ನವದೆಹಲಿ: ಅಕ್ರಮ ಹಣ ವರ್ಗಾವಣೆ ಮತ್ತು ಹವಾಲಾ ದಂಧೆ ಆರೋಪದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಬಲೆಗೆ ಬಿದ್ದಿರುವ ಚೀನಾದ ವ್ಯಕ್ತಿ, ಟಿಬೆಟಿಯನ್ ಬೌದ್ಧಗುರು ದಲಾಯಿ ಲಾಮಾ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದ ಎಂದು ತಡವಾಗಿ ತಿಳಿದುಬಂದಿದೆ.
ದೆಹಲಿಯಲ್ಲಿ ಇತ್ತೀಚೆಗಷ್ಟೇ ಚೀನೀ ಹವಾಲಾ ಕಂಪನಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಚಾರ್ಲಿ ಪೆಂಗ್ ಎಂಬ ಹೆಸರಿನಿಂದ ಕಾರ್ಯನಿರ್ವಹಿಸುತ್ತಿದ್ದ ಲ್ಯೂಸಾಂಗ್ ಎಂಬಾತನನ್ನೂ ಈ ವೇಳೆ ಬಂಧಿಸಿ, ವಿಚಾರಣೆಗೊಳಪಡಿಸಲಾಗಿತ್ತು.
ಭಾರತದಲ್ಲಿ ವಾಸವಿದ್ದ ಹಲವು ಟಿಬೆಟಿಯನ್ ಬೌದ್ಧರಿಗೆ ಈತ ಲಂಚ ನೀಡಿದ್ದ. ಅಲ್ಲದೆ, ದೆಹಲಿಯ ಮಜುಕಾಟೀಲಾ ಬಳಿ ಹಲವರಿಗೆ 2- 3 ಲಕ್ಷ ರೂ. ಅಕ್ರಮ ಹಣ ನೀಡಿದ್ದ. ಈ ಮೂಲಕ ದಲಾಯಿಲಾಮಾ ಮತ್ತು ಸಹಚರರ ವಿಚಾರಗಳನ್ನು ಕಲೆಹಾಕು ತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಗೂಢಚಾರ ಆರೋಪ: 2014ರಲ್ಲಿ ಭಾರತವನ್ನು ನೇಪಾಳ ಮೂಲಕ ಅಕ್ರಮವಾಗಿ ಪ್ರವೇಶಿಸಿದ್ದ, ಲ್ಯೂ ಸಾಂಗ್ ಮಿಝೋರಾಂನ ಮಹಿಳೆಯನ್ನು ವಿವಾಹವಾಗಿದ್ದ. ನಕಲಿ ಆಧಾರ್ ಕಾರ್ಡ್, ನಕಲಿ ಪಾಸ್‌ಪೋರ್ಟ್ ಪಡೆದಿದ್ದ. 2018ರಲ್ಲಿ ಗೂಢಚಾರ ನಡೆಸಿದ ಆರೋಪ ಕೂಡ ಈತ ಎದುರಿಸಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
40 ಬ್ಯಾಂಕ್ ಖಾತೆ: ವೀ ಚ್ಯಾಟ್ ಮೂಲಕ ಸಂವಹನ ನಡೆಸುತ್ತಿದ್ದ ಈತ ಸಿಎ ಮೂಲಕ 40ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ಕೊರಿಯರ್ ಮೂಲಕ ಅಕ್ರಮ ಹಣ ಕಳುಹಿಸುತ್ತಿದ್ದ. ಈತನಿಗೆ ನೆರವಾದ ದೆಹಲಿ ಮೂಲದ ಚಾರ್ಟೆಡ್ ಅಕೌಂಟೆಂಟ್‌ನನ್ನೂ
ಬಂಧಿಸಲಾಗಿದೆ.