Advertisement

ಬಿಜೆಪಿಗೆ ಬಸವ ಜಯಂತಿ ಗೊತ್ತಿಲ್ಲ: ಎಂ.ಬಿ. ಪಾಟೀಲ

12:52 PM May 16, 2019 | Naveen |

ಚಿಂಚೋಳಿ: ಬಿಜೆಪಿ ಮತ್ತು ಆರ್‌.ಎಸ್‌.ಎಸ್‌. ವಿಶ್ವ ಗುರು ಬಸವಣ್ಣನವರ ತತ್ವ-ಸಿದ್ಧಾಂತ ವಿರೋಧಿಸುತ್ತಲೆ ಬಂದಿದೆ. ಬಿಜೆಪಿಗೆ ಬಸವ ಜಯಂತಿ ಗೊತ್ತಿಲ್ಲ. ಆರ್‌.ಎಸ್‌.ಎಸ್‌. ತತ್ವ ಸಿದ್ಧಾಂತಗಳೇ ಬೇರೆ ಮತ್ತು ಬಸವಣ್ಣನವರ ತತ್ವ-ವಿಚಾರಗಳೇ ಬೇರೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.

Advertisement

ಪಟ್ಟಣದ ವಿರೇಂದ್ರ ಪಾಟೀಲ ಆಂಗ್ಲ ಮಾದ್ಯಮ ಶಾಲೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಅವರು ಮಾತನಾಡಿದರು.

ವೀರಶೈವ ಸಮಾಜ ಎಲ್ಲ ಜಾತಿ ವರ್ಗದವರನ್ನು ಕೂಡಿಕೊಂಡು ಹೋಗುವುದಾಗಿದೆ. ಆದರೆ ಬಿಜೆಪಿ ಸಮಾಜವನ್ನು ಒಡೆಯುತ್ತಿದೆ. ಕಾಂಗ್ರೆಸ್‌ ಪಕ್ಷ ಜೋಡಿಸುತ್ತಿದೆ. ವೀರಶೈವ ಸಮಾಜಕ್ಕೆ ಕಾಂಗ್ರೆಸ್‌ ಅಪಾರ ಕೊಡುಗೆ ನೀಡಿದೆ ಎಂದರು.

ಚಿಂಚೋಳಿ ಮತಕ್ಷೇತ್ರದಿಂದ ಆಯ್ಕೆಯಾದ ವೀರೇಂದ್ರ ಪಾಟೀಲ ಅವರನ್ನು ಕಾಂಗ್ರೆಸ್‌ ಎರಡು ಸಲ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಕಾಂಗ್ರೆಸ್‌ ವೀರೇಂದ್ರ ಪಾಟೀಲರಿಗೆ ಅನ್ಯಾಯ ಮಾಡಿಲ್ಲ. ಆದರೆ ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ ತೆಗೆದು ಹಾಕಿದಾಗ ಕೆಜೆಪಿಗೆ ಹೋಗಿದ್ದರು. ದೇಶದಲ್ಲಿಯೇ ಅತ್ಯಂತ ಭ್ರಷ್ಟ ಮುಖ್ಯಮಂತ್ರಿಗಳೆಂದು ಬಿಜೆಪಿಯೇ ಅವರನ್ನು ಟೀಕಿಸಿತ್ತು ಎಂದು ಟೀಕಿಸಿದರು.

ಸಮ್ಮಿಶ್ರ ಸರಕಾರ ಪತನ ಆಗಲಿದೆ ಎಂದು ಅವರು ಕನಸು ಕಾಣುತ್ತಿದ್ದಾರೆ. ಚುನಾವಣೆ ನಂತರ ಏನೂ ಆಗುವುದಿಲ್ಲ. ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. 75 ವರ್ಷದ ಬಿ.ಎಸ್‌.ಯಡಿಯೂರಪ್ಪ ಮುಂದೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಮಾರ್ಗದರ್ಶಕ ಮಂಡಳಿಗೆ ಸೇರಲಿದ್ದಾರೆ ಎಂದು ವ್ಯಂಗವಾಡಿದರು.

Advertisement

ಮಾಜಿ ಶಾಸಕ ವೀರೇಂದ್ರ ಪಾಟೀಲ ಪುತ್ರ ಕೈಲಾಶನಾಥ ಪಾಟೀಲ ಅವರನ್ನು ಮುಂದಿನ ದಿನಗಳಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡಲು ನಾವೆಲ್ಲ ವೀರಶೈವ ಲಿಂಗಾಯತ ಸಮಾಜದ ಸಚಿವರು, ಶಾಸಕರು ಒಪ್ಪಿಗೆ ನೀಡುತ್ತಿದ್ದೇವೆ. ಅವರಿಗೂ ಒಂದು ಸ್ಥಾನಮಾನ ಸಿಗಲಿದೆ. ಕ್ಷೇತ್ರವನ್ನು ಬಿಟ್ಟು ಓಡಿ ಹೋಗಿರುವ ಮಾಜಿ ಶಾಸಕ ಡಾ| ಉಮೇಶ ಜಾಧವ ಮತ್ತು ಬಿಜೆಪಿ ಅಭ್ಯರ್ಥಿ ಡಾ| ಅವಿನಾಶ ಜಾಧವ ಅವರನ್ನು ಸೋಲಿಸಬೇಕೆಂದು ಹೇಳಿದರು.

ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಕಾಂಗ್ರೆಸ್‌ ಪಕ್ಷ ಎಲ್ಲ ಸಮಾಜಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸಿದೆ. ಬಿಜೆಪಿ ಅವರಿಗೆ ವಚನ ಸಾಹಿತ್ಯ ಮತ್ತು ಶರಣರ ತತ್ವ-ವಿಚಾರಗಳೇ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು. ಕೇವಲ ಆರ್‌.ಎಸ್‌.ಎಸ್‌. ಮತ್ತು ಬಿಜೆಪಿ ತತ್ವ-ವಿಚಾರಗಳು ಮಾತ್ರ. ನಮ್ಮ ಸಮಾಜಕ್ಕೆ ದೊಡ್ಡ ಗೌರವ ಇದೆ. ವೀರಶೈವ ಸಮಾಜ ಕಾಯಕ ಮತ್ತು ದಾಸೋಹ ಸಂಸ್ಕೃತಿಯಿಂದ ಮೇಲೆ ಬಂದಿದೆ. ಎಲ್ಲರಿಗೂ ನ್ಯಾಯ ಸಿಗಬೇಕೆಂಬ ವಿಚಾರ ಧಾರೆ ಹೊಂದಿದೆ. ಸತ್ಯವನ್ನು ಎತ್ತಿ ಹಿಡಿಯುತ್ತದೆ. ಆದರೆ ಮಾಜಿ ಶಾಸಕರು ನಿಮ್ಮ ಜನಾಶೀರ್ವಾದ ಮಾರಾಟ ಮಾಡಿಕೊಂಡು ಹೋಗಿದ್ದಾರೆ. ಹೀಗಾಗಿ ವೀರಶೈವ ಸಮಾಜ ತಕ್ಕ ಪಾಠ ಕಲಿಸಬೇಕೆಂದರು.

ಕಾಂಗ್ರೆಸ್‌ ಅಭ್ಯರ್ಥಿ ಸುಭಾಶ ರಾಠೊಡ ಮಾತನಾಡಿ, ನಾನು ಹುಟ್ಟಿದ್ದು ಲಂಬಾಣಿ ತಾಂಡಾದಲ್ಲಿ. ಆದರೆ ನನಗೆ ಸಂಸ್ಕಾರ, ಸಂಸ್ಕೃತಿ ಸಿಕ್ಕಿದ್ದು ಮಠಗಳಲ್ಲಿ. ಶರಣರ ವಿಚಾರ, ವಚನಗಳನ್ನು ಅಳವಡಿಸಿಕೊಂಡಿದ್ದೇನೆ. ನನಗೆ ಒಂದು ಸಲ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಸಚಿವ ಪ್ರಿಯಾಂಕ್‌ ಖರ್ಗೆ, ಕೆಪಿಸಿಸಿ (ಐ) ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಶಾಸಕ ಕೈಲಾಶನಾಥ ಪಾಟೀಲ, ಮಲ್ಲಿಕಾರ್ಜುನ ಪಾಟೀಲ ಹುಳಗೇರಾ, ಶಾಸಕ ಅಜಯಸಿಂಗ್‌, ಸಚಿವ ರಹೀಮಖಾನ್‌, ಅಲ್ಲಮಪ್ರಭು ಪಾಟೀಲ, ಸೋಮಶೇಖರ ಪಾಟೀಲ, ಜಿಪಂ ಸದಸ್ಯ ಗೌತಮ ಪಾಟೀಲ, ರವಿರಾಜ ಕೊರವಿ, ತಿಪ್ಪಣ್ಣಪ್ಪ ಕಮಕನೂರ, ಜಲಜಾ ನಾಯಕ, ರಮೇಶ ಸೀಳಿನ, ಮಲ್ಲಿಕಾರ್ಜುನ ಭೂಶೆಟ್ಟಿ, ಮಲ್ಲಿಕಾರ್ಜುನ ಬಸಂತಪೂರ, ಮಂಜು ಲೇವರಿ ಇನ್ನಿತರರಿದ್ದರು. ಚಿತ್ರಶೇಖರ ಪಾಟೀಲ ಸ್ವಾಗತಿಸಿದರು. ಬಸವರಾಜ ಮಲಿ ವಂದಿಸಿದರು.

ಆಪರೇಶನ್‌ ಕಮಲ ಹೊಸದೇನೂ ಅಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ನಮ್ಮ ಸರಕಾರ ಇನ್ನು ನಾಲ್ಕು ವರ್ಷ ಯಾವುದೇ ಅಡೆ ತಡೆ ಇಲ್ಲದೇ ಆಡಳಿತ ನಡೆಸುತ್ತದೆ.
ಡಾ| ಜಿ. ಪರಮೇಶ್ವರ,
ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next