Advertisement

ಬರಲಿದೆ ಹಾರುವ ಎಲೆಕ್ಟ್ರಿಕ್‌ ಕಾರು! ಅತ್ಯಾಧುನಿಕ ತಂತ್ರಜ್ಞಾನ ಬಳಕೆ

09:42 AM Oct 15, 2022 | Team Udayavani |

ದುಬೈ: ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿಯ ಈ ಯುಗದಲ್ಲಿ ಹಿಂದೊಮ್ಮೆ ಕಲ್ಪನೆಯಾಗಿದ್ದ ಅಂಶಗಳು ವಾಸ್ತವವಾಗಬಲ್ಲದು ಎಂಬುದಕ್ಕೆ ಹಾರುವ ಎಲೆಕ್ಟ್ರಿಕ್‌ ಕಾರು ಸಾಕ್ಷಿಯಾಗಿದೆ.

Advertisement

ಚೀನ ಮೂಲದ ಕಂಪನಿ ಕ್ಸಿಪೆಂಗ್‌ ಏರೋಎಚ್‌ಟಿ ತಯಾರಿಸಿರುವ “ಕ್ಸಿಪೆಂಗ್‌ ಎಕ್ಸ್‌2′ ಹೆಸರಿನ ಐದನೇ ಪೀಳಿಗೆಯ ಸಂಪೂರ್ಣ ವಿದ್ಯುತ್‌ಚಾಲಿತ ಹಾರುವ ಕಾರು ದುಬೈನಲ್ಲಿ ಬುಧವಾರ ಪ್ರಾಯೋಗಿಕವಾಗಿ ರಸ್ತೆಯಲ್ಲಿ ಸಂಚಾರ ಮತ್ತು ಆಕಾಶದಲ್ಲಿ ಹಾರಾಟ ಎರಡನ್ನೂ ಯಶಸ್ವಿಯಾಗಿ ನಡೆಸಿದೆ. ಮಾನವ ರಹಿತ ಹಾರುವ ಕಾರಿನ ಮಾದರಿ ಬಳಸಿ 90 ನಿಮಿಷ ಪರೀಕ್ಷಾರ್ಥ ಹಾರಾಟ ನಡೆಸಲಾಗಿದೆ.

2024ರ ವೇಳೆಗೆ ಲಭ್ಯ:
ದುಬೈನಲ್ಲಿ ಮೊದಲು ತನ್ನ ಸೇವೆ ಪ್ರಾರಂಭಿಸಲು ಕಂಪನಿಯು ಒಪ್ಪಂದಕ್ಕೆ ಸಹಿ ಹಾಕಿದೆ. 2024ರ ವೇಳೆಗೆ ಆರನೇ ಪೀಳಿಗೆಯ ಹಾರುವ ಎಲೆಕ್ಟ್ರಿಕ್‌ ಕಾರು ಗ್ರಾಹಕರಿಗೆ ಲಭ್ಯವಾಗಲಿದೆ. ಇದರ ಬೆಲೆ 1,56,600 ಡಾಲರ್‌ಗಿಂತಲೂ ಕಡಿಮೆ ಇರಲಿದೆ ಎಂದು ಕಂಪನಿ ಹೇಳಿದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಕೆ:
ಎರಡು ಆಸನಗಳ ಈ ಕಾರನ್ನು ವರ್ಟಿಕಲ್‌ ಟೇಕ್‌ ಆಫ್ ಮತ್ತು ಲ್ಯಾಂಡಿಂಗ್‌ ತಂತ್ರಜ್ಞಾನದಲ್ಲಿ ತಯಾರಿಸಲಾಗಿದೆ. ಅಲ್ಲದೇ ಇದು ಸಂಪೂರ್ಣ ಎಲೆಕ್ಟ್ರಿಕ್‌ ಬ್ಯಾಟರಿ ಚಾಲಿತ ಕಾರಾಗಿದೆ. ಇದನ್ನು ಕಡಿಮೆ ದೂರವಿರುವ ಸ್ಥಳಕ್ಕೆ ಸಂಚರಿಸಲು ಮತ್ತು ಸರಕು ಸಾಗಣೆಗೆ ಬಳಸಬಹುದಾಗಿದೆ.

ಗಂಟೆಗೆ 130 ಕಿ.ಮೀ. ವೇಗ:
ಇದು ವಿಮಾನ ನಿಯಂತ್ರಣ ವ್ಯವಸ್ಥೆ ಮತ್ತು ಆಟೋಮ್ಯಾಟಿಕ್‌ ಹಾರಾಟದ ಸಾಮರ್ಥ್ಯಗಳನ್ನು ಹೊಂದಿದೆ. ಈ ಕಾರು ಗಂಟೆಗೆ ಗರಿಷ್ಠ 130 ಕಿ.ಮೀ. ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ.

Advertisement

ಅಟೋಮ್ಯಾಟಿಕ್‌ ಹಾರಾಟ ವ್ಯವಸ್ಥೆ:
ಈ ಹಾರುವ ಕಾರಿನಲ್ಲಿ ಆಟೋಮ್ಯಾಟಿಕ್‌ ಹಾರಾಟದ ಆಯ್ಕೆ ನೀಡಲಾಗಿದೆ. ಗ್ರಾಹಕರು ಕೇವಲ ಒಂದು ಬಟನ್‌ ಒತ್ತುವುದರಿಂದ ಸುರಕ್ಷಿತ ಸ್ಟಾರ್ಟ್‌, ಟೇಕ್‌ ಆಫ್ ಮತ್ತು ಲ್ಯಾಂಡಿಂಗ್‌ ಮಾಡಬಹುದು.

2024- ರ ವೇಳೆಗೆ ಗ್ರಾಹಕರಿಗೆ ಲಭ್ಯ
1,56,600 ಡಾಲರ್‌- ಕಾರಿನ ಅಂದಾಜು ಬೆಲೆ
130 ಕಿ.ಮೀ. – ಪ್ರತಿ ಗಂಟೆಗೆ ಕಾರಿನ ವೇಗ
2 – ಹಾರುವ ಕಾರಿನಲ್ಲಿರುವ ಆಸನಗಳು

Advertisement

Udayavani is now on Telegram. Click here to join our channel and stay updated with the latest news.

Next