪುಗಾರರಾಗಿ ರಮಾ ಉಡುಪ, ಸುಜಾತಾ ಶೆಟ್ಟಿ, ಶೋಭಾ ಶೆಟ್ಟಿ, ತಾರಾ ಬಂಗೇರ, ಜಗದೀಶ್‌ ರೈ ಅವರು ಸಹಕರಿಸಿದರು. ಚಿಣ್ಣರು ಮತ್ತು ಪಾಲಕರು  ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

ನಮ್ಮೂರಿನ ಕಲೆ, ಸಂಸ್ಕೃತಿಗಳು ಮಾಯವಾಗುತ್ತಿರುವ ಸಂದರ್ಭದಲ್ಲಿ ಮಕ್ಕಳಿಗಾಗಿ ಹುಟ್ಟಿಕೊಂಡ ಸಂಸ್ಥೆ ಚಿಣ್ಣರ ಬಿಂಬ. ಹಿಂದಿಯಲ್ಲಿ ಒಂದು ಮಾತಿದೆ ರೇಶನ್‌ ಮೇ ಭಾಷಣ್‌, ಭಾಷಣ್‌ ಮೇ ರೇಶನ್‌. ಅದೇ ರೀತಿ ಚಿಣ್ಣರ ಬಿಂಬದಲ್ಲಿ ರೇಶನ್‌ ಕೊಟ್ಟು ಭಾಷಣ ಮಾಡಿಸುತ್ತಾರೆ. ಮಕ್ಕಳಿಗೆ ಭಾಷೆಯ ಜತೆಗೆ ಭಜನೆ, ಜಾನಪದ ಕಲೆ, ಶ್ಲೋಕಗಳನ್ನು ಕಲಿಸಿ ಮುಂದಿನ ಪೀಳಿಗೆಯನ್ನು ಸಂಸ್ಕಾರವಂತರನ್ನಾಗಿಸುವ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ.
-ಸಂತೋಷ್‌ ಡಿ. ಶೆಟ್ಟಿ, ಗೌರವ ಕಾರ್ಯದರ್ಶಿ, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ ಸಮಿತಿ 

ಎಷ್ಟೋ ಭಾಷೆಗಳು ನಶಿಸಿ ಹೋಗುತ್ತಿರುವಾಗ ನಮ್ಮ ಕನ್ನಡ ಭಾಷೆಯ ಉಳಿವಿಗಾಗಿ ಹೊರನಾಡಿನಲ್ಲಿ ಕನ್ನಡ ಭಾಷೆಯ ಜತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುತ್ತಿರುವ ಈ ಸಂಸ್ಥೆ ದೇಶಕ್ಕೆ ಮಾತ್ರವಲ್ಲ, ವಿಶ್ವಕ್ಕೆ ಮಾದರಿಯಾಗಲಿ.
– ಸೀತಾರಾಮ ಶೆಟ್ಟಿ,  ಅಧ್ಯಕ್ಷರು, ಜಾನು ಮೆಮೋರಿಯಲ್‌ ಎಜುಕೇಶನ್‌ ಟ್ರಸ್ಟ್‌

Advertisement

Udayavani is now on Telegram. Click here to join our channel and stay updated with the latest news.

Next