Advertisement

ಭಾರತೀಯರಿಗೆ ವರವಾದ ಚೀನದ ಹೊಸ ವರ್ಷ

10:13 AM Feb 10, 2020 | Sriram |

ಉಳ್ಳಾಲ: ಹೊಸ ವರುಷ ಆಚರಣೆಯ ಸಂಭ್ರಮದಲ್ಲಿದ್ದ ಚೀನಕ್ಕೆ ಈ ಬಾರಿ ಕೊರೊನಾ ವೈರಸ್‌ ಕರಾಳವಾಗಿ ಕಾಡಿದೆ. ಆದರೆ ಅಲ್ಲಿ ಉದ್ಯೋಗ ಮತ್ತು ಉದ್ಯಮ ಹೊಂದಿರುವ ಲಕ್ಷಾಂತರ ಭಾರತೀಯರು ಸಹಿತ ವಿದೇಶಿಗರಿಗೆ ವರವಾಗಿ ಪರಿಣಮಿಸಿದೆ. ಚೀನದಲ್ಲಿ ಹೊಸ ವರ್ಷಾಚರಣೆಗೆ ದೀರ್ಘ‌ ರಜೆ ಸಿಗುವುದರಿಂದ ಅಲ್ಲಿದ್ದ ಭಾರತೀಯರು ಸಹಿತ ವಿದೇಶಿ ಪ್ರಜೆ ಗಳೆಲ್ಲ ಅವರವರ ಊರಿಗೆ ತೆರಳಿದ್ದ ರಿಂದ ಕೊರೊನಾ ಆತಂಕದಿಂದ ಪಾರಾಗಿದ್ದಾರೆ.

Advertisement

ನಿಯಾನ್‌ ಕ್ಯಾಲೆಂಡರನ್ನು ಅನುಸರಿಸುವ ಚೀನೀ ಯರು ಈ ಬಾರಿ ಜನವರಿ 25ರಂದು ಹೊಸ ವರುಷ ಆಚರಿಸಿದ್ದರು. ಹೊಸ ವರ್ಷಕ್ಕೆ ಒಂದು ವಾರದಿಂದ 10 ದಿನಗಳವರೆಗೆ ದೇಶಾದ್ಯಂತ ಸರಕಾರಿ ರಜೆ ಇರುತ್ತದೆ. ಫ್ಯಾಕ್ಟರಿಗಳಿಗೆ 15 ದಿನಗಳಿಂದ ಒಂದು ತಿಂಗಳವರೆಗೆ ರಜೆ ಇರುವ ಕಾರಣ ಅಲ್ಲಿ ನೆಲೆಸಿರುವ ವಿದೇಶಿಗರು ತಾಯ್ನಾಡಿಗೆ ಮರಳುವುದು ಸಾಮಾನ್ಯ. ಈ ಬಾರಿಯೂ ನಾವು ಸಹಿತ ಶೇ. 50ರಷ್ಟು ಜನರು ಕೊರೊನಾ ಬಾಧಿಸುವ ಮುನ್ನವೇ ಅಲ್ಲಿಂದ ಬಂದಿರುವ ಕಾರಣ ಅಪಾಯದಿಂದ ಪಾರಾಗಿದ್ದೇವೆ ಎಂದು 15 ವರ್ಷಗಳಿಂದ ಗೋನೊlà ಗೋಂಗ್‌ದೊಂ ಪ್ರಾವಿನ್ಸ್‌ನಲ್ಲಿ ಎಕ್ಸ್‌ ಪೋರ್ಟ್‌ ಉದ್ಯಮವನ್ನು ಹೊಂದಿರುವ ಉಳ್ಳಾಲ ಸಮೀಪದ ಕಿನ್ಯ ನಿವಾಸಿ ಆಸೀಫ್ ಕಿನ್ಯ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

ನಾವು ವರ್ಷಾಚರಣೆಗೆ 10 ದಿನ ಮೊದಲೇ 20 ದಿನಗಳ ರಜೆಯಲ್ಲಿ ತಾಯ್ನಾಡಿಗೆ ಮರಳಿದ್ದೇವೆ ಎನ್ನುತ್ತಾರೆ ಶಾಂಘೈಯಲ್ಲಿ ಯೋಗ ಶಿಕ್ಷಕರಾಗಿರುವ ಮಂಗಳೂರಿನ ಸುಧೀರ್‌ ಗಟ್ಟಿ. ಚೀನದಲ್ಲಿ ಕರ್ನಾಟಕ ಮೂಲದ 300ಕ್ಕೂ ಹೆಚ್ಚು ಜನರು ಅವರ ಸಂಪರ್ಕದಲ್ಲಿದ್ದು ಅವರಲ್ಲಿ ಶೇ. 50ರಷ್ಟು ಮಂದಿ ಭಾರತಕ್ಕೆ ಆಗಮಿಸಿದ್ದಾರೆ ಎಂದಿದ್ದಾರೆ.

