ಬೀಜಿಂಗ್: ಸಾವಿರಾರು ಮಂದಿ ಅಭಿಮಾನಿಗಳನ್ನು ಹೊಂದಿದ್ದ ಸೋಶಿಯಲ್ ಮೀಡಿಯಾ ಸ್ಟಾರ್ ಲಾಮೂ(30ವರ್ಷ) ಲೈವ್ ಸ್ಟ್ರೀಮ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೇ ಏಕಾಏಕಿ ನುಗ್ಗಿ ಬಂದ ಮಾಜಿ ಪತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಚೀನಾದಲ್ಲಿ ನಡೆದಿದೆ. ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸಿ ಸಾವನ್ನಪ್ಪಿರುವ ಪ್ರಕರಣ ಚೀನಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ ಎಂದು ವರದಿ ತಿಳಿಸಿದೆ.
ಬಿಬಿಸಿ ವರದಿಯ ಪ್ರಕಾರ, ಲಾಮೂ ಡೌಯಿನ್ ಪ್ರದೇಶದಲ್ಲಿ ಸಾಮಾಜಿಕ ಜಾಲತಾಣದ ಜನಪ್ರಿಯ ತಾರೆಯಾಗಿದ್ದಳು. ಮಾಜಿ ಪತಿ ಸಲಕರಣೆಯೊಂದಿಗೆ ಸ್ಟಾರ್ ಮನೆಗೆ ನುಗ್ಗಿದ್ದು, ಕುಟುಂಬ ಸದಸ್ಯರ ಎದುರಿನಲ್ಲಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಸೆಪ್ಟೆಂಬರ್ ನಲ್ಲಿ ನಡೆದಿರುವುದು ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಟಿಕ್ ಟಾಕ್, ವೀಡಿಯೊ ಬ್ಲಾಗರ್ ಲಾಮೂ ದೇಹ ಬೆಂಕಿಯಿಂದಾಗಿ ಶೇ.90ರಷ್ಟು ಸುಟ್ಟು ಹೋಗಿತ್ತು. ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಕಳೆದ ರಾತ್ರಿ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಹತ್ರಾಸ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲೇನಿದೆ?
ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಕೊಲೆಯ ಹಿಂದಿನ ಉದ್ದೇಶ ಏನೆಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎಂದು ವರದಿ ಹೇಳಿದೆ. ಚೀನಾದ ಕೆಲವು ಮಾಧ್ಯಮಗಳ ವರದಿ ಪ್ರಕಾರ, ಕೌಟುಂಬಿಕ ಹಿಂಸೆಯಿಂದಾಗಿ ವಿವಾಹ ವಿಚ್ಛೇದನ ಪಡೆದಿದ್ದರಿಂದ ಮಾಜಿ ಪತಿ ಟಾಂಗ್ ಲಾಮೂ ಮೇಲೆ ಪ್ರತೀಕಾರ ತೀರಿಸಿಕೊಂಡಿರುವುದಾಗಿ ತಿಳಿಸಿದೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.