ಹೊಸದಿಲ್ಲಿ : ಅತ್ತ ಸಿಕ್ಕಿಂ ಗಡಿಯಲ್ಲಿನ ಡೋಕ್‌ಲಾಂ ನಲ್ಲಿ ಭಾರತ -ಚೀನ ಸೇನೆಯ ಮುಖಾಮುಖೀ ಕಳೆದ ಜೂನ್ 16ರಿಂದ ಮುಂದುವರಿದಿರುವಂತೆಯೇ ಇತ್ತ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿನ ಬಾರಾಹುತಿ ಗಡಿಯನ್ನು ಚೀನ ಸೇನೆ ಈಚೆಗೆ ಪ್ರವೇಶಿಸಿರುವುದು ವರದಿಯಾಗಿದೆ.
ಚೀನ ಸೇನೆಯ ಈ ಗಡಿ- ಒಳಪ್ರವೇಶವು ಕಳೆದ ಜು.26ರಂದು ನಡೆದಿರುವುದಾಗಿ ಸೇನಾ ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ಜು.19ರಂದು ಕೂಡ ಚೀನ ಸೇನೆ ಚಮೋಲಿ ಜಿಲ್ಲೆಯಲ್ಲಿ ಭಾರತದ ಗಡಿಯನ್ನು ಅತಿಕ್ರಮಿಸಿ ಒಳಬಂದಿತ್ತು ಮತ್ತು ತನ್ನ ಶಸ್ತ್ರಾಸ್ತ್ರಗಳೊಂದಿಗೆ ಡೇರೆ ಹಾಕಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.
ಬಾರಾಹುತಿ ಮೈದಾನದಲ್ಲಿ ಸರ್ವೇ ಕಾರ್ಯ ನಡೆಸಲು ಹೋಗಿದ್ದ ಚಮೋಲಿ ಜಿಲ್ಲಾಧಿಕಾರಿ ಮತ್ತು ಐಟಿಬಿಪಿಯ ಇತರ ಅಧಿಕಾರಿಗಳನ್ನು ಚೀನ ಸೇನೆ ಹಿಂದಕ್ಕೆ ಕಳುಹಿಸಿತ್ತು ಎಂದು ತಿಳಿದು ಬಂದಿದೆ.
ಜು.19ರಂದು ಚೀನ ಪಿಎಲ್‌ಎ ಸೇನೆಯ ಹೆಲಿಕಾಪ್ಟರ್ ಒಂದು ಭಾರತೀಯ ವಾಯುಕ್ಷೇತ್ರದ ಉಲ್ಲಂಘನೆಗೈದು ಒಳಗೆ ಬಂದಿತ್ತು ಎಂದು ಗೊತ್ತಾಗಿದೆ.
ಉತ್ತರಾಖಂಡವು ಚೀನದೊಂದಿಗೆ 350 ಕಿ.ಮೀ. ಗಡಿಯನ್ನು ಹೊಂದಿದೆ. ಭೂತಾನ್‌ಗೆ ಸೇರಿರುವ ಡೋಕ್‌ಲಾಂ ತನ್ನ ಪ್ರದೇಶವೆಂಬ ಹಠಕ್ಕೆ ಬಿದ್ದಿರುವ ಚೀನ, ಅಲ್ಲಿನ ವಿವಾದಾತ್ಮಕ ಗಡಿ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ತೊಡಗಿದಾಗ ಭಾರತೀಯ ಸೇನೆ ಅದನ್ನು ತಡೆದಿತ್ತು. ಆ ಬಳಿಕ ಜೂನ್ 16ರಿಂದ ಈ ವರೆಗೂ ಈ ಟ್ರೈ ನೇಶನ್ ಜಂಕ್ಷನ್‌ನಲ್ಲಿ (ತ್ರಿರಾಷ್ಟ್ರ ಚೌಕ) ಉಭಯ ದೇಶಗಳ ಸೇನಾ ಮುಖಾಮುಖೀ ಮುಂದುವರಿದುಕೊಂಡು ಬಂದಿದೆ.