Advertisement

ಡೋಕ್ಲಾಮ್‌ ಮುಖಭಂಗದ ಬಳಿಕ ಚೀನ ತಣ್ಣಗೆ ಕುಳಿತಿಲ್ಲ!

02:32 AM Jun 02, 2020 | Sriram |

ಹೊಸದಿಲ್ಲಿ: 2017ರ ಡೋಕ್ಲಾಮ್‌ ಮುಖಭಂಗದ ಬಳಿಕ ಚೀನ ತಣ್ಣಗೆ ಕುಳಿತಿಲ್ಲ. ಭಾರತಕ್ಕೆ ಸಡ್ಡು ಹೊಡೆಯಲು, ಎತ್ತರ ಪ್ರದೇಶಗಳಲ್ಲಿ ಅನು ಕೂಲವಾಗುವಂತೆ ಯುಧ್ದೋಪಕರಣಗಳನ್ನು ಸಿದ್ಧ ಮಾಡಿಕೊಂಡಿದೆ ಎಂಬ ಸತ್ಯವನ್ನು ಚೀನದ “ಗ್ಲೋಬಲ್‌ ಟೈಮ್ಸ್‌’ನ ವರದಿ ಬಿಚ್ಚಿಟ್ಟಿದೆ.
“ಡೋಕ್ಲಾಮ್‌ ವಿವಾದದ ಅನಂತರ ಚೀನ ತನ್ನ ಮಿಲಿಟರಿ ಶಕ್ತಿಯ ಬಲವರ್ಧನೆಗೆ ಹೆಚ್ಚು ಒತ್ತು ನೀಡಿದೆ. ಎತ್ತರ ಪ್ರದೇಶಗಳಲ್ಲಿ ಹೋರಾಡಬಲ್ಲಂಥ ಟೈಪ್‌ 15 ಟ್ಯಾಂಕ್‌, ಝಡ್‌- 20 ಹೆಲಿಕಾಪ್ಟರ್‌, ಜಿಝಡ್‌- 2 ಡ್ರೋಣ್‌ಗಳು ಪೀಪಲ್ಸ್‌ ಲಿಬರೇಶನ್‌ ಆರ್ಮಿಗೆ ಇನ್ನಷ್ಟು ಬಲ ತುಂಬಿವೆ’ ಎಂದು ಹೇಳಿದೆ.

Advertisement

ಜನವರಿಯಲ್ಲೇ ಸಮರಾಭ್ಯಾಸ: “ಟೈಪ್‌ 15 ಟ್ಯಾಂಕ್‌, ಪಿಸಿಎಲ್‌- 181 ಹೊವಿಟರ್‌, ಮೌಂಟೆಡ್‌ ಹೊವಿಟ್ಜರ್‌ಗಳನ್ನು ನೈಋತ್ಯ ಚೀನದ ಟಿಬೆಟ್‌ ಪ್ರಸ್ಥಭೂಮಿಯಲ್ಲಿ ಪ್ರದರ್ಶಿಸಲಾಗಿದೆ. ಜನವರಿ ಯಲ್ಲೇ ಮಿಲಿಟರಿ ಅಭ್ಯಾಸ ನಡೆಸಲಾಗಿದೆ’ ಎಂದು ವಿವರಿಸಿದೆ.

“ಟೈಪ್‌ 15 ಟ್ಯಾಂಕ್‌ ವಿಶ್ವದ ಏಕೈಕ ಆಧುನಿಕ ಹಗುರ ಟ್ಯಾಂಕ್‌. ಎಷ್ಟು ಎತ್ತರ ಪ್ರದೇಶಕ್ಕೂ ಸಲೀಸಾಗಿ ಮುನ್ನುಗ್ಗುತ್ತದೆ. 105 ಮಿ.ಮೀ. ಗನ್‌, ಸುಧಾರಿತ ಸೆನ್ಸಾರ್‌ ಹೊಂದಿರುವ ಈ ಟ್ಯಾಂಕ್‌, ಶತ್ರುರಾಷ್ಟ್ರದ ಪ್ರಬಲ ಮಿಲಿಟರಿ ಯುದ್ಧ ವಾಹನಗಳನ್ನೂ ಧ್ವಂಸಗೊಳಿಸಬಹುದು’ ಎಂದು ಚೀನ ಸೇನೆಯ ಶಕ್ತಿಯನ್ನು ಗ್ಲೋಬಲ್‌ ಟೈಮ್ಸ್‌ ಕೊಂಡಾಡಿದೆ. ಹೆಲಿಕಾಪ್ಟರ್‌ಗಳು, ಭಾರಿ ಫಿರಂಗಿ, ಶಸ್ತ್ರಸಜ್ಜಿತ ವಾಹನಗಳನ್ನು ಟಿಬೆಟ್‌ ರಾಜಧಾನಿ ಲಾಸಾದಿಂದ ಭಾರತದ ಗಡಿಯತ್ತ ಈಗಾಗಲೇ ಸಾಗಿಸಲಾಗಿದೆ ಎಂದೂ ಎಚ್ಚರಿಸಿದೆ.

ಶೀತಲ ಸಮರದಲ್ಲಿ ಭಾರತ ಮಧ್ಯಪ್ರವೇಶ ಬೇಡ: ಚೀನ
ಚೀನ- ಅಮೆರಿಕದ ನಡುವಿನ ಶೀತಲ ಸಮರದಲ್ಲಿ ಭಾರತ ಭಾಗಿಯಾಗಬಾರದು. ಒಂದು ವೇಳೆ ಮಧ್ಯ ಪ್ರವೇಶಿಸಿದರೆ, ಭಾರತ ಭಾರಿ ಆರ್ಥಿಕ ಹೊಡೆತ ಅನು ಭವಿಸಬೇಕಾಗುತ್ತದೆ ಎಂದು ಗ್ಲೋಬಲ್‌ ಟೈಮ್ಸ್‌ ನಲ್ಲಿ ಪ್ರಕಟಗೊಂಡ ಲೇಖನ ಎಚ್ಚರಿಸಿದೆ. “ಭಾರತದಲ್ಲಿ ರಾಷ್ಟ್ರೀಯತೆ ಭಾವ ಹೆಚ್ಚುತ್ತಿದ್ದು, ಶೀತಲ ಸಮರದಲ್ಲಿ ಭಾಗಿಯಾಗಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳಬೇಕು ಎನ್ನುವ ಧ್ವನಿಗಳು ಅಲ್ಲಿ ಕೇಳಿಬರುತ್ತಿವೆ. ಆದರೆ, ಹೀಗೆ ಮಧ್ಯಪ್ರವೇಶಿಸುವುದರಿಂದ ಭಾರತಕ್ಕೆ ಲಾಭಕ್ಕಿಂತ ನಷ್ಟವೇ ಅಧಿಕ. ಮೋದಿ ಸರಕಾರ ಇದನ್ನು ತರ್ಕಬದ್ಧವಾಗಿ ಎದುರಿಸಬೇಕು’ ಎಂದು ಸಲಹೆ ನೀಡಿದೆ.

ಪ್ರತಿರಾತ್ರಿ 80- 90 ಟ್ರಕ್‌ ಲಡಾಖ್‌ನತ್ತ!
ಚೀನ ಸೈನಿಕರಿಗೆ ನಡುಕ ಹುಟ್ಟಿಸಲು ಇನ್ನೊಂದೆಡೆ ಭಾರತ ಮತ್ತಷ್ಟು ಸೈನಿಕರನ್ನು, ಯುಧ್ದೋಪಕರಣಗಳನ್ನು ಪೂರ್ವ ಲಡಾಖ್‌ನಲ್ಲಿ ನಿಯೋಜಿಸಿದೆ.

Advertisement

“ಕಾಶ್ಮೀರ ಎಲ್‌ಒಸಿಯಿಂದ ಲಡಾಖ್‌ನ ಎಲ್‌ಎಸಿಗೆ ಪ್ರಮುಖ ಸಂದರ್ಭದಲ್ಲಿ ಮಾತ್ರವೇ ಸೈನಿಕರ ಸ್ಥಳಾಂತರವಾಗುತ್ತದೆ. ಈಗ ಆ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಸೇನೆಯ ಮೂಲಗಳು ತಿಳಿಸಿವೆ.

ಮತ್ತೆ ಕಮಾಂಡರ್‌ಗಳ ಮಾತುಕತೆ: ಒಂದೆಡೆ ರಾಜತಾಂತ್ರಿಕ ಮಾತುಕತೆ ಅಲ್ಲದೆ, ಭಾರತ- ಚೀನ ಗಡಿಯಲ್ಲಿ ಉಭಯ ರಾಷ್ಟ್ರಗಳ ಕಮಾಂಡರ್‌ ಗಳ ನಡುವೆಯೂ ಮಾತುಕತೆ ಏರ್ಪಟ್ಟಿದೆ ಎಂದು ಭಾರತೀಯ ಸೇನೆ ತಿಳಿಸಿದೆ. “ಪ್ರಸ್ತುತ ಗಡಿಯಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ. ಗಡಿಯಲ್ಲಿ ಘರ್ಷಣೆ ಬಿಂಬಿಸುವ ದೃಶ್ಯಗಳನ್ನು ಮಾಧ್ಯಮಗಳು ಪ್ರಸಾರ ಮಾಡಬಾರದು’ ಎಂದು ಸೂಚಿಸಿದೆ.

ಭಾರತದ ಗಡಿಯಲ್ಲಿ
ಸ್ಥಿತಿ ಶಾಂತಿಯುತವಾಗಿದೆ ಮತ್ತು ನಿಯಂತ್ರಣದಲ್ಲಿದೆ. ಎರಡೂ ಕಡೆಯಿಂದ ಆಗಾಗ ಸಂಪರ್ಕ ಸಾಧಿಸಿ ಮಾತುಕತೆ ನಡೆಸುತ್ತಿದ್ದೇವೆ. ಭಾರತದ ಆತ್ಮಗೌರವಕ್ಕೆ ಧಕ್ಕೆಯಾಗುವಂತೆ ಮಾಡುವುದು ನಮ್ಮ ಉದ್ದೇಶವಲ್ಲ.
-ಝಾಹೋ ಲಿಜಿಯಾನ್‌, ಚೀನ ವಿದೇಶಾಂಗ
ಇಲಾಖೆ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next