ರಂಗಾರೆಡ್ಡಿ(ತೆಲಂಗಾಣ): ಆ್ಯಪ್ ಮೂಲಕ ಸಾಲ ನೀಡಿ ವಂಚಿಸುವ ಜಾಲದ ಪ್ರಧಾನ ಸೂತ್ರಧಾರ ಚೀನಿ ಪ್ರಜೆ ಸೇರಿದಂತೆ ನಾಲ್ವರನ್ನು ತೆಲಂಗಾಣ ಪೊಲೀಸರು ಸೈಬರಾಬಾದ್ ನಲ್ಲಿ ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಇಲ್ಲಿನ ಸೈಬರಾಬಾದ್ ನಗರದಲ್ಲಿ ಚೀನಾ ಪ್ರಜೆ ಮಾಲೀಕತ್ವದ ಕ್ಯೂಬೆವೊ ಟೆಕ್ನೋಲಜಿ ಪ್ರೈವೇಟ್ ಲಿಮಿಟೆಡ್ (ಸ್ಕೈಲೈನ್) ಮೇಲೆ ಸೈಬರ್ ಕ್ರೈಂ ಪೊಲೀಸರು ದಾಳಿ ನಡೆಸಿದ್ದರು. ಸಾಲದ ಆ್ಯಪ್ ವಂಚನೆ ಜಾಲದ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸ್ಕೈಲೈನ್ ಇನೋವೇಶನ್ಸ್ ಟೆಕ್ನಾಲಜೀಸ್ ಇಂಡಿಯಾ ಪ್ರೈ. ಲಿಮಿಟೆಡ್ ಹೆಸರಿನ ಪ್ರಧಾನ ಕಚೇರಿ ದೆಹಲಿ ಮತ್ತು ಗುರ್ಗಾಂವ್ ನಲ್ಲಿ ಕಾರ್ಯಾಚರಿಸುತ್ತಿದ್ದು, ಝಿಕ್ಸಿಯಾ ಝಾಂಗ್ ಮತ್ತು ಉಮಾಪತಿ ಅಜಯ್ ಇದರ ನಿರ್ದೇಶಕರಾಗಿದ್ದಾರೆ.
ಈ ಖಾಸಗಿ ಸಂಸ್ಥೆ ತಕ್ಷಣವೇ ಸಾಲ ನೀಡುವ 11 ಆ್ಯಪ್ ಗಳನ್ನು ಡೆವಲಪ್ ಮಾಡಿತ್ತು. ಈ ಆ್ಯಪ್ ಮೂಲಕ ತಕ್ಷಣವೇ ವೈಯಕ್ತಿ ಸಾಲ ನೀಡುವ ಆಫರ್ ನೀಡಿತ್ತು. ಅಲ್ಲದೇ ಸಾಲ ನೀಡಿದ ನಂತರ ತಮ್ಮದೇ ಕಾಲ್ ಸೆಂಟರ್ ಗಳ ಕರೆ ಮೂಲಕ ಸಾಲಗಾರರಿಗೆ ಕಿರುಕುಳ, ಬೆದರಿಕೆಯೊಡ್ಡುವ ಕೆಲಸ ಮಾಡುತ್ತಿತ್ತು ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ ಈ ಸಂಸ್ಥೆ ಸಾಲಗಾರರಿಗೆ, ಸಂಬಂಧಿಗಳಿಗೆ, ಕುಟುಂಬದ ಸದಸ್ಯರಿಗೆ ನಕಲಿ ಲೀಗಲ್ ನೋಟಿಸ್ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಸಾಲದ ಆ್ಯಪ್ ವಿರುದ್ಧ ಸೈಬರಾಬಾದ್ ಪೊಲೀಸರು ಎಂಟು ಪ್ರಕರಣಗಳನ್ನು ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದರು ಎಂದು ವರದಿ ತಿಳಿಸಿದೆ.