ಕೊರೊನಾ ಹಾವಳಿಯ ಮೂಲ ವಾಗಿರುವ ವುಹಾನ್‌ ಸಿಟಿಯು ಗೋನೊlà ಗೋಂಗ್‌ದೊಂ ಪ್ರಾವಿನ್ಸ್‌ನಿಂದ 1,200 ಕಿ.ಮೀ. ದೂರದಲ್ಲಿದ್ದರೂ ವ್ಯವಹಾರದ ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದ್ದೆ ಎನ್ನುವ ಆಸೀಫ್‌ ಅವರು ಗೋನೊlà ಗೋಂಗ್‌ದೊಂ ಪರಿಸರದಲ್ಲಿ ಮಂಗಳೂರು, ಕಾರ್ಕಳ, ಉಡುಪಿ ಮತ್ತು ಕಾಸರಗೋಡು ಮೂಲದ 15ಕ್ಕೂ ಹೆಚ್ಚು ಸ್ನೇಹಿತರಿದ್ದು, ಎಲ್ಲರೂ ತಾಯ್ನಾಡಿನಲ್ಲಿರುವುದರಿಂದ ಮನೆಯವರು ನಿಶ್ಚಿಂತೆಯಿಂದ ಇದ್ದಾರೆ ಎಂದರು.

ಕೊರೊನಾ ಬಾಧೆ ಕಡಿಮೆಯಿರುವ ಪ್ರದೇಶಗಳ ಸರಕಾರಿ ಕಚೇರಿಗಳು ಮತ್ತು ಅತ್ಯಂತ ಪ್ರಮುಖ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕೆಗಳು ಕಾರ್ಯಾಚರಣೆ ಆರಂಭಿಸಿವೆ. ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದು, ಒಂದು ತಿಂಗಳೊಳಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಾಧ್ಯತೆಯ ಬಗ್ಗೆ ಚೀನ ಸರಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಅಲ್ಲಿ ನೆಲೆಸಿರುವ ಸ್ನೇಹಿತರು ಮಾಹಿತಿ ನೀಡಿದ್ದಾರೆ ಎಂದು ಸುಧೀರ್‌ ಗಟ್ಟಿ ತಿಳಿಸಿದರು.

Advertisement

ಪ್ರವಾಸಿಗರಿಗೆ ಕೊರೊನಾ ಬಿಸಿ
ಚೀನದಲ್ಲಿ ಹೊಸವರ್ಷವನ್ನು ವಿಶೇಷವಾಗಿ ಆಚರಿಸುವುದರಿಂದ ಭಾರತೀಯರು ಸಹಿತ ವಿದೇಶಿ ಪ್ರವಾಸಿಗರು ಆಗ ಅಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಆದರೆ ಅಲ್ಲಿ ನೆಲೆಸಿರುವವರು ರಜೆಯ ಕಾರಣಕ್ಕೆ ಸ್ವದೇಶಕ್ಕೆ ಮರಳಿರುವುದರಿಂದ ಕೊರೊನಾ ಸಮಸ್ಯೆಗೆ ತುತ್ತಾಗಿರುವವರಲ್ಲಿ ಪ್ರವಾಸಿಗರೇ ಹೆಚ್ಚು.

ಸಿಂಗಾಪುರದಲ್ಲಿ ಆರೆಂಜ್‌ ಅಲರ್ಟ್‌
ಚೀನದೊಂದಿಗೆ ವ್ಯವಹಾರ ಮತ್ತು ಅತ್ಯಂತ ನಿಕಟ ಸಂಪರ್ಕವನ್ನಿಟ್ಟುಕೊಂಡಿರುವ ಸಿಂಗಾಪುರದಲ್ಲೂ ಆರೆಂಜ್‌ ಆಲರ್ಟ್‌ ಘೋಷಿಸಲಾಗಿದೆ. ಸರಕಾರಿ ಶಾಲೆಗಳನ್ನು ಹೊರತುಪಡಿಸಿ ಇಂಟರ್‌ನ್ಯಾಶನಲ್‌ ಸ್ಕೂಲ್‌ಗ‌ಳಿಗೆ ತಿಂಗಳ ಕಾಲ ರಜೆ ಘೋಷಿಸಲಾಗಿದೆ. ಅಲ್ಲಿನ ಜನರು ಮುಂಜಾಗರೂಕತಾ ಕ್ರಮವಾಗಿ ದಿನಬಳಕೆಯ ಸಾಮಗ್ರಿಗಳನ್ನು ಶೇಖರಣೆ ಮಾಡುತ್ತಿದ್ದಾರೆ ಎನ್ನುತ್ತಾರೆ ಸಿಂಗಾಪುರದ ಖಾಯಂ ನಿವಾಸಿಯಾಗಿರುವ ಸುಳ್ಯ ಮೂಲದ ಗೋಪಾಲ್‌.

200 ಭಾರತೀಯರಿಗೆ ಕೊರೊನಾ ಭೀತಿ
ಬೀಜಿಂಗ್‌/ಹೊಸದಿಲ್ಲಿ: ಕೊರೊನಾ ವೈರಸ್‌ನ ಕಬಂಧ ಬಾಹುಗಳು ವಿಶ್ವಾದ್ಯಂತ ವ್ಯಾಪಿಸುತ್ತಿರುವ ನಡುವೆಯೇ, ಜಪಾನ್‌ನ ನೌಕೆಯೊಂದರಲ್ಲಿ ಸಿಲುಕಿರುವ 200ಕ್ಕೂ ಹೆಚ್ಚು ಭಾರತೀಯರು ಪ್ರಾಣಭೀತಿಯಲ್ಲಿ ದಿನ ಕಳೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ವೈರಸ್‌ ಹಬ್ಬಿದ ಬೆನ್ನಲ್ಲೇ ಚೀನದ ವುಹಾನ್‌ನಿಂದ ಜಪಾನ್‌ಗೆ ವಾಪಸಾದ ಡೈಮಂಡ್‌ ಪ್ರಿನ್ಸೆಸ್‌ ಎಂಬ ನೌಕೆ ಸದ್ಯ ಜಪಾನ್‌ನ ಯೋಕೋಹಾಮಾ ಬಂದರಿನಲ್ಲಿ ನಿಂತಿದೆ. ಇದರಲ್ಲಿ 3,700 ಮಂದಿ ಇದ್ದು, 200ಕ್ಕೂ ಹೆಚ್ಚು ಭಾರತೀಯರಿದ್ದಾರೆ.

15 ವರ್ಷಗಳಿಂದ ಶಾಂಘೈಯಲ್ಲಿ ಯೋಗ ಶಿಕ್ಷಕನಾಗಿದ್ದು, ಹೊಸವರ್ಷದ ರಜೆಯ ಹಿನ್ನೆಲೆಯಲ್ಲಿ ಜ. 14ಕ್ಕೆ ಮಂಗಳೂರಿಗೆ ಆಗಮಿಸಿದ್ದೆ. ಒಂದು ವಾರದ ಬಳಿಕ ಅಲ್ಲಿ ಕೊರೊನಾ ಬಾಧೆಯ ವಿಚಾರ ತಿಳಿದು ಬಂತು. ಫೆ. 4ಕ್ಕೆ ಮರಳಲು ವಿಮಾನ ಟಿಕೆಟ್‌ ಮಾಡಿಸಿದ್ದೆ. ಸದ್ಯ ಟಿಕೆಟ್‌ ರದ್ದಾಗಿದ್ದು, ಸಮಸ್ಯೆ ದೂರವಾದ ಬಳಿಕ ಫೆಬ್ರವರಿ ತಿಂಗಳ ಕೊನೆಗೆ ಚೀನಕ್ಕೆ ತೆರಳುವ ಯೋಜನೆ ಹಾಕಿಕೊಂಡಿದ್ದೇನೆ.
– ಸುಧೀರ್‌ ಗಟ್ಟಿ , ಮಂಗಳೂರು

ಚೀನದಲ್ಲಿ ಹೊಸ
ವರ್ಷಾಚರಣೆ ಹಿನ್ನೆಲೆಯಲ್ಲಿ ಊರಿಗೆ ಮರಳಿದ್ದೆ. ಕೆಲವು ದಿನಗಳ ಬಳಿಕ ಅಲ್ಲಿ ಭೀಕರ ಸ್ಥಿತಿ ತಲೆದೋರಿದ್ದರಿಂದ ರೆಡ್‌ ಅಲರ್ಟ್‌ ಘೋಷಿಸಿದ್ದಾರೆ. ಎಲ್ಲ ಸಮಸ್ಯೆ ಪರಿಹಾರವಾದ ಬಳಿಕ ಚೀನಕ್ಕೆ ಹೋಗುವ ಯೋಜನೆ ಹಾಕಿಕೊಂಡಿದ್ದೇನೆ.
– ಆಸೀಫ್‌,ಕಿನ್ಯ

ಸಿಂಗಾಪುರದಲ್ಲಿ ನನ್ನ ಮಗಳು ಓದುವ ಶಾಲೆಯಲ್ಲಿ ಚೀನ ಸಹಿತ ವಿದೇಶದ ವಿದ್ಯಾರ್ಥಿಗಳು, ಶಿಕ್ಷಕರು ಇದ್ದು ಚೈನೀಸ್‌ ಹೊಸ ವರ್ಷದ ಹಿನ್ನೆಲೆಯಲ್ಲಿ ತಮ್ಮ ದೇಶಕ್ಕೆ ತೆರಳಿದ್ದ ಅವರಾರೂ ಮರಳಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಇಂಟರ್‌ನ್ಯಾಶನಲ್‌ ಶಾಲೆಗಳಿಗೆ ಒಂದು ತಿಂಗಳ ಕಾಲ ರಜೆ ಘೋಷಿಸಿದ್ದಾರೆ. ರಜೆಯ ಕಾರಣ ನಾವು ಕೂಡ ತಾಯ್ನಾಡಿಗೆ ಮರಳಿದ್ದು, ಶಾಲೆ ಪುನರಾರಂಭವಾದ ಬಳಿಕ ಸಿಂಗಾಪುರಕ್ಕೆ ತೆರಳುತ್ತೇನೆ.
– ಸ್ವಾತಿ ಗೋಪಾಲ್‌,ಸಿಂಗಾಪುರ

-ವಸಂತ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next