ನವದೆಹಲಿ: ವಿಸ್ತರಣಾವಾದಿ ಚೀನದ ಆಕ್ರಮಣಕಾರಿ ನಡೆಗಳು ಕೇವಲ ಲಡಾಖ್ ಪ್ರದೇಶಕ್ಕಷ್ಟೇ ಸೀಮಿತವಾಗುತ್ತಿಲ್ಲ. ಬಹಳ ದೀರ್ಘ ಸಮಯದಿಂದಲೂ ಭಾರತದ ಸಾಗರ ಕ್ಷೇತ್ರದ ಮೇಲೆ ದೃಷ್ಟಿಯಿಟ್ಟಿರುವ ಚೀನ, ಈಗ ತನ್ನ ಹಡಗುಗಳನ್ನು ಕಳುಹಿಸಿ ಹಿಂದೂ ಮಹಾಸಾಗರದಲ್ಲಿ ಮ್ಯಾಪಿಂಗ್(ನಕ್ಷೆಯನ್ನು ರಚಿಸುವ
ಪ್ರಯತ್ನ) ನಡೆಸಿದೆ! ಸಾಗರ ಪ್ರಾಂತ್ಯದಲ್ಲಿ ಸರ್ವೇಕ್ಷಣೆಯ ಹೆಸರಿನಲ್ಲಿ ನಡೆಸಿದ ಮ್ಯಾಪಿಂಗ್ ಅನ್ನು ಚೀನದ ನೌಕಾಪಡೆಯು ಬಳಸಿಕೊಳ್ಳಬಹುದು ಎಂದು ಓಪನ್ ಸೋರ್ಸ್ ಇಂಟೆಲಿಜೆನ್ಸ್‌ನ(ಒಎಸ್‌ಐಎನ್‌ಟಿ) ಪರಿಣತರು ಎಚ್ಚರಿಸಿದ್ದಾರೆ. ಓಎಸ್‌ಐಎನ್‌ಟಿ ಪರಿಣತರು ಕಳೆದ ಎರಡು ವರ್ಷಗಳಿಂದಲೂ ಚೀನದ ಈ ಸರ್ವೇಕ್ಷಣ ಹಡಗುಗಳ ಮೇಲೆ ಗಮನವಿಟ್ಟಿದ್ದರು.
ನಾಗರಿಕ ಉದ್ದೇಶಗಳ ಹೆಸರಲ್ಲಿ ಚೀನದ ಈ ಸರ್ವೇಕ್ಷಣ ಹಡಗುಗಳು ನಡೆಸಿದ ಶೋಧವನ್ನು ಚೀನದ ಸೇನಾ ಅಭಿಯಾನಗಳಿಗೆ ಮಹತ್ವವಾಗಬಹುದು. ಇದರಲ್ಲಿ ಕೆಲವು ಸರ್ವೇಕ್ಷಣ ಹಡಗುಗಳು ಅಂಡಮಾನ್-ನಿಕೋಬಾರ್ ದ್ವೀಪಸಮೂಹದ ಬಳಿಯೂ ಸುಳಿದಾಡಿವೆ ಎನ್ನಲಾಗಿದೆ.
ಹಿಂದೂ ಮಹಾಸಾಗರದಲ್ಲಿ ಈ ಹಿಂದೆ ಸರ್ವೇಕ್ಷಣೆ ನಡೆಸುತ್ತಿದ್ದ ಚೀನದ ಕ್ಸಿಯಾಂಗ್ ಯಾಂಗ್ ಹಾಂಗ್ 3 ಈಗ ದಕ್ಷಿಣ ಚೀನ ಸಮುದ್ರದಲ್ಲಿ ಸಂಚರಿಸುತ್ತಿರುವುದು ಕಳೆದ ವಾರ ಪತ್ತೆಯಾಗಿತ್ತು. ಚೀನದ ಈ ಹಡಗು ತನ್ನ ಗುರುತನ್ನು ಬಿತ್ತರಿಸುವಂಥ ಯಂತ್ರಗಳನ್ನು, ಸಿಗ್ನಲ್‌ಗಳನ್ನು ತಡೆಹಿಡಿದು ಓಡಾಡುತ್ತಿತ್ತು. ಕೂಡಲೇ ಇಂಡೋನೇಷ್ಯಾದ ಸಾಗರ ಭದ್ರತಾ ಪಡೆಯು, ಈ ಹಡಗನ್ನು ತಡೆದು ನಿಲ್ಲಿಸಿತ್ತು. ಒಟ್ಟಾರೆಯಾಗಿ, ಸಾಗರ ಪ್ರಾಂತ್ಯದಲ್ಲಿನ ಚೀನದ ಸರ್ವೇಕ್ಷಣ ಹಡಗುಗಳ ಓಡಾಟಗಳನ್ನು ಈಗ ಭಾರತವಷ್ಟೇ ಅಲ್ಲದೇ ಸುತ್ತಮುತ್ತಲ ರಾಷ್ಟ್ರಗಳೆಲ್ಲ ಎಚ್ಚರಿಕೆಯಿಂದ ಗಮನಿಸುತ್ತಿವೆ.
ಇಂದು ಮಾತುಕತೆ :
ಪೂರ್ವ ಲಡಾಖ್ ಬಿಕ್ಕಟ್ಟಿಗೆ ಸಂಬಂಧಿಸಿ ಭಾರತ ಮತ್ತು ಚೀನದ ಕಾರ್ಪ್Õ ಕಮಾಂಡರ್ ಮಟ್ಟದ 9ನೇ ಸುತ್ತಿನ ಮಾತುಕತೆ ರವಿವಾರ ನಡೆಯಲಿದೆ.