ಮಣಿಪಾಲ: ಲಡಾಖ್‌ನ ಚುಮಾರ್-ಡೆಮ್‌ಚೋಕ್ ಪ್ರದೇಶದಲ್ಲಿ ಚೀನದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ಸೈನಿಕನನ್ನು ಭಾರತೀಯ ಸೇನೆಯು ಬಂಧಿಸಿದೆ. ಆಕಸ್ಮಿಕವಾಗಿ ಭಾರತದ ಗಡಿಗೆ ಪ್ರವೇಶಿಸಿರಬಹುದು ಎಂದು ಮೂಲಗಳು ತಿಳಿಸಿವೆ.
ಪಿಎಲ್‌ಎ ಸೈನಿಕನನ್ನು ಕಾರ್ಪೋರಲ್ ವಾಂಗ್ ಯಾ ಲಾಂಗ್ ಎಂದು ಗುರುತಿಸಲಾಗಿದೆ. ಕಠಿನ ಹವಾಮಾನ ಪರಿಸ್ಥಿತಿಗಳಿಂದ ಅವನನ್ನು ರಕ್ಷಿಸಲು ವೈದ್ಯಕೀಯ ನೆರವು, ಆಹಾರ ಮತ್ತು ಬೆಚ್ಚಗಿನ ಬಟ್ಟೆಗಳನ್ನು ನೀಡಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಚೀನಿ ಸೈನಿಕನು ನಾಗರಿಕ ಮತ್ತು ಮಿಲಿಟರಿ ದಾಖಲೆಗಳನ್ನು ಒಯ್ಯುತ್ತಿದ್ದ ವೇಳೆ ಭಾರತೀಯ ಸೈನಿಕರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸೈನಿಕ ಸುರಕ್ಷಿತ ಬಂಧನದಲ್ಲಿದ್ದಾನೆ ಎಂದು ಭಾರತೀಯ ಸೇನೆಯ ಮೂಲಗಳು ಖಚಿತಪಡಿಸಿವೆ. ಪರಿಶೀಲನೆ ನಡೆದ ಬಳಿಕ ಸೈನಿಕನನ್ನು ಪ್ರೋಟೋಕಾಲ್ ಅಡಿಯಲ್ಲಿ ಚೀನ ಸೈನ್ಯಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಈ ಕುರಿತಂತೆ ಕಾಣೆಯಾದ ಸೈನಿಕ ಕುರಿತು ಚೀನ ಸೇನೆ ಹೇಳಿಕೆ ಬಿಡುಗಡೆ ಮಾಡಿದ್ದು, ಹಸ್ತಾಂತರ ಮಾಡುವಂತೆ ಕೇಳಿಕೊಂಡಿದೆ.
ಲಡಾಖ್‌ನ ಪ್ರಮುಖ 13 ಶಿಖರಗಳನ್ನು ಭಾರತ ಈಗಾಗಲೇ ಆಕ್ರಮಿಸಿಕೊಂಡಿದೆ. ಈ ವರ್ಷದ ಚಳಿಗಾಲದಲ್ಲಿಯೂ ಸಹ ಅಲ್ಲಿ ಉಳಿಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ನಿರಂತರ ಉದ್ವಿಗ್ನತೆಯ ಮಧ್ಯೆ ಭಾರತೀಯ ಸೇನೆಯು ಚಳಿಗಾಲದಲ್ಲಿ ಲಡಾಖ್‌ನ ಎತ್ತರದ ಪ್ರದೇಶಗಳಲ್ಲಿ ಉಳಿಯಲು ಸಿದ್ಧತೆಗಳನ್ನು ಮಾಡಿದೆ. ಇದಕ್ಕಾಗಿ ಭಾರತವು ಅಮೆರಿಕದಿಂದ ಹೆಚ್ಚಿನ ಯುದ್ಧ ಕಿಟ್ ಮತ್ತು ಚಳಿಗಾಲದ ಬಟ್ಟೆಗಳನ್ನು ಖರೀದಿಸಿದೆ.
ಲಡಾಖ್‌ನ ಪಾಂಗೊಂಗ್ ಸರೋವರದ ದಕ್ಷಿಣಕ್ಕೆ 13 ಪ್ರಮುಖ ಶಿಖರಗಳನ್ನು ಭಾರತೀಯ ಪಡೆಗಳು ಆಕ್ರಮಿಸಿಕೊಂಡಿವೆ, ಅಲ್ಲಿ ಅವು ಮೈನಸ್ 25 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿದೆ. ಗಡಿ ವಿವಾದವನ್ನು ಬಗೆಹರಿಸಲು ಅಕ್ಟೋಬರ್ 12ರಂದು ಚುಶುಲ್‌ನಲ್ಲಿ ನಡೆದ ಕೋರ್ ಕಮಾಂಡರ್ ಮಟ್ಟದ ಸಭೆ ಸುಮಾರು 11 ಗಂಟೆಗಳ ಕಾಲ ನಡೆಯಿತು, ಆದರೆ ಹಿಂದಿನ ಸಭೆಗಳಂತೆ ಈ ಸಭೆಯೂ ವ್ಯರ್ಥವಾಗಿದೆ.
ಭಾರತ ಮತ್ತು ಚೀನ ನಡುವೆ ಎಂಟನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಈ ವಾರ ನಡೆಯುವ ಸಾಧ್ಯತೆ ಇದೆ. ಆದರೆ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಈ ಪ್ರದೇಶವು ಚಳಿಗಾಲದಲ್ಲಿ ತುಂಬಾ ಕಠಿನವಾಗಿರುವ ಕಾರಣ ಎರಡೂ ಕಡೆಯವರು ಗಡಿಯಿಂದ ಹಿಂದಕ್ಕೆ ಸರಿಯುವ ಕುರಿತು ಚರ್ಚೆಯಾಗಲಿವೆ.
ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನ 60,000 ಸೈನಿಕರನ್ನು ನಿಯೋಜಿಸಿದೆ ಎಂದು ಅಮೆರಿಕ ಕಳೆದ ವಾರ ಮಾಹಿತಿ ನೀಡಿತ್ತು. ಈ ಮಾಹಿತಿಯನ್ನು ಯುಎಸ್ಎ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಕೆಲವು ದಿನಗಳ ಹಿಂದೆ ಕ್ವಾಡ್ ನೇಷನ್ಸ್ ಸಭೆಯಲ್ಲಿ ನೀಡಿದ್ದರು.ಭಾರತ ಮತ್ತು ಚೀನ ನಡುವೆ ಕಳೆದ 5 ತಿಂಗಳುಗಳಿಂದ ಲಡಾಕ್‌ನಲ್ಲಿ ಉದ್ವಿಗ್ನತೆ ಏರ್ಪಟ್ಟಿದೆ. ಜೂನ್ 15 ರಂದು ಗಾಲ್ವಾನ್‌ನಲ್ಲಿ ಭಾರತ ಮತ್ತು ಚೀನ ನಡುವೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಚೀನದ 40 ಸೈನಿಕರು ಸಹ ಕೊಲ್ಲಲ್ಪಟ್ಟರು ಮಾಹಿತಿ ಇದೆ. ಆದರೆ ಚೀನ ಅದನ್ನು ಒಪ್ಪಲಿಲ್ಲ.