Advertisement

ತಾಪಕ್ಕೆ ಬತ್ತುತ್ತಿದೆ ಮುಲ್ಲಾಮಾರಿ ನದಿ

12:47 PM Mar 21, 2020 | Naveen |

ಚಿಂಚೋಳಿ: ಸೇಡಂ ಮತ್ತು ಚಿಂಚೋಳಿ ತಾಲೂಕಿನ ಜನರ ಜೀವನಾಡಿ ಆಗಿರುವ ಮುಲ್ಲಾಮಾರಿ ನದಿ ಬಿಸಿಲಿನ ತಾಪಕ್ಕೆ ದಿನೇ ದಿನೇ ಬತ್ತಿ ಹೋಗುತ್ತಿದ್ದು, ನದಿಯಲ್ಲಿನ ನೀರು ಗಬ್ಬು ವಾಸನೆ ಹೊಡೆಯುತ್ತಿದೆ.

Advertisement

ನೀರು ಹರಿಯದೇ ನಿಂತಲ್ಲೆ ನಿಂತು ಹಾಸುಗಟ್ಟುತ್ತಿದೆ. ಇದರಿಂದ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಆದ್ದರಿಂದ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ನದಿಗೆ ನೀರು ಹರಿ ಬಿಡಬೇಕೆಂದು ಸಾಮಾಜಿಕ ಕಾರ್ಯಕರ್ತ ಭೀಮಶೆಟ್ಟಿ ಮುಕ್ಕಾ ಒತ್ತಾಯಿಸಿದ್ದಾರೆ.

ಕೆಳದಂಡೆ ಮುಲ್ಲಾಮಾರಿ ನದಿ ಪಾತ್ರದಲ್ಲಿ ಬರುವ ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ,ನಿಮಾಹೊಸಳ್ಳಿ, ಚಿಂಚೋಳಿ, ಅಣವಾರ, ಗಂಗನಪಳ್ಳಿ, ಪರದಾರ ಮೋತಕಪಳ್ಳಿ, ಗರಗಪಳ್ಳಿ, ಇರಗಪಳ್ಳಿ, ಬುರುಗಪಳ್ಳಿ, ಕರಚಖೇಡ, ಚತ್ರಸಾಲ, ಜಟ್ಟೂರ, ಪೋತಂಗಲ್‌, ಹಲಕೋಡಾ ಗ್ರಾಮ ಮತ್ತು ಸೇಡಂ ತಾಲೂಕಿನ 15 ಹಳ್ಳಿಗಳ ಜನರು ಮುಲ್ಲಾಮಾರಿ ನದಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.

ಕನಕಪುರ, ಗಾರಂಪಳ್ಳಿ, ನಿಮಾಹೊಸಳ್ಳಿ ಬಳಿ ಬ್ಯಾರೇಜ್‌ ನಿರ್ಮಿಸಿದ್ದರಿಂದ ನದಿಯಲ್ಲಿ ನೀರು ಹರಿಯುತ್ತಿಲ್ಲ. ಇದರಿಂದ ದನಕರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ತೆಗ್ಗು-ಗುಂಡಿಗಳಲ್ಲಿ ನಿಂತ ನೀರು ಹೊಲಸು ನಾರುತ್ತಿದೆ. ತಾಲೂಕಿನ ನಾಗರಾಳ ಗ್ರಾಮದ ಬಳಿ ಮುಲ್ಲಾಮಾರಿ ಜಲಾಶಯ ನಿರ್ಮಿಸಲಾಗಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಅಲ್ಪ-ಸ್ವಲ್ಪ ಮಳೆ ಆಗಿರುವುದರಿಂದ ಜಲಾಶಯದ ಸುರಕ್ಷತೆ ಕಾಪಾಡಿಕೊಳ್ಳುವುದಕ್ಕಾಗಿ ಜಲಾಶಯದಿಂದ ಸೆಪ್ಟೆಂಬರ್‌-ಅಕ್ಟೋಬರ್‌-ನವೆಂಬರ್‌ ತಿಂಗಳವರೆಗೆ ಒಟ್ಟು 10 ಸಲ ಜಲಾಶಯದಿಂದ 650 ಕ್ಯೂಸೆಕ್‌ ನೀರು ಹರಿ ಬಿಟ್ಟರೂ ಜಲಾಶಯದಲ್ಲಿ ನೀರಿನ ಗರಿಷ್ಟಮಟ್ಟ 490.79 ಮೀಟರ್‌ ಇದೆ.

ಜಲಾಶಯದಿಂದ ಯೋಜನೆಯ ಮುಖ್ಯ ಕಾಲುವೆ ಆಧುನಿಕರಣ ಕಾಮಗಾರಿ ನಡೆಯುತ್ತಿದ್ದುದರಿಂದ ಕಳೆದ ಮೂರು ವರ್ಷಗಳಿಂದ ಮುಖ್ಯ ಕಾಲುವೆಗೆ ನೀರು ಹರಿಸಿಲ್ಲ. ಹೀಗಾಗಿ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಆದ್ದರಿಂದ ದನಕರುಗಳಿಗಾಗಿ ಮುಲ್ಲಾಮಾರಿ ಜಲಾಶಯದಿಂದ ನದಿಗೆ ನೀರು ಹರಿ ಬಿಡಬೇಕೆಂದು ಕಾಂಗ್ರೆಸ್‌ ಮುಖಂಡ ಸುಭಾಷ ರಾಠೊಡ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Advertisement

ಮುಲ್ಲಾಮಾರಿ ನದಿ ನೀರನ್ನು ಕಲ್ಲೂರ ಚೆಟ್ಟಿನಾಡ್‌ ಸಿಮೆಂಟ್‌ ಕಂಪನಿ, ಚತ್ರಸಾಲ ಕಲಬುರಗಿ ಸಿಮೆಂಟ್‌ ಕಂಪನಿ, ಸೇಡಂ ತಾಲೂಕಿನ ವಾಸವದತ್ತಾ ಸಿಮೆಂಟ್‌ ಕಂಪನಿ ಬಳಕೆ ಮಾಡಿಕೊಳ್ಳುತ್ತಿವೆ. ಆದರೆ ನದಿ ದಿನೇ ದಿನೇ ಬತ್ತುತ್ತಿರುವುದರಿಂದ ಸಿಮೆಂಟ್‌ ಕಂಪನಿಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಇದರಿಂದ ಕಂಪನಿ ನೌಕರರು ದಿನ ಬಳಕೆ, ಕುಡಿಯುವ ನೀರಿಗಾಗಿ ತೊಂದರೆ ಪಡಬೇಕಾಗಿದೆ.

ಮುಲ್ಲಾಮಾರಿ ನದಿ ನೀರಿಲ್ಲದೇ ಬತ್ತುತ್ತಿದೆ. ನದಿ ಪಾತ್ರದ ಗ್ರಾಮಸ್ಥರು, ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆ ಉಂಟಾಗಿದೆ. ಅನೇಕ ಗ್ರಾಮಸ್ಥರು ನದಿಗೆ ನೀರು ಹರಿ ಬಿಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಕುರಿತು ಶಾಸಕರು, ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ಆದೇಶ ನೀಡಿದ ತಕ್ಷಣವೇ ಮುಲ್ಲಾಮಾರಿ ನದಿಗೆ ನೀರು ಹರಿದು ಬಿಡಲಾಗುವುದು. .ಹಣಮಂತರಾವ್‌ ಪೂಜಾರಿ,
ಎಇಇ, ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ

ಮುಲ್ಲಾಮಾರಿ ನದಿ ಬೇಸಿಗೆ ದಿನಗಳಲ್ಲಿ ಬತ್ತುತ್ತಿದೆ. ಕೆಳದಂಡೆ ಮುಲ್ಲಾಮಾರಿ ನದಿಯಿಂದ ಕೂಡಲೇ ನೀರು ಹರಿ ಬಿಡಬೇಕು. ಇಲ್ಲದಿದ್ದರೆ ಯೋಜನೆ ಬಳಿ ಪ್ರತಿಭಟನೆ, ಸತ್ಯಾಗ್ರಹ ನಡೆಸಲಾಗುವುದು.
ಭೀಮಶೆಟ್ಟಿ ಎಂಪಳ್ಳಿ,
ರೈತ ಸಂಘದ ಜಿಲ್ಲಾಧ್ಯಕ್ಷ

„ಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next