ಚಿಂಚೋಳಿ: ಪ್ರಸಕ್ತ ಸಾಲಿನಲ್ಲಿ ತಾಲೂಕಿನ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಕಳಪೆಮಟ್ಟದ ಸೋಯಾಬಿನ್ ಬಿತ್ತನೆ ಬೀಜ ನೀಡುವ ಮೂಲಕ ಮೋಸ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಆರೋಪಿಸಿದರು.
ತಾಲೂಕಿನ ಚಿಕ್ಕನಿಂಗದಳ್ಳಿ, ಶಾದೀಪುರ, ಚಿಂಚೋಳಿ ರೈತರ ಹೊಲಗಳಲ್ಲಿ ಮುಂಗಾರು ಸೋಯಾಬಿನ್ ಬಿತ್ತನೆ ಬೀಜ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಮುಂಗಾರು ಬಿತ್ತನೆ ಮಾಡುವ ಪೂರ್ವದಲ್ಲಿ ಕೃಷಿ ಅಭಿಯಾನ ಮಾಡಿಲ್ಲ. ಬೀಜೋಪಚಾರ ಮಾಡುವ ಬಗ್ಗೆ ರೈತರಿಗೆ ಮಾಹಿತಿ ನೀಡಿಲ್ಲ. ಕೃಷಿ ಇಲಾಖೆಯಿಂದ ಜಾಗೃತಿ ಮೂಡಿಸದೇ ರೈತರಿಗೆ ಮೋಸ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳಪೆಮಟ್ಟದ ಸೋಯಾಬಿನ್ ಬೀಜ ಬಿತ್ತನೆ ಮಾಡಿದ ರೈತರಿಗೆ ಪರಿಹಾರ ನೀಡಬೇಕು. ಉಳಿದ ಸೋಯಾಬಿನ್ ಬೀಜವನ್ನು ಸರಕಾರ ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಗಡಿಪ್ರದೇಶ ಕುಂಚಾವರಂ ಗ್ರಾಮದ ರೈತನೊಬ್ಬ ತನ್ನ 10 ಎಕರೆ ಜಮೀನಿನಲ್ಲಿ ಸೋಯಾ ಬೀಜ ಬಿತ್ತನೆ ಮಾಡಿದ್ದಾನೆ. ಆದರೆ ಒಂದೂ ಬೀಜ ಮೊಳಕೆಯೊಡೆದಿಲ್ಲ. ರೈತರು ಸಾಲಸೋಲ ಮಾಡಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಿದ್ದಾರೆ. ಸರಕಾರ ರೈತರನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಮಳೆ ಅಬ್ಬರ ಇಲ್ಲದಿದ್ದರೂ ರೈತರು ಕಡಿಮೆ ತೇವಾಂಶದಲ್ಲಿಯೇ ಹೆಸರು, ಉದ್ದು, ತೊಗರಿ ಬೀಜ ಬಿತ್ತನೆ ಮಾಡುತ್ತಿದ್ದಾರೆ. ಕೃಷಿ ಇಲಾಖೆ ರೈತರಿಗೆ ಸೂಕ್ತ ಸಲಹೆ ನೀಡಬೇಕು ಎಂದು ಹೇಳಿದರು.