ನವದೆಹಲಿ: ಸುಮಾರು 54 ವರ್ಷಗಳಲ್ಲಿ ಕೆಂಪುಕೋಟೆ ಚೀನಾದಲ್ಲಿ ಸಾಂಸ್ಕೃತಿಕ, ಆರ್ಥಿಕ ಕ್ರಾಂತಿ ನಡೆಯುವ ಮೂಲಕ ಸಾಕಷ್ಟು ಬದಲಾವಣೆ ಹೊಂದಿದೆ. ಆದರೆ ಸೆರೆಸಿಕ್ಕಿದ್ದ ಚೀನಾದ ಯೋಧ ವಾಂಗ್ ಕ್ವಿ ಭಾರತದಲ್ಲಿ ಬರೋಬ್ಬರಿ ಐದು ದಶಕಕ್ಕಿಂತಲೂ ಹೆಚ್ಚು ಕಾಲ ಕಳೆದಿದ್ದಾರೆ. ಅಂದು ಯುವಕನಾಗಿದ್ದ ವಾಂಗ್, ಈಗ ಮುದುಕರಾಗಿದ್ದಾರೆ. ಕೊನೆಗೂ ಬದುಕಿನ ಸಂಧ್ಯಾ ಕಾಲದಲ್ಲಿ ವಾಂಗ್ ಭಾರತದಿಂದ ತಾಯ್ನಾಡಿಗೆ ಮರಳಿದ್ದಾರೆ.
ಪ್ಲ್ಯಾಶ್ ಬ್ಯಾಕ್:
ವಿವಾದಿತ ಭಾರತ ಮತ್ತು ಚೀನಾ ಗಡಿಗಾಗಿ ಭಾರತ ಮತ್ತು ಚೀನಾ ನಡುವೆ ಯುದ್ಧ ಕೂಡ ನಡೆದು ಹೋಗಿತ್ತು. ತದನಂತರ 1963ರಲ್ಲಿ 23ರ ಹರೆಯದ ವಾಂಗ್ ಚೀನಾದ ಆರ್ಮಿ ಸರ್ವೆಯರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಆಕಸ್ಮಿಕವಾಗಿ ವಿವಾದಿತ ಗಡಿಮೂಲಕ ಭಾರತದೊಳಕ್ಕೆ ಪ್ರವೇಶಿಸಿದ್ದರು. ಆಗ ಭಾರತದ ಯೋಧರು ವಾಂಗ್ ಅವರನ್ನು ಅನುಮಾನದ ಮೇಲೆ ಸೆರೆ ಹಿಡಿದಿದ್ದರು. ಬಳಿಕ ಸುಮಾರು 7 ವರ್ಷಗಳ ಕಾಲ ಬೇರೆ, ಬೇರೆ ಜೈಲಿನಲ್ಲಿ ವಾಂಗ್ ಕಾಲ ಕಳೆದಿದ್ದು, 1969ರಲ್ಲಿ ಬಿಡುಗಡೆಗೊಂಡಿದ್ದರು.
ಬಿಡುಗಡೆಗೊಂಡ ವಾಂಗ್ ಅವರನ್ನು ಪೊಲೀಸರು ಭದ್ರತೆಯಲ್ಲಿ ಕರೆದೊಯ್ದು ಮಧ್ಯಪ್ರದೇಶದ ಕುಗ್ರಾಮವಾದ ತಿರೋಡಿಯಲ್ಲಿ ಬಿಟ್ಟು, ಇಲ್ಲಿಯೇ ಕಾಲ ಕಳೆಯಬೇಕೆಂದು ತಾಕೀತು ಮಾಡಿ ಹೊರಟಿದ್ದರು ಎಂದು ಮಾಧ್ಯಮದ ವರದಿ ತಿಳಿಸಿದೆ.
ವಾಂಗ್ ಕೊನೆಗೆ ಅಲ್ಲಿಯ ಸ್ಥಳೀಯ ಯುವತಿ ಜೊತೆ ಮದುವೆಯಾಗಿದ್ದರು. ಅವರಿಗೀಗ ಮೂರು ಮಕ್ಕಳು, ಮೊಮ್ಮಕ್ಕಳಿದ್ದಾರೆ. ಚೀನಾ ಮೂಲದವರಾದ್ದರಿಂದ ಅವರಿಗೆ ಭಾರತದ ಪೌರತ್ವ ಕೂಡ ಸಿಗದಿದ್ದರಿಂದ ಅವರು ಭೂಮಿ ಕೊಳ್ಳಲು ಆಗಿರಲಿಲ್ಲ ಹಾಗೂ ಸಾಕಷ್ಟು ಸೌಲಭ್ಯಗಳಿಂದ ವಂಚಿತರಾಗಿದ್ದರು. ವಾಂಗ್ ಅವರ ತಾಯಿ 2006ರಲ್ಲಿ ಮರಣ ಹೊಂದಿದ್ರು. ಈ ದುಃಖದ ಸಂದರ್ಭದಲ್ಲೂ ಚೀನಾಕ್ಕೆ ಹೋಗಲು ಸಾಧ್ಯವಾಗಿಲ್ಲವಾಗಿತ್ತು. ಇದೀಗ ಭಾರತ ಮತ್ತು ಚೀನಾ ವಿದೇಶಾಂಗ ಮಟ್ಟದ ಮಾತುಕತೆಯಲ್ಲಿ ವಾಂಗ್ ತಾಯ್ನಾಡಿಗೆ ಮರಳುವಂತಾಗಿದೆ.
ಶನಿವಾರ 77 ವರ್ಷದ ವಾಂಗ್ ತನ್ನ ಪತ್ನಿ ಸುಶೀಲಾ, ಮಗ ವಿಷ್ಣು ವಾಂಗ್, ಮಗಳು ಅನಿತಾ ವಾಂಖೇಡೆ, ಸೊಸೆ ನೇಹಾ ವಾಂಗ್ ಹಾಗೂ ಮೊಮ್ಮಗ ಖಾನಕ್ ವಾಂಗ್ ಜೊತೆ ಚೀನಾಕ್ಕೆ ವಾಪಸ್ ಆಗಿದ್ದಾರೆ.