ನವದೆಹಲಿ:ಉತ್ತರ ದೆಹಲಿಯ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಬೌದ್ಧ ಬಿಕ್ಕು ವೇಷದಲ್ಲಿ ವಾಸವಾಗಿದ್ದು, ಬೇಹುಗಾರಿಕೆ ನಡೆಸುತ್ತಿದ್ದ ಶಂಕಿತ ಚೀನಾ ಯುವತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ (ಅಕ್ಟೋಬರ್ 21) ತಿಳಿಸಿದ್ದಾರೆ.
ಇದನ್ನೂ ಓದಿ:ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ‘ಜಿಹಾದ್’ ಪಾಠ ಮಾಡಿದ್ದಾನೆ: ಕೈ ನಾಯಕ ಶಿವರಾಜ್ ಪಾಟೀಲ್
ಆಕೆಯ ಬಳಿ ಇದ್ದ ಗುರುತು ಪತ್ರದಲ್ಲಿ ನೇಪಾಳ ರಾಜಧಾನಿ ಕಾಠ್ಮಂಡು ವಿಳಾಸ ಹೊಂದಿದ್ದು, ಡೋಲ್ಮಾ ಲಾಮಾ ಎಂಬ ಹೆಸರನ್ನು ಹೊಂದಿದ್ದಾಳೆ. ಆದರೆ ಆಕೆಯ ನಿಜವಾದ ಹೆಸರು ಕೈ ರೂವೊ ಎಂದು ದಾಖಲಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ದೆಹಲಿ ವಿಶ್ವವಿದ್ಯಾನಿಯಲದ ಉತ್ತರ ಕ್ಯಾಂಪಸ್ ಬಳಿ ಇರುವ ಪ್ರವಾಸಿಗರ ಜನಪ್ರಿಯ ಟಿಬೆಟಿಯನ್ ನಿರಾಶ್ರಿತ ಶಿಬಿರದ ಮಜ್ನು ಕಾ ತಿಲ್ಲಾ ಕಾಲೋನಿಯಲ್ಲಿ ವಾಸವಾಗಿದ್ದಳು. ಈ ಕಾಲೋನಿಯಲ್ಲಿ ಈಕೆ ಸಾಂಪ್ರದಾಯಿಕ ಕಡು ಕೆಂಪು ಬಣ್ಣದ ವಸ್ತ್ರ ಧರಿಸಿ ಬೌದ್ಧ ಬಿಕ್ಕು ವೇಷದಲ್ಲಿ ವಾಸವಾಗಿರುವುದಾಗಿ ವರದಿ ವಿವರಿಸಿದೆ.
ಶಂಕಿತ ಡೋಲ್ಮಾ ಬಗ್ಗೆ ಪೊಲೀಸ್ ಅಧಿಕಾರಿಗಳು ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ ಅವರ ದಾಖಲೆಗಳನ್ನು ಪರಿಶೀಲಿಸಿದಾಗ, ಕೈ ರೂವೋ 2019ರಲ್ಲಿ ಚೀನಾದ ಪಾಸ್ ಪೋರ್ಟ್ ಬಳಸಿ ಭಾರತಕ್ಕೆ ಬಂದಿರುವುದಾಗಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಡೋಲ್ಮಾಳನ್ನು ವಶಕ್ಕೆ ಪಡೆದು ಪ್ರಶ್ನಿಸಿದ್ದ ಸಂದರ್ಭದಲ್ಲಿ ತನ್ನನ್ನು ಚೀನಾದ ಕಮ್ಯೂನಿಷ್ಟ್ ಪಕ್ಷದ ಕೆಲವು ಮುಖಂಡರು ಕೊಲ್ಲಲು ಬಯಸಿದ್ದರು ಎಂದು ತಿಳಿಸಿದ್ದಳು. ಈಕೆಗೆ ಇಂಗ್ಲೀಷ್, ಮ್ಯಾಂಡ್ರಿಯನ್ ಮತ್ತು ನೇಪಾಳಿ ಸೇರಿ ಮೂರು ಭಾಷೆಗಳು ತಿಳಿದಿರುವುದಾಗಿ ವರದಿ ಹೇಳಿದೆ.
ಆಕೆಯ ಹೇಳಿಕೆ ಮತ್ತು ನಡವಳಿಕೆ ಬಗ್ಗೆ ಸಂಶಯ ಹೊಂದಿದ್ದು, ಬಂಧನಕ್ಕೊಳಗಾಗಿರುವ ಡೋಲ್ಮಾ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.