ಮಂಗಳೂರು: ಉದಯವಾಣಿ, ಕೆನರಾ ಹೈಸ್ಕೂಲ್
ಅಸೋಸಿಯೇಶನ್ ವತಿಯಿಂದ ಉಡುಪಿ ಆರ್ಟಿಸ್ಟ್ ಫೋರಂ ಸಹಯೋಗದಲ್ಲಿ `ಚಿಣ್ಣರ ಬಣ್ಣ-2019′ ಮಂಗಳೂರು ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯು ನಗರದ ಉರ್ವ ಕೆನರಾ ಹೈಸ್ಕೂಲ್‌ನಲ್ಲಿ ಶನಿವಾರದಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಕೆನರಾ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಾಮನ ಕಾಮತ್ ಅವರು ಮಾತನಾಡಿ ಬದುಕು ರೂಪಿಸಿಕೊಳ್ಳಲು ಮಕ್ಕಳಿಗೆ ಎಳವೆಯಲ್ಲಿಯೇ ಮೈಗೂಡಿಸಿಕೊಂಡ ಚಟುವಟಿಕೆಗಳು ಪೂರಕವಾಗುತ್ತದೆ. ಅಂತಹ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಒದಗಿಸಿಕೊಟ್ಟ ಉದಯವಾಣಿ ಮತ್ತು ಆರ್ಟಿಸ್ಟ್ ಫೋರಂ ನ ಕೆಲಸ ಶ್ಲಾಘನೀಯ. ಲಭಿಸಿದ ಅವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ವಿಶೇಷ ಆರ್ಥಿಕ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಮಚಂದ್ರ ಭಂಡಾರ್ಕರ್ ಮಾತನಾಡಿ, ಹಿಂದೆಲ್ಲ ಚಿತ್ರಕಲೆಗೆ ಪ್ರೋತ್ಸಾಹ ಇರಲಿಲ್ಲ. ಪ್ರಸ್ತುತ ಮಕ್ಕಳಿಗೆ ಪ್ರೋತ್ಸಾಹದ ಕೊರತೆ ಇಲ್ಲ. ಪ್ರೋತ್ಸಾಹ ಮತ್ತು ಪ್ರೇರಣೆಯೊಂದಿಗೆ ವಿದ್ಯಾರ್ಥಿಗಳು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.
ಇನ್ನೋರ್ವ ಅತಿಥಿ, ಅಗರಿ ಎಂಟರ್‌ಪ್ರೈಸಸ್ ಮಾಲಕ ಅಗರಿ ರಾಘವೇಂದ್ರ ರಾವ್ ಮಾತನಾಡಿ, ಚಿಣ್ಣರ ಬಣ್ಣ ಸ್ಪರ್ಧೆ ಆಯೋಜಿಸುವ ಮೂಲಕ ಸುಂದರ ಚಿಣ್ಣರ ಲೋಕವೇ ಇಲ್ಲಿ ತೆರೆದುಕೊಂಡಿದೆ ಎಂದು ಅಭಿಪ್ರಾಯಿಸಿದರು.
ಕೆನರಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಬಸ್ತಿ ಪುರುಷೋತ್ತಮ ಶೆಣೈ, ಸುರೇಶ್ ಕಾಮತ್, ಗಣೇಶ್ ಕಾಮತ್, ಆರ್ಟಿಸ್ಟ್ ಫೋರಂ ಸದಸ್ಯ ವಿಷ್ಣು ಶೇವಗೂರ್ ಉಪಸ್ಥಿತರಿದ್ದರು.
ಉದಯವಾಣಿ ಮ್ಯಾಗಝಿನ್ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಆನಂದ್ ಕೆ. ಪ್ರಸ್ತಾವನೆಗೈದರು. ಉದಯವಾಣಿ ಮಂಗಳೂರು ಸುದ್ದಿ ವಿಭಾಗದ ಉಪ ಮುಖ್ಯಸ್ಥ ಸುರೇಶ್ ಪುದುವೆಟ್ಟು ಸ್ವಾಗತಿಸಿದರು. ಮಾರ್ಕೆಟಿಂಗ್ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಉಮೇಶ್ ಎನ್. ಶೆಟ್ಟಿ ವಂದಿಸಿದರು. ಸೀನಿಯರ್ ಮ್ಯಾನೇಜರ್ ಸತೀಶ್ ಮಂಜೇಶ್ವರ ನಿರೂಪಿಸಿದರು.
ಹುರುಪಿನಿಂದ ಚಿತ್ರ ಬರೆದ ಚಿಣ್ಣರು:ಚಿಣ್ಣರ ಬಣ್ಣ ಚಿತ್ರಕಲಾ ಸ್ಪರ್ಧೆಗೆ ಮಂಗಳೂರು ತಾಲೂಕಿನ ವಿವಿಧ ಶಾಲೆಗಳಿಂದ ಸುಮಾರು 2000ಕ್ಕೂ ಹೆಚ್ಚು ಮಂದಿ ಚಿಣ್ಣರು ಭಾಗವಹಿಸಿದ್ದರು. ದಿನವಿಡೀ ಮಳೆ ಸುರಿದರೂ, ಮಕ್ಕಳ ಉತ್ಸಾಹಕ್ಕೆ ಮಳೆ ಅಡ್ಡಿಯಾಗಲಿಲ್ಲ. ಸ್ಪರ್ಧೆಗೆ ಒಂದು ಗಂಟೆ ಮೊದಲೇ ಆಗಮಿಸಿ, ಅತ್ಯುತ್ಸಾಹದಿಂದಲೇ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.