Advertisement

ಮೈದುಂಬಿದ ಎತ್ತಪೋತಾ

10:00 AM Aug 05, 2019 | Team Udayavani |

ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಇರುವ ‘ಎತ್ತಪೋತಾ’ ಜಲಧಾರೆ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

Advertisement

ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆ. ಅಲ್ಲದೇ ತೆಲಂಗಾಣದಲ್ಲಿ ಮಳೆ ಆಗುತ್ತಿರುವುದರಿಂದ ಗೋಪು ನಾಯಕ ಮತ್ತು ಸಂಗಾಪುರ ತಾಂಡಾಗಳ ಮಧ್ಯೆ ಹರಿಯುವ ಎತ್ತಪೋತಾ ಜಲಧಾರೆಗೆ ಹೆಚ್ಚಿನ ನೀರು ಹರಿದು ಬರುತ್ತಿದೆ.

ಕಳೆದ ಮೂರು ದಿನಗಳಿಂದ ತೆಲಂಗಾಣ ರಾಜ್ಯದ ಜಹಿರಾಬಾದ, ಕೋಹಿರ, ತಾಂಡೂರ, ಕುಂಚಾವರಂ, ಚಿಂಚೋಳಿ ತಾಲೂಕಿನ ಪ್ರವಾಸಿಗರು ಬೆಟ್ಟ ಗುಡ್ಡಗಳ ಮಧ್ಯೆ ಜುಳುಜುಳು ಎಂದು ಮೈದುಂಬಿ ಹರಿಯುವ ಜಲಧಾರೆ ನೋಡಿ ಸಂತಸ ಪಡುತ್ತಿದ್ದಾರೆ.

ಕುಂಚಾವರಂ ಅರಣ್ಯ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಆಗುತ್ತಿರುವುದರಿಂದ ವನ್ಯಜೀವಿಧಾಮದಲ್ಲಿ ಇರುವ ಸಣ್ಣಪುಟ್ಟ ನಾಲೆಗಳಲ್ಲಿ ನೀರು ಹರಿದು ಬಂದು, ಆ ನೀರು ಎತ್ತಪೋತಾಕ್ಕೆ ಸೇರಿಕೊಳ್ಳುತ್ತಿದೆ. ಈ ನೀರು 50 ಅಡಿ ಎತ್ತರದಿಂದ ಧುಮ್ಮುಕ್ಕಿ ಹರಿಯುತ್ತಿದೆ.

ಕಳೆದ ಮೂರು ವರ್ಷಗಳಿಂದ ತಾಲೂಕಿನಲ್ಲಿ ಮಳೆ ಅಭಾವದಿಂದಾಗಿ ಎತ್ತಪೋತಾ ಜಲಧಾರೆ ಬತ್ತಿ ಹೋಗಿ ಜೀವಕಳೆ ಕಳೆದುಕೊಂಡಿತ್ತು. ಈಗ ಮಳೆ ಸುರಿಯುತ್ತಿದ್ದು, ಬೆಟ್ಟಗುಡ್ಡಗಳಿಂದ ಬಳಕುತ್ತಾ ಹರಿದು ಬರುವ ಮಳೆಯ ಕೆಂಪು ನೀರು ಎತ್ತಪೋತಾ ಜಲಧಾರೆಗೆ ಬರುತ್ತಿದೆ.

Advertisement

ಜನಜೀವನ ಅಸ್ತವ್ಯಸ್ತ
ಚಿಂಚೋಳಿ ತಾಲೂಕಿನಲ್ಲಿ ಮಳೆ ಮತ್ತೆ ಮುಂದುವರಿದ್ದು ರವಿವಾರ ಸಂಜೆ ವ್ಯಾಪಕ ಮಳೆ ಸುರಿದಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಪಟ್ಟಣದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಸಂತೆಗೆ ಬಂದ ತರಕಾರಿ ವ್ಯಾಪಾರಿಗಳು ಪರದಾಡಿದರು. ತಾಲೂಕಿನಲ್ಲಿ ಮುಂಜಾನೆ ಸೂರ್ಯ ದರ್ಶನವಾಯಿತು. ನಂತರ ಮಧ್ಯಾಹ್ನ ಸಮಯದಲ್ಲಿ ಮತ್ತೇ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಚಿಂಚೋಳಿ 20 ಮಿ.ಮೀ, ಕುಂಚಾವರಂ 20.4 ಮಿ.ಮೀ, ಸುಲೇಪೇಟ 25.2 ಮಿ.ಮೀ, ನಿಡಗುಂದಾ 14 ಮಿ.ಮೀ, ಕೋಡ್ಲಿ 32 ಮಿ.ಮೀ, ಐನಾಪುರ 15.4 ಮಿ.ಮೀ, ಚಿಮ್ಮನಚೋಡ 20 ಮಿ.ಮೀ ಮಳೆ ಆಗಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಸ್ಥಗಿತವಾಗಿವೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಅನೀಲಕುಮಾರ ರಾಠೊಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next