Advertisement

ತವಾಂಗ್‌ನಲ್ಲಿ ಚೀನ ಕಿರಿಕ್‌; ಹೆಚ್ಚಿದ ಚೀನಿ ಸೈನಿಕರ ಗಸ್ತು

01:02 AM Oct 27, 2021 | Team Udayavani |

ತವಾಂಗ್‌/ಹೊಸದಿಲ್ಲಿ: ಲಡಾಖ್‌ನ ಪೂರ್ವ ಭಾಗ ದಲ್ಲಿ ಕಿತಾಪತಿ ಮಾಡಿ, ಚೀನ ಪೆಟ್ಟು ತಿಂದಿದೆ. ಅದರಿಂದ ಪಾಠ ಕಲಿಯದ ಭಾರತದ ನೆರೆಯ ರಾಷ್ಟ್ರ ಈಗ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಕೂಡ ಗಸ್ತು ಬಿಗಿಗೊಳಿಸಿದೆ. ಈಗಾಗಲೇ ಅರುಣಾಚಲ ಪ್ರದೇಶ ತನಗೆ ಸೇರಿದ್ದು ಎಂದು ವಾದಿಸುವ ಚೀನ, ಇತ್ತೀಚೆಗೆ ಉಪರಾಷ್ಟ್ರತಿ ಎಂ. ವೆಂಕಯ್ಯ ನಾಯ್ಡು ನೀಡಿದ್ದ ಭೇಟಿಗೂ ತಕರಾರು ತೆಗೆದಿತ್ತು. ತವಾಂಗ್‌ ವ್ಯಾಪ್ತಿಯಲ್ಲಿ ಚೀನ ಸೇನೆಯಲ್ಲಿ ಹೊಸತಾಗಿ ರಚಿಸಲಾದ ತುಕಡಿಗಳನ್ನು ನಿಯೋಜಿಸಿದೆ. ಜತೆಗೆ ಸೇನೆಯ ಹಿರಿಯ ಅಧಿಕಾರಿಗಳು ಪದೇ ಪದೆ ಆ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

Advertisement

ದೇಶದ ಸೇನೆ ಕಂಡುಕೊಂಡ ಪ್ರಕಾರ ತವಾಂಗ್‌ನ ಲುಂಗ್ರೋ ಲಾ, ಝಿಮಿತಾಂಗ್‌ ಮತ್ತು ಭುಮ್‌ ಲಾ ಪ್ರದೇಶಗಳಲ್ಲಿ ಚೀನ ಸೇನೆಯ ವಿವಿಧ ರೀತಿಯ ಚಟುವಟಿಕೆಗಳು ಬಿರುಸಾಗಿವೆ. ಅದಕ್ಕೆ ಪೂರಕವಾಗಿ ಕೇಂದ್ರ ಸರಕಾರದಿಂದ ಈಗಾಗಲೇ ಹಲವಾರು ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವ ಕಾಮಗಾರಿ ಭರದಿಂದ ಸಾಗಿದೆ. ಈ ಮೂಲಕ ಚೀನದ ದುಃಸ್ಸಾಹಸ ತಡೆಯಲು ಎಲ್ಲ ರೀತಿಯ ಕ್ರಮಗಳು ವಿಳಂಬವಿಲ್ಲದೆ ಸಾಗಿದೆ ಎಂದು ಭೂ ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಲುಂಗ್ರೋ ಲಾದಲ್ಲಿ 2020ರ ಜನವರಿಯಿಂದ ಪ್ರಸಕ್ತ ವರ್ಷದ ಅಕ್ಟೋಬರ್‌ ವರೆಗೆ 90 ಬಾರಿ ಚೀನ ಗಸ್ತು ನಡೆಸಿದೆ. 2018 ಮತ್ತು 2019ಕ್ಕೆ ಹೋಲಿಕೆ ಮಾಡಿದರೆ, ಅದರ ಪ್ರಮಾಣ ಹೆಚ್ಚಾಗಿದೆ.

ಕಳವಳಕಾರಿ ಅಂಶವೆಂದರೆ, ಲಡಾಖ್‌ನ ಪೂರ್ವ ಭಾಗದಲ್ಲಿ ದಾಳಿ ನಡೆಸುವುದಕ್ಕಿಂತ ಮೊದಲೇ ತವಾಂಗ್‌ ವ್ಯಾಪ್ತಿಯಲ್ಲಿ ಗಸ್ತು ತಿರುಗುವುದನ್ನು ಹೆಚ್ಚು ಮಾಡಿತ್ತು ಚೀನ ಸೇನೆ. 2018-19ನೇ ಸಾಲಿನಲ್ಲಿ 10, 2020-21ನೇ ಸಾಲಿನಲ್ಲಿ ಸೆಪ್ಟೆಂಬರ್‌ ವರೆಗಿನ ಮಾಹಿತಿ ಪ್ರಕಾರ 35 ಬಾರಿ ಡ್ರ್ಯಾಗನ್‌ ಸೇನೆ ಅಲ್ಲಿ ಠಳಾಯಿಸಿತ್ತು.

1986ರಿಂದ ನಿಯಂತ್ರಣ: ಲುಂಗ್ರೋ ಲಾ ಮತ್ತು ಝಿಮಿತಾಂಗ್‌ ವಲಯದಲ್ಲಿ 1986-87ನೇ ಸಾಲಿನಲ್ಲಿ ಉಂಟಾಗಿದ್ದ ಬಿಗುವಿನ ಪರಿಸ್ಥಿತಿ ಬಳಿಕ ಭಾರತದ ಸೇನೆ ಆ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಂಡಿತು. ಝಮಿತಾಂಗ್‌ ವಲಯದಲ್ಲಿ ಕೂಡ ಚೀನ ಸೇನೆಯ ಗಸ್ತು ಕಳೆದ ತಿಂಗಳು 24ಕ್ಕೆ ಏರಿಕೆ ಯಾಗಿತ್ತು ಎಂಬ ಅಂಶವೂ ದೃಢಪಟ್ಟಿದೆ.

ಇದನ್ನೂ ಓದಿ:ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

Advertisement

ಲಡಾಖ್‌ನಲ್ಲಿ ಸಂಘರ್ಷದ ಬಳಿಕ ಎರಡೂ ದೇಶ ಗಳ ನಡುವೆ ಹಲವು ಸುತ್ತಿನ ಸೇನಾಧಿಕಾರಿಗಳ ಮಟ್ಟದ ಮಾತುಕತೆ ನಡೆದಿದ್ದರೂ ಪೂರ್ಣ ಫ‌ಲಪ್ರದ ಎಂಬ ಫ‌ಲಿತಾಂಶ ಪ್ರಕಟವಾಗಿಲ್ಲ. ಗೋಗ್ರಾ ಸೇರಿದಂತೆ ಹಲವು ಮುಂಚೂಣಿ ನೆಲೆಗಳಿಂದ ಸೇನೆ ವಾಪಸ್‌ ಪಡೆಯು ವುದರಲ್ಲಿ ಒಮ್ಮತಾಭಿಪ್ರಾಯ ಮೂಡಿಲ್ಲ.

ಸನ್ನದ್ಧ ಸ್ಥಿತಿಯಲ್ಲಿ: ಪೂರ್ವ ವಲಯಕ್ಕೆ ಸಂಬಂಧಿಸಿದಂತೆ ಚೀನ ವಿರುದ್ಧ ದೇಶದ ಸೇನೆ ಸನ್ನದ್ಧ ಸ್ಥಿತಿಯಲ್ಲಿಯೇ ಇದೆ. ಎಂ777 ಅಲ್ಟ್ರಾ ಲೈಟ್‌ ಹೊವಿಟ್ಜರ್‌, ಸಿ ಎಚ್‌-47ಎಫ್ ಚಿನೂಕ್‌ ಹೆಲಿಕಾಪ್ಟರ್‌ಗಳು, ಬೋಫೋರ್ಸ್‌ ಗನ್‌ಗಳನ್ನು ಒಳಗೊಂಡ ಅತ್ಯಾಧು ನಿಕ ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗಿದೆ.

ಪಿನಾಕಾ ನಿಯೋಜನೆ
ದೇಶಿಯವಾಗಿಯೇ ಅಭಿವೃದ್ಧಿಪಡಿಸಲಾಗಿರುವ ಪಿನಾಕಾ ಕ್ಷಿಪಣಿಯನ್ನೂ ಚೀನ ವಿರುದ್ಧ ಗುರಿ ಇರಿಸಲಾಗಿದೆ. 75 ಕಿ.ಮೀ. ದೂರದ ವೈರಿ ನೆಲೆಗಳನ್ನು ಛೇದಿಸುವ ಸಾಮರ್ಥ್ಯ ಇರುವ ಆ ಕ್ಷಿಪಣಿಯ ಅತ್ಯಾಧುನಿಕ ಆವೃತ್ತಿಯನ್ನು ಎಲ್‌ಎಸಿ ವ್ಯಾಪ್ತಿಯಲ್ಲಿ ನಿಯೋಜಿಸಲು ಇನ್ನಷ್ಟೇ ಅನುಮತಿ ನೀಡಲಾಗಿದೆ.

ಹೊಸ ಮಾಹಿತಿ ಏನು?
ಚೀನ ಸೇನೆಯ ಅತ್ಯುನ್ನತ ಅಧಿಕಾರಿಗಳ ಭೇಟಿ, ಪರಿಸ್ಥಿತಿ ಅವಲೋಕನ
ಸೇನೆಯ ಹೊಸ ತುಕಡಿಗಳ ನಿಯೋಜನೆ, ಹೆಚ್ಚಿದ ಗಸ್ತು

ದೇಶದ ಸಿದ್ಧತೆ ಏನು?
ಉಪಗ್ರಹ ಆಧಾರಿತ ಮಾಹಿತಿ ಮೂಲಕ ಸ್ಥಳದಲ್ಲಿ ಹೆಚ್ಚಿನ ಭದ್ರತೆ
ತವಾಂಗ್‌ ವ್ಯಾಪ್ತಿಯಲ್ಲಿ ಸೇನೆಗೆ ಮೂಲ ಸೌಕರ್ಯ ಯೋಜನೆ ಬಲವೃದ್ಧಿ
ಡ್ರೋನ್‌ ಮತ್ತು ಇತರ ಅತ್ಯಾಧುನಿಕ ವ್ಯವಸ್ಥೆ ಮೂಲಕ ಭದ್ರತೆ

 

Advertisement

Udayavani is now on Telegram. Click here to join our channel and stay updated with the latest news.

Next