ಹೊಸದಿಲ್ಲಿ: ಸೊಕ್ಕಿದ ವಿಸ್ತರಣಾವಾದಿ ಚೀನ ಪುನಃ ಅರುಣಾಚಲ ಪ್ರದೇಶದ ಭೂಪ್ರದೇಶಗಳ ಮೇಲೆ ತನ್ನ ವಕ್ರದೃಷ್ಟಿ ಹರಿಸಿದೆ. ಅರುಣಾಚಲದ ವಾಸ್ತವಿಕ ಗಡಿಯಿಂದ 4.5 ಕಿ.ಮೀ. ಒಳಭಾಗ ದಲ್ಲಿ ಕುತಂತ್ರಿ ಚೀನ ಹಳ್ಳಿ ನಿರ್ಮಿಸಿ ರುವ ಸಂಗತಿಯನ್ನು ಉಪಗ್ರಹ ಚಿತ್ರಗಳು ದೃಢಪಡಿಸಿದ್ದು, ಇದನ್ನು “ಎನ್‌ಡಿಟಿವಿ’ ವರದಿ ಮಾಡಿದೆ.
ಚೀನ ನಿರ್ಮಿಸಿರುವ ಹಳ್ಳಿಯಲ್ಲಿ 101 ಮನೆಗಳು ಎದ್ದುನಿಂತಿರುವುದು ಕೂಡ “ಪ್ಲ್ರಾನೆಟ್ ಲ್ಯಾಬ್ಸ್ ಇಂಕ್’ ಬಿಡುಗಡೆ ಮಾಡಿರುವ ಚಿತ್ರಗಳಲ್ಲಿ ಸ್ಪಷ್ಟವಾಗಿದೆ. ಮ್ಯಾಕ್‌ಮಹೊನ್ ಲೈನ್ ಸಮೀಪವೇ ಹರಿಯುವ ತ್ಸಾರಿ ಚು ನದಿ ದಡದಲ್ಲಿ ಈ ಹಳ್ಳಿ ಎದ್ದು ನಿಂತಿದೆ ಎಂದು “ಎನ್‌ಡಿಟಿವಿ’ ವರದಿ ಹೇಳಿದೆ.
ಆಗಸ್ಟ್ 26, 2019 ಮತ್ತು ನವೆಂಬರ್ 1, 2020ರ ಅವಧಿಯ ಎರಡು ಚಿತ್ರಗಳಲ್ಲಿ ಅಪಾರ ವ್ಯತ್ಯಾಸಗಳನ್ನೂ ಗುರುತಿಸಬಹು ದಾಗಿದೆ. ಕೇವಲ ಒಂದೇ ವರ್ಷದಲ್ಲಿ ಚೀನ ಇಷ್ಟು ಪ್ರಮಾಣದಲ್ಲಿ ಮನೆ ನಿರ್ಮಿಸಿರುವುದು ಸ್ಪಷ್ಟವಾಗಿದೆ.
ಚೀನ ದುಸ್ಸಾಹಸ: ಚೀನದ ಉದ್ಧಟತ ನದ ಕುರಿತು ಅರುಣಾಚಲ ಪ್ರದೇಶದ ಬಿಜೆಪಿ ಸಂಸದ ಟಾಪಿರ್ ಗಾವೋ ಈ ಹಿಂದೆಯೇ ಲೋಕಸಭೆ ಯಲ್ಲಿ ಎಚ್ಚರಿಸಿ ದ್ದರು. ಪ್ರಸ್ತುತ ನೂತನ ಚಿತ್ರಗಳ ಬಗ್ಗೆ ಅವರು, “ಚೀನ ನಿರ್ಮಾಣಗಳು ಇನ್ನೂ ಪ್ರಗತಿಯಲ್ಲಿವೆ. ಅಪ್ಪರ್‌ಸಬನ್ಸಿರಿ ಜಿಲ್ಲೆಯ 60-70 ಕಿ.ಮೀ. ಒಳಗೆ ಚೀನ ಪ್ರವೇಶಿಸಿದೆ. ಸ್ಥಳೀಯವಾಗಿ ಕರೆಯುವ ಲೆನ್ಸಿ ನದಿಯ ದಿಕ್ಕಿನಲ್ಲಿ ರಸ್ತೆಯನ್ನೂ ನಿರ್ಮಿಸುತ್ತಿದ್ದಾರೆ’ ಎಂದು “ಎನ್‌ಡಿಟಿವಿ’ಗೆ ಪ್ರತಿಕ್ರಿಯಿಸಿದ್ದಾರೆ.
ಭಾರತ ಹೇಳುವುದೇನು? :
ಉಪಗ್ರಹ ಚಿತ್ರಗಳ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಇಲಾಖೆ, “ಭಾರತದ ಗಡಿಪ್ರದೇಶಗಳಲ್ಲಿ ಚೀನದ ನಿರ್ಮಾಣ ಕಾಮಗಾರಿ ಕುರಿತ ವರದಿಗಳು ಗಮನಕ್ಕೆ ಬಂದಿವೆ. ಕಳೆದ ಕೆಲವು ವರ್ಷಗಳಿಂದ ಚೀನ ಮೂಲಸೌಕರ್ಯ ನಿರ್ಮಾಣ ಚಟುವಟಿಕೆ ನಡೆಸುತ್ತಾ ಬಂದಿದೆ. ನಮ್ಮ ಸರಕಾರ ಕೂಡ ಗಡಿಹಳ್ಳಿಗಳಲ್ಲಿ ರಸ್ತೆ, ಸೇತುವೆಯಂಥ ಮೂಲಸೌಕರ್ಯ ನಿರ್ಮಿಸಿದೆ. ಇದರಿಂದ ಸ್ಥಳೀಯ ಜನರಿಗೆ ಗಡಿಯುದ್ದಕ್ಕೂ ಸುಲಭವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ’ಎಂದು ಪ್ರತಿಕ್ರಿಯಿಸಿದೆ.