ಚಿಂಚೋಳಿ: ಮೀಸಲು (ಪರಿಶಿಷ್ಟ ಜಾತಿ) ವಿಧಾನಸಭಾ ಮತಕ್ಷೇತ್ರಕ್ಕೆ ಮೇ 19 ರಂದು ಉಪ ಚುನಾವಣೆ ನಡೆಯಲಿದ್ದು, ತಾಲೂಕಿನಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದರಿಂದ ಎಲ್ಲ ರಾಜಕೀಯ ಪಕ್ಷಗಳು ನಿಷ್ಪಕ್ಷಪಾತ ಹಾಗೂ ನಿರ್ಭಿತಿಯಿಂದ ಚುನಾವಣೆ ನಡೆಸಲು ಸಹಕಾರ ನೀಡಬೇಕೆಂದು ಸಹಾಯಕ ಚುನಾವಣಾಧಿಕಾರಿ ಸೋಮಶೇಖರ ಎಸ್.ಜೆ. ತಿಳಿಸಿದ್ದಾರೆ.
ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ವಿವಿಧ ಪಕ್ಷಗಳ ಮುಖಂಡರುಗಳ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷದ ಮುಖಂಡರು ಉಪ ಚುನಾವಣೆಯಲ್ಲಿ ಬಹಿರಂಗ ಸಭೆ ಮತ್ತು ರೋಡ ಶೋ ಇಲ್ಲವೇ ಮೆರವಣಿಗೆ ಮಾಡುವಾಗ ಪರವಾನಗಿ ಪಡೆಯುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಚುನಾವಣೆ ಆಯೋಗ ಜಾರಿಗೊಳಿಸಿದ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ತಪ್ಪದೇ ಪಾಲಿಸಬೇಕು. ಚುನಾವಣೆ ಸಂದರ್ಭದಲ್ಲಿ ಗಲಾಟೆ, ಅಹಿಂಸೆ, ಶಾಂತಿಭಂಗ ಆಗದಂತೆ ಅರೆ ಸೇನಾ ಮಿಲಿó ಪಡೆಯನ್ನು ತಾಲೂಕಿಗೆ ಕರೆಸುವಂತೆ ಚಿಂಚೋಳಿ ಡಿವೈಎಸ್ಪಿಗೆ ಸೂಚನೆ ನೀಡಲಾಗಿದೆ. 241 ಮತಗಟ್ಟೆ ಕೇಂದ್ರಗಳಿದ್ದು, 21 ಸೆಕ್ಟರ್‌ಗಳನ್ನು ಮಾಡಲಾಗಿದೆ. ಚುನಾವಣೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಕಾಂಗ್ರೆಸ ಪಕ್ಷದ ಜಿಪಂ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ ಮಾತನಾಡಿ,ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅನೇಕ ಗ್ರಾಮಗಳಲ್ಲಿ ವಿದ್ಯುನ್ಮಾನ ಮತ ಯಂತ್ರಗಳು ಸ್ಥಗಿತಗೊಂಡಿದ್ದರಿಂದ ಅನೇಕ ಕಡೆ ಮತದಾನಕ್ಕೆ ತೊಂದರೆ ಆಗಿದೆ. ಮತದಾನ ಮಾಡಲು ಬಂದ ವಯೋ ವೃದ್ಧರು ಬಿಸಿಲಿನಲ್ಲಿ ಕಾಯಬೇಕಾಯಿತು. ಆದರಿಂದ ಮತದಾನಕ್ಕೆ ವಿಳಂಬ ಆಗದಂತೆ ಗಮನ ಹರಿಸಬೇಕೆಂದು ತಿಳಿಸಿದರು.
ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ. ಬಾರಿ ಮಾತನಾಡಿ ತಾಲೂಕಿನಲ್ಲಿ ಬಿಸಿಲಿನ ತಾಪದಿಂದಾಗಿ ಕೆಲವು ಗ್ರಾಮ ಮತ್ತು ತಾಂಡಾಗಳಲ್ಲಿ ವಿದ್ಯುನ್ಮಾನ ಯಂತ್ರಗಳಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ಜನರು ತೊಂದರೆ ಪಡಬೇಕಾಯಿತು. ಮತದಾನ ಮಾಡಲು ಬರುವ ಮತದಾರರಿಗೆ ಕುಡಿಯಲು ನೀರು, ನೆರಳಿಗಾಗಿ ಟೆಂಟ್ ಹಾಕಿಸಬೇಕೆಂದು ಹೇಳಿದರು.
ಪುರಸಭೆ ಸದಸ್ಯ ಅಬ್ದುಲ್ ಬಾಸೀತ, ಶಬ್ಬೀರ ಅಹೆಮದ್, ನಾಗೇಶ ಗುಣಾಜಿ, ರಾಮಚಂದ್ರ ಜಾಧವ, ಬಸವರಾಜ ಕಡಬೂರ, ಅನ್ವರ ಖತೀಬ ಮಾತನಾಡಿದರು. ಚುನಾವಣಾ ಸಿಬ್ಬಂದಿಗಳಾದ ತಹಶೀಲ್ದಾರ್ ಪಂಡಿತ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಅನೀಲಕುಮಾರ ರಾಠೊಡ, ಮಲ್ಲಿಕಾರ್ಜುನ ಪಾಲಾಮೂರ, ನಾಗೇಶ ಭದ್ರಶೆಟ್ಟಿ ಇದ್ದರು